Advertisement

ಸಖೀಯರೇ ಬನ್ನಿ, ನಿಮಗಿದೆ ಈ ಬಾರಿ ಸಖೀ ಮತಗಟ್ಟೆ

06:25 AM Apr 05, 2018 | Team Udayavani |

ಮಹಿಳೆಯರ ಸಬಲೀಕರಣ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಮಹತ್ತರ ಉದ್ದೇಶದಿಂದ ಚುನಾವಣಾ ಆಯೋಗ “ಸಖೀ’ ಹೆಸರಿನ ಪಿಂಕ್‌ ಮತಗಟ್ಟೆಗಳನ್ನು ಸ್ಥಾಪಿಸುತ್ತಿದೆ. ವಿಶೇಷವೆಂದರೆ, ಈ ಮತಗಟ್ಟೆಗಳಲ್ಲಿ ಎಲ್ಲ ಸಿಬ್ಬಂದಿ ಮಹಿಳೆಯರೇ ಆಗಿರುತ್ತಾರೆ.

Advertisement

ಬೆಂಗಳೂರು: “ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆ’ ಇದು ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಕೊಟ್ಟಿರುವ ಘೋಷ ವಾಕ್ಯ. ಅದಕ್ಕೆ ತಕ್ಕಂತೆ ಸಿದ್ಧತೆ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಇದೇ ಮೊದಲ ಬಾರಿಗೆ ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.

ಒಟ್ಟು ಮತದಾರರಲ್ಲಿ ಶೇ.50ರ ಅಸುಪಾಸಿನಲ್ಲಿ ಮಹಿಳಾ ಮತದಾರರಿದ್ದಾರೆ. ಮಹಿಳೆಯರ ಸಬಲೀಕರಣ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ “ಮಹಿಳೆಯರಿಂದ, ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ’ ಎಂಬ ಕಲ್ಪನೆಯಲ್ಲಿ “ಸಖೀ’ ಹೆಸರಿನ ಪಿಂಕ್‌ ಮತಗಟ್ಟೆಗಳನ್ನು ಚುನಾವಣಾ ಆಯೋಗ ಸ್ಥಾಪಿಸುತ್ತಿದೆ.

ಈ ಸಖೀ ಮತಗಟ್ಟೆಗಳಲ್ಲಿ ಎಲ್ಲ ಸಿಬ್ಬಂದಿ ಮಹಿಳೆಯರೇ ಆಗಿರುತ್ತಾರೆ. ಚುನಾವಣಾಧಿಕಾರಿ,ಮತಗಟ್ಟೆ ಆಧಿಕಾರಿ, ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಹೀಗೆ ಎಲ್ಲರೂ ಮಹಿಳೆಯರೇ ಇರುತ್ತಾರೆ. ಒಟ್ಟು 450 ಮಹಿಳಾ ಮತಗಟ್ಟೆ ಸ್ಥಾಪಿಸುವ ಉದ್ದೇಶವಿದ್ದು, ಪ್ರಾಯೋಗಿಕವಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಒಂದರಂತೆ ಒಟ್ಟು
224 ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಇದರ ಪ್ರಚಾರ ಸಂದೇಶ ಹೊಂದಿರುವ ವಿಡಿಯೋ ಅನ್ನು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‌ ರಾವತ್‌ ಬುಧವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.

ವಿಶಿಷ್ಟ ಚೇತನರಿಗೆ ಆದ್ಯತೆ: ಅದೇ ರೀತಿ ವಿಶಿಷ್ಟ ಚೇತನ ಮತದಾರರಿಗೆ ಈ ಬಾರಿ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಪ್ರತಿ ಮತಗಟ್ಟೆಯಲ್ಲಿ ಗಾಲಿ ಕುರ್ಚಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗುತ್ತದೆ. ಯಾವುದಾದರೂ ಮತಗಟ್ಟೆ ವ್ಯಾಪ್ತಿಯಲ್ಲಿ ವಿಶಿಷ್ಟ ಚೇತನ ಮತದಾರರ ಸಂಖ್ಯೆ ಹೆಚ್ಚಿದ್ದರೆ, ಅದಕ್ಕೆ ತಕ್ಕಂತೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

Advertisement

ತಾತ್ಕಾಲಿಕ ರ್‍ಯಾಂಪ್‌ಗ್ಳ ನಿರ್ಮಾಣ, ವಿಶಿಷ್ಟ ಚೇತನರನ್ನು ಹೆಚ್ಚು ಸಮಯ ಸರತಿ ಸಾಲಿನಲ್ಲಿ ನಿಲ್ಲಲು ಅವಕಾಶ ಕೊಡದಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದೂ ಸೇರಿ ಎಲ್ಲ ರೀತಿಯ ನೆರವು ಒದಗಿಸಲಾಗುತ್ತದೆ. ಈ ರೀತಿ ವಿಶಿಷ್ಟ ಚೇತನರಲ್ಲಿ ಆತ್ಮವಿಶ್ವಾಸ ತುಂಬುವ ಮತ್ತು ಉತ್ತೇಜನ ಕೊಡಲು ಸಿದ್ಧಪಡಿಸಿರುವ ವಿಡಿಯೋವನ್ನು ಕೂಡ ಚುನಾವಣಾ ಆಯುಕ್ತರು ಬಿಡುಗಡೆ ಮಾಡಿದರು.

ಆದಿವಾಸಿ ಮತ್ತು ಬುಡಕಟ್ಟು ಜನಾಂಗಗಳನ್ನು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚು ಪಾಲ್ಗೊಳ್ಳುವಂತೆ ಮಾಡಿ ಅವರನ್ನೂ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಆದಿವಾಸಿ, ಬುಡಕಟ್ಟು ಜನಾಂಗಗಳು ವಾಸಿಸುವ ಪ್ರದೇಶಗಳಲ್ಲಿ ಆ ಜನಾಂಗಗಳ ಜೀವನ ಶೈಲಿ, ಆಚರಣೆ ಮತ್ತು ಸಂಪ್ರದಾಯಗಳನ್ನು ಆಧರಿಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಅಷ್ಟೇ ಅಲ್ಲ, ಆ ಪ್ರದೇಶಗಳಲ್ಲಿ ಸ್ಥಾಪಿಸುವ ಮತಗಟ್ಟೆಗಳಲ್ಲಿ ಆದಿವಾಸಿ, ಬುಡಕಟ್ಟು ಜನಾಂಗಗಳ ಸಂಸ್ಕೃತಿಯನ್ನು ಬಿಂಬಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next