Advertisement

ದ್ವಿಕ್ಷೇತ್ರ ಸ್ಪರ್ಧೆ ಬೇಡ: ಸು.ಕೋಗೆ ಚುನಾವಣಾ ಆಯೋಗದಿಂದ ಅಫಿದವಿತ್‌

06:00 AM Apr 05, 2018 | Team Udayavani |

ಹೊಸದಿಲ್ಲಿ /ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕಾವೇರುತ್ತಿರುವ ಬೆನ್ನಲ್ಲೇ ಓರ್ವ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಅಫಿದವಿತ್‌ ಸಲ್ಲಿಸಿರುವ ಕೇಂದ್ರ ಚುನಾವಣಾ ಆಯೋಗವು ದ್ವಿಕ್ಷೇತ್ರ ಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದಿದೆ.

Advertisement

ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿ ಸುವ ಪ್ರಸ್ತಾವ ಹಲವು ವರ್ಷಗಳಿಂದ ಚರ್ಚೆ ಯಲ್ಲಿತ್ತು. ಕರ್ನಾಟಕದಲ್ಲಿ ಮೇ 12ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತ್ತೆ ಈ ವಿಚಾರ ಜೀವ ಪಡೆದುಕೊಂಡಿದೆ. ಆದರೆ ಕೋರ್ಟ್‌ ಅರ್ಜಿ ವಿಚಾರಣೆಯನ್ನು ಜುಲೈಯಲ್ಲಿ ನಡೆಸಲಿದ್ದು, ಕರ್ನಾಟಕ ವಿಧಾನಸಭೆಗೆ ಈ ಬೆಳವಣಿಗೆಯ ಬಿಸಿ ತಟ್ಟುವುದು ದೂರದ ಮಾತು.

ಯಾಕೆ ಈ ಅಫಿದವಿತ್‌?: ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿ ಸ್ಪರ್ಧಿಸುವುದರಿಂದ ಚುನಾವಣಾ ಆಯೋಗಕ್ಕೆ ಅನಗತ್ಯ ವೆಚ್ಚ ಉಂಟಾಗುತ್ತದೆ. ಎರಡೂ ಕ್ಷೇತ್ರಗಳಲ್ಲಿ ಗೆದ್ದಾಗ ಒಂದು ಕ್ಷೇತ್ರಕ್ಕೆ ಅಭ್ಯರ್ಥಿ ರಾಜೀನಾಮೆ ನೀಡ ಬೇಕಾಗುತ್ತದೆ. ಇದರಿಂದ ಮತದಾರರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿದವಿತ್‌ನಲ್ಲಿ ಉಲ್ಲೇಖೀಸಿದೆ. ಒಂದೊಮ್ಮೆ, ಅವಕಾಶ ನೀಡಿದಲ್ಲಿ ಯಾವುದೇ ಒಂದು ಕ್ಷೇತ್ರದಲ್ಲಿ ರಾಜೀನಾಮೆ ನೀಡುವ ಅಭ್ಯರ್ಥಿಯೇ ಮರುಚುನಾವಣೆಯ ವೆಚ್ಚ ಭರಿಸಬೇಕು ಎಂದೂ ಹೇಳಿದೆ. ಹಿಂದಿನಿಂದಲೂ ಈ ವಿಚಾರವನ್ನು ಆಯೋಗ ಹೇಳುತ್ತಲೇ ಬಂದಿದ್ದು, 2004ರಲ್ಲಿ ಮೊದಲ ಬಾರಿಗೆ ಕೇಂದ್ರ ಸರಕಾರಕ್ಕೆ ತನ್ನ ಅಭಿ ಪ್ರಾಯ ಮಂಡಿಸಿತ್ತು. ಅನಂತರ 2016ರಲ್ಲೂ ಮತ್ತೆ ಪ್ರಸ್ತಾವನೆ ಮುಂದಿಟ್ಟಿತ್ತು. ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದು ಇದಕ್ಕೆ ನಿಷೇಧ ಹೇರಬೇಕು ಎಂದು ಚುನಾವಣಾ ಆಯೋಗ ಅಂದು ಸರಕಾರಕ್ಕೆ ಮನವಿ ಮಾಡಿತ್ತು.

2017ರ ಡಿಸೆಂಬರ್‌ನಲ್ಲಿ ಸುಪ್ರೀಂ  ಕೋರ್ಟ್‌ ನ್ಯಾಯವಾದಿ ಹಾಗೂ ಬಿಜೆಪಿ ಮುಖಂಡ ಅಶ್ವಿ‌ನಿ ಉಪಾಧ್ಯಾಯ ಈ ಸಂಬಂಧ ಅರ್ಜಿ ಸಲ್ಲಿಸಿದ್ದರು. ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಸ್ಪರ್ಧಿಸುವುದನ್ನು ನಿಷೇಧಿಸಿ ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ಸೂಚಿಸಬೇಕು ಎಂದು ಸುಪ್ರೀಂಗೆ ಆಗ್ರಹಿಸಿದ್ದರು. ಈ ಬಗ್ಗೆ ಸುಪ್ರೀಂ ಕೋರ್ಟ್‌, ಚುನಾವಣಾ ಆಯೋಗ ಹಾಗೂ ಕೇಂದ್ರ ಸರಕಾರಕ್ಕೆ ತನ್ನ ಅಭಿಪ್ರಾಯ ತಿಳಿಸುವಂತೆ ಸೂಚಿಸಿತ್ತು. ಹೀಗಾಗಿ ಆಯೋಗ ಈಗ ಅಫಿದವಿತ್‌ ಸಲ್ಲಿಸಿದೆ. ಸುಪ್ರೀಂ ಕೋರ್ಟ್‌ ಜುಲೈಯಲ್ಲಿ ಅರ್ಜಿ ವಿಚಾರಣೆ ನಡೆಸಲಿದೆ.

ಕೇಂದ್ರ ಸರಕಾರ ಹೇಳುವುದೇನು?: ಕೇಂದ್ರ 
ಸರಕಾರದ ಪರ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಕೋರ್ಟ್‌ಗೆ ಹಾಜರಾಗಿ ದ್ದರೂ ಅಭಿಪ್ರಾಯವನ್ನು ಮಂಡಿಸಲಿಲ್ಲ. ಇದ ಕ್ಕಾಗಿ ಕಾಲಾವಕಾಶ ಕೇಳಿದ್ದಾರೆ. ಸದ್ಯಕ್ಕೆ ಸರಕಾರದ ನಿಲುವು ಇನ್ನೂ ರೂಪುಗೊಂಡಂತಿಲ್ಲ.

Advertisement

ಬಿಜು ಮೂರು ಕಡೆ ಸ್ಪರ್ಧಿಸಿದ್ದರು!: ಪ್ರಸ್ತುತ ಕಾಯ್ದೆಯ ಪ್ರಕಾರ ಲೋಕಸಭೆ ಚುನಾವಣೆಯಲ್ಲಾಗಲಿ ಅಥವಾ  ವಿಧಾನಸಭೆ ಚುನಾವಣೆಯಲ್ಲಾಗಲಿ ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಗೆ ಸ್ಪರ್ಧಿಸಬಹುದಾಗಿದೆ. ಈ ಹಿಂದೆ 1971ರಲ್ಲಿ ನಾಲ್ಕು ವಿಧಾನಸಭೆ ಹಾಗೂ ಒಂದು ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿದ ದಾಖಲೆಯನ್ನು ಒಡಿಶಾದ ಬಿಜು ಪಟ್ನಾಯಕ್‌ ಹೊಂದಿದ್ದಾರೆ. ಇನ್ನೊಂದೆಡೆ ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಎನ್‌.ಟಿ.ರಾಮರಾವ್‌ ಈ ಕಾಯ್ದೆ ದುರುಪಯೋಗಪಡಿಸಿಕೊಂಡ ಉದಾಹರಣೆಯೂ ಇದೆ. 1983ರಲ್ಲಿ ಗುಡಿವಾಡ ಹಾಗೂ ತಿರುಪತಿಯಲ್ಲಿ ಸ್ಪರ್ಧಿಸಿದ್ದ ಅವರು, ಅನಂತರ 1985ರ ಚುನಾವಣೆಯಲ್ಲಿ ಗುಡಿವಾಡ, ಹಿಂದೂಪುರ ಹಾಗೂ ನಲಗೊಂಡ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಬಳಿಕ ಹಿಂದೂಪುರವನ್ನು ಉಳಿಸಿಕೊಂಡು ಇತರ ಎರಡು ಕ್ಷೇತ್ರಗಳಿಗೆ ರಾಜೀನಾಮೆ ನೀಡಿದ್ದರು.

ಎರಡು ಕ್ಷೇತ್ರಗಳಲ್ಲಿ  ಸ್ಪರ್ಧಿಸಿದ ಪ್ರಮುಖರು
ನರೇಂದ್ರ ಮೋದಿ – 2014   – ವಾರಾಣಸಿ ಮತ್ತು ವಡೋದರಾ
ಇಂದಿರಾ ಗಾಂಧಿ – 1980 – ಮೇಧಕ್‌ ಮತ್ತು ರಾಯ್‌ಬರೇಲಿ
ಸೋನಿಯಾ ಗಾಂಧಿ – 1999 – ಅಮೇಥಿ ಮತ್ತು ಬಳ್ಳಾರಿ

ಯಾಕಾಗಿ ಸ್ಪರ್ಧೆ?
 ನಾಯಕರು ತಮ್ಮ ವರ್ಚಸ್ಸನ್ನು ಬೇರೆ ಭಾಗದಲ್ಲಿಯೂ ಬೆಳೆಸಿಕೊಳ್ಳಲು ಇಂಥ ನಿರ್ಧಾರ.
 ನಿಗದಿತ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಸಿ, ಸ್ಥಳೀಯವಾಗಿ ಪಕ್ಷದ ಹುರಿಯಾಳುಗಳನ್ನು ಗೆಲ್ಲಿಸುವ ದೂರಾಲೋಚನೆ.
 ಕೆಲವೊಮ್ಮೆ ಸೋಲಿನ ಭೀತಿಯಿಂದ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಒಂದರಲ್ಲಾದರೂ ಗೆಲ್ಲಬಹುದು ಎಂಬ ಲೆಕ್ಕಾಚಾರ.
 ಕ್ಷೇತ್ರ ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಇಂಥ ಪ್ರಯತ್ನ ಮಾಡಿ, ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸುವ ಉದ್ದೇಶ.
 ಇತರ ಕ್ಷೇತ್ರಗಳಲ್ಲಿ ಮತಗಳನ್ನು ಒಡೆದು ಪ್ರತಿಸ್ಫರ್ಧಿಯನ್ನು ಸೋಲಿಸುವ ಉದ್ದೇಶದಿಂದಲೂ ಕಣಕ್ಕಿಳಿಯುವ ಸಾಧ್ಯತೆ.

ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ನಾಯಕರು
ರಾಜ್ಯದಲ್ಲಿ ಇದುವರೆಗೆ ಏಕಕಾಲದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿದವರು ಮೂರು ಮಂದಿ ಮಾತ್ರ. ಅದರಲ್ಲೂ ಎರಡು ಕ್ಷೇತ್ರದಲ್ಲಿ ಗೆದ್ದವರು ಒಬ್ಬರೆ. 1989ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಪ್ರಾಂತದ ರೈತ ಸಂಘದ ಬಾಬಾಗೌಡ ಆರ್‌.ಪಾಟೀಲ್‌ ಮತ್ತು ಆಗಿನ ಜನತಾ ಪಕ್ಷದಿಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಕಿತ್ತೂರು ಮತ್ತು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಾಬಾಗೌಡ ಪಾಟೀಲ್‌ ಎರಡೂ ಕ್ಷೇತ್ರಗಳಲ್ಲಿ ಗೆದ್ದರಾದರೂ, ಅನಂತರದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರವನ್ನು ಎಂ.ಡಿ.ನಂಜುಂಡಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದರು. ಹೊಳೇನರಸೀಪುರ ಮತ್ತು ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ದೇವೇಗೌಡರು ಎರಡೂ ಕಡೆ ಸೋಲನುಭವಿಸಿದ್ದರು.

1994ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ತೊರೆದು ಕೆಸಿಪಿ ಸ್ಥಾಪಿಸಿದ್ದ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರು ಸೊರಬ ಮತ್ತು ಸಾಗರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಈ ಪೈಕಿ ಸೊರಬದಲ್ಲಿ ಗೆದ್ದರೆ, ಸಾಗರದಲ್ಲಿ ಸೋತಿದ್ದರು. ಪ್ರಸ್ತುತ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ರಾಮನಗರ ಮತ್ತು ಚೆನ್ನಪಟ್ಟಣ ಕ್ಷೇತ್ರಗಳಿಂದ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ.

ಜಾರಿ ಹೇಗೆ?
ಒಂದು ವೇಳೆ ವಿಚಾರಣೆ ನಡೆದು ಒಂದೇ ಕ್ಷೇತ್ರದಲ್ಲಿ ಇಬ್ಬರು ಸ್ಪರ್ಧಿಸುವುದನ್ನು ಸುಪ್ರೀಂ ಕೋರ್ಟ್‌ ನಿಷೇಧಿಸಿದರೆ ಜನಪ್ರತಿನಿಧಿ ಕಾಯ್ದೆಗೆ ಕೇಂದ್ರ ಸರಕಾರ ತಿದ್ದುಪಡಿ ಮಾಡಬೇಕಾಗುತ್ತದೆ. ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಅನುಮೋದನೆ ಪಡೆದು ಕಾನೂನು ತಿದ್ದುಪಡಿ ಮಾಡಬೇಕಾಗುತ್ತದೆ. ಅಲ್ಲಿಯವರೆಗೆ ಪ್ರಸ್ತುತ ನೀತಿಯೇ ಮುಂದುವರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next