ನವದೆಹಲಿ:ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಪ್ರಚಂಡ ಜಯಭೇರಿ ಗಳಿಸಿದೆ. ಆದರೆ ನಂದಿಗ್ರಾಮದಲ್ಲಿ ಸ್ವತಃ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ತಮ್ಮ ಹಿಂದಿನ ಆಪ್ತ, ಬಿಜೆಪಿ ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದಾರೆ. ಏತನ್ಮಧ್ಯೆ ನಂದಿಗ್ರಾಮ ಕ್ಷೇತ್ರದಲ್ಲಿ ಮರು ಮತಎಣಿಕೆ ಮಾಡಬೇಕೆಂಬ ಟಿಎಂಸಿ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.
ಇದನ್ನೂ ಓದಿ:ಸಿದ್ದರಾಮಯ್ಯನವರೇ ಸ್ವಂತ ಪಕ್ಷಕ್ಕಾದರೂ ಮೋಸ ಮಾಡುವುದನ್ನು ಬಿಡಿ: ಕುಮಾರಸ್ವಾಮಿ
ಇವಿಎಂನಲ್ಲಿನ ಮತ ಹಾಗೂ ವಿವಿ ಪ್ಯಾಟ್ ಸ್ಲಿಪ್ಸ್ ಆಧರಿಸಿ ಚುನಾವಣಾ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಲಾಗಿದೆ ಎಂದು ರಿಟರ್ನಿಂಗ್ ಆಫೀಸರ್ ತಿಳಿಸಿದ್ದಾರೆ. ಭಾನುವಾರ(ಮೇ 02) ಸಂಜೆ ಪ್ರಕಟಗೊಂಡಿದ್ದ ಫಲಿತಾಂಶದಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಪ್ರತಿಸ್ಪರ್ಧಿ ಅಧಿಕಾರಿ ವಿರುದ್ಧ 1,736 ಮತಗಳ ಅಂತರದಿಂದ ಪರಾಜಯಗೊಂಡಿರುವುದಾಗಿ ತಿಳಿಸಿತ್ತು.
ಮತಎಣಿಕೆ ಪ್ರಕ್ರಿಯೆಯನ್ನು ಅಕ್ರಮ ಎಂದು ತೃಣಮೂಲ ಕಾಂಗ್ರೆಸ್ ಘೋಷಿಸಿದೆ. ಮತ್ತೊಂದೆಡೆ ಇದೊಂದು ಕಾನೂನು ಬಾಹಿರ ಫಲಿತಾಂಶವಾಗಿದ್ದು, ಈ ಬಗ್ಗೆ ಕೋರ್ಟ್ ಮೆಟ್ಟಿಲೇರುವುದಾಗಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಚುನಾವಣಾ ಮತಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ವಿಷಯ ನನಗೆ ತಿಳಿದು ಬಂದಿದ್ದು, ನಾನು ಕೋರ್ಟ್ ಗೆ ಹೋಗುತ್ತೇನೆ ಎಂದು ಬ್ಯಾನರ್ಜಿ ಹೇಳಿದ್ದಾರೆ.
ನಂದಿಗ್ರಾಮದ ಚುನಾವಣಾ ಫಲಿತಾಂಶದ ಲೆಕ್ಕಾಚಾರದ ವೇಳೆ ಆರಂಭಿಕವಾಗಿ ಮಮತಾ ಬ್ಯಾನರ್ಜಿ 1,200 ಮತಗಳಿಂದ ಗೆಲುವು ಸಾಧಿಸಿದ್ದರು ಎಂದು ತಿಳಿಸಿತ್ತು. ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿಯೂ ರಾತ್ರಿ 10.30ರವರೆಗೂ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಮುನ್ನಡೆ ಎಂದು ತೋರಿಸುತ್ತಿತ್ತು. ಆದರೆ ಮಮತಾ ಬ್ಯಾನರ್ಜಿ ಸುವೇಂದು ಅಧಿಕಾರಿ ವಿರುದ್ಧ 1,700 ಮತಗಳ ಅಂತರದಿಂದ ಸೋತಿರುವುದಾಗಿ ಚುನಾವಣಾಧಿಕಾರಿ ಘೋಷಿಸಿರುವುದು ಗೊಂದಲಕ್ಕೆ ಎಡೆಮಾಡಿಕೊಟ್ಟಿತ್ತು.