Advertisement

17 ವರ್ಷಕ್ಕೇ ವೋಟರ್‌ ಲಿಸ್ಟ್‌ಗೆ ಸೇರಿ! ವರ್ಷಕ್ಕೆ ನಾಲ್ಕು ಬಾರಿ ಅವಕಾಶ ನೀಡಿದ ಚು.ಆಯೋಗ

08:40 PM Nov 09, 2022 | Team Udayavani |

ಬೆಂಗಳೂರು: ಇನ್ನು ಮುಂದೆ 17 ವರ್ಷ ದಾಟಿದವರೂ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಕೆ ಮಾಡಬಹುದು! ಆದರೆ, ಮತಹಾಕಲು ಸಾಧ್ಯವಾಗುವುದು ಮಾತ್ರ 18 ವರ್ಷ ತುಂಬಿದ ಮೇಲೆಯೇ.

Advertisement

ಹೌದು, ರಾಜ್ಯ ಚುನಾವಣಾ ಆಯೋಗ ಇಂಥದ್ದೊಂದು ಅವಕಾಶ ಮಾಡಿಕೊಟ್ಟಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಸೌಲಭ್ಯವನ್ನು ಒದಗಿಸಿಕೊಡಲಾಗಿದೆ.

ಈ ಹಿಂದೆ ಮತದಾರರ ಪಟ್ಟಿ ಪರಿಷ್ಕರಣೆಯ ಅವಧಿಯಲ್ಲಿ ಆ ವರ್ಷದ ಜ.5ರೊಳಗೆ 18 ವರ್ಷ ತುಂಬಿದವರು ಮಾತ್ರ ಹೆಸರು ನೋಂದಾಯಿಸಿಕೊಳ್ಳಬಹುದಾಗಿತ್ತು. ಈಗ ಇದನ್ನು ಬದಲಿಸಿ, 17 ತುಂಬಿದವರಿಗೂ ಅವಕಾಶ ನೀಡಲಾಗಿದೆ.

ನಾಲ್ಕು ದಿನಾಂಕ
ಇದುವರೆಗೆ ವರ್ಷಕ್ಕೊಮ್ಮೆ ಮಾತ್ರ ಮತದಾರರ ಪಟ್ಟಿ ಪರಿಷ್ಕರಣೆಯಾಗುತ್ತಿತ್ತು. ಇನ್ನು ಮುಂದೆ ವರ್ಷಕ್ಕೆ ನಾಲ್ಕು ಬಾರಿ ಪರಿಷ್ಕರಣೆಯಾಗಲಿದೆ. ಅದರಂತೆ ಜ.1, ಏ. 1, ಜು. 1 ಹಾಗೂ ಅ. 1 ಅರ್ಹತಾ ದಿನಾಂಕಗಳು ಇರಲಿವೆ. ಈ ಅರ್ಹತಾ ದಿನಾಂಕಗಳಂದು 18 ವರ್ಷಗಳನ್ನು ಪೂರ್ಣಗೊಳಿಸುವ ಮತದಾರರನ್ನು ಮತದಾರ ಪಟ್ಟಿಗೆ ಸೇರಿಸಲಾಗುವುದು. ಆ ಪ್ರಕಾರ 17 ವರ್ಷ ದಾಟಿದವರು ನ.9ರಿಂದ ಅರ್ಜಿ ನಮೂನೆ 6 ಮೂಲಕ ಮುಂಗಡ ಅರ್ಜಿಗಳನ್ನು ಸಲ್ಲಿಸಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

5.09 ಕೋಟಿ ಮತದಾರರು
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನೂ ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ಸದ್ಯ ರಾಜ್ಯದಲ್ಲಿ 5.09 ಕೋಟಿ ಮತದಾರರಿದ್ದಾರೆ. ಪರಿಷ್ಕರಣೆ ವೇಳೆ 27 ಲಕ್ಷ ಮತದಾರರನ್ನು ತೆಗೆದುಹಾಕಲಾಗಿದೆ.

Advertisement

ಅದರಂತೆ, 2.56 ಕೋಟಿ ಪುರುಷ ಹಾಗೂ 2.52 ಮಹಿಳೆಯರು ಸೇರಿ 5.08 ಕೋಟಿ ಸಾಮಾನ್ಯ ಮತದಾರರಿದ್ದು, 47,817 ಸೇವಾ ಮತದಾರರು ಸೇರಿದರೆ ರಾಜ್ಯದ ಒಟ್ಟು ಮತದಾರರ ಸಂಖ್ಯೆ 5.09 ಕೋಟಿ ಇದ್ದಾರೆ ಎಂದು ಮನೋಜ್‌ ಕುಮಾರ್‌ ಮೀನಾ ಹೇಳಿದರು.

ಯಾರನ್ನು ತೆಗೆದದ್ದು?
ರಾಜ್ಯದಲ್ಲಿ 2022ರ ಅಂತಿಮ ಮತದಾರರ ಪಟ್ಟಿಯ ಪ್ರಕಾರ ಒಟ್ಟು 5.25.55,500 ಮತದಾರರು ಇದ್ದು, ಪೂರ್ವ ಪರಿಷ್ಕರಣಾ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚಿರುವ ಒಂದೇ ಬಗೆಯ ಫೋಟೋ, ಎರಡು ಬಾರಿಯ ಸೇರ್ಪಡೆ, ಮೃತ ಮತದಾರರು, ಸ್ಥಳಾಂತರಗೊಂಡ ಮತದಾರರು, ಗೈರು ಹಾಜರು ಇತ್ಯಾದಿ ಮತದಾರರನ್ನು ತೆಗೆದು ಹಾಕಿ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಮೂಲಕ 2023ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಆಕ್ಷೇಪಣೆ ಸಲ್ಲಿಸಲು ನ.9ರಿಂದ ಡಿ.8ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಡಿ.26ಕ್ಕೆ ವಿಲೇವಾರಿ ಮಾಡಲಾಗುತ್ತದೆ. ನ.12 ಮತ್ತು 20 ಹಾಗೂ ಡಿ.3 ಮತ್ತು 4ರಂದು ನಾಲ್ಕು ದಿನಗಳ ವಿಶೇಷ ಅಭಿಯಾನ ನಡೆಸಲಾಗುತ್ತದೆ. ಈ ಅವಧಿಯಲ್ಲಿ ಹೊಸ ಹೆಸರು ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ ಇತ್ಯಾದಿಗಳಿಗೆ ಅವಕಾಶ ಇರಲಿದೆ ಎಂದು ಮಾಹಿತಿ ನೀಡಿದರು.

ಕರಡು ಮತದಾರರ ಪಟ್ಟಿ
ಪುರುಷರು: 2,56,85,954
ಮಹಿಳೆಯರು: 2,52,11,218
ಇತರರು: 4,490
ಒಟ್ಟು: 5,09,01,662
ಹೊಸ ಮತದಾರರು: 11,13,063
ತೆಗೆದು ಹಾಕಲಾದ ಹೆಸರುಗಳು: 27,08,947
ಅತಿ ಹೆಚ್ಚು ಮತದಾರರು: 6,41,446 (ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ)
ಅತಿ ಕಡಿಮೆ ಮತದಾರರು: 1,65,485 (ಶೃಂಗೇರಿ)

6.97 ಲಕ್ಷ ಯುವ ಮತದಾರರು
ಪ್ರಸ್ತಾಪಿತ ಕರಡು ಮತದಾರರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ ಒಟ್ಟು ಯುವ ಮತದಾರರ ಸಂಖ್ಯೆ 6,97,784 ಇದೆ. ಕಳೆದ ಬಾರಿಯ 2022ರ ಅಂತಿಮ ಮತದಾರರ ಪಟ್ಟಿಯಲ್ಲಿ 4,01,924 ಸಂಖ್ಯೆಗೆ ಹೋಲಿಸಿದರೆ ಯುವ ಮತದಾರರ ಸಂಖ್ಯೆ 2,95860 ಏರಿಕೆಯಾಗಿದೆ.

ಶೇ.68ರಷ್ಟು ಆಧಾರ್‌ ಲಿಂಕ್‌
ನಮ್ಮ ರಾಜ್ಯದಲ್ಲಿ ಶೇ.68 ಆಧಾರ್‌ ಜೋಡಣೆ ಆಗಿದೆ. ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಶೇ.99 ಆಧಾರ್‌ ಜೋಡಣೆ ಆಗಿದ್ದರೆ, ಬೆಂಗಳೂರು ನಗರ ಜಿಲ್ಲೆಯ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.28ರಷ್ಟು ಆಧಾರ್‌ ಜೋಡಣೆ ಆಗಿದೆ. 2023ರ ಮಾ.31ಕ್ಕೆ ಶೇ.100ರಷ್ಟು ಆಧಾರ್‌ ಜೋಡಣೆ ಮಾಡುವ ಗುರಿ ಇದೆ ಎಂದು ಮನೋಜ್‌ ಕುಮಾರ್‌ ಮೀನಾ ಸ್ಪಷ್ಟಪಡಿಸಿದರು. ಈ ಮಧ್ಯೆ, ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್‌ ಕಾರ್ಡ್‌ ಜೋಡಣೆ ಕಡ್ಡಾಯವಲ್ಲ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next