Advertisement

ತಪ್ಪು ಲೆಕ್ಕ ಕೊಟ್ಟ ತಪ್ಪಿಗೆ ತಲೆದಂಡ: ಬಿಜೆಪಿ ಸಚಿವ ಮಿಶ್ರಾ ಅನರ್ಹ

03:45 AM Jun 25, 2017 | |

ಭೋಪಾಲ್‌/ನವದೆಹಲಿ: ಮಧ್ಯಪ್ರದೇಶದಲ್ಲಿನ ಆಡಳಿತಾರೂಢ ಬಿಜೆಪಿ ಮತ್ತು ದೆಹಲಿಯಲ್ಲಿರುವ ಆಮ್‌ ಆದ್ಮಿ ಪಕ್ಷದ ಸರ್ಕಾರಗಳಿಗೆ ಶನಿವಾರ ಭಾರೀ ಹಿನ್ನಡೆಯಾಗಿದೆ. 

Advertisement

ಚುನಾವಣೆಗೆ ಸಂಬಂಧಿಸಿದ ವೆಚ್ಚದ ಬಗ್ಗೆ ತಪ್ಪು ಮಾಹಿತಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ಸರ್ಕಾರದಲ್ಲಿನ ಹಿರಿಯ ಸಚಿವ ನರೋತ್ತಮ್‌ ಮಿಶ್ರಾರನ್ನು ಮೂರು ವರ್ಷಗಳ ಕಾಲ ಅನರ್ಹಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. 

ಜತೆಗೆ, ದಾಟಿಯಾ ಕ್ಷೇತ್ರದಿಂದ ಅವರ ಆಯ್ಕೆಯನ್ನೂ ಆಯೋಗ ಅಸಿಂಧು ಎಂದು ಘೋಷಿಸಿದೆ. ಇನ್ನು ದೆಹಲಿಯ ಆಪ್‌ನ 21 ಶಾಸಕರು ಹೊಂದಿರುವ ಸಂಸದೀಯ ಕಾರ್ಯದರ್ಶಿ ಹುದ್ದೆಗಳ ಬಗ್ಗೆ ಎದ್ದಿರುವ ವಿವಾದದ ಬಗ್ಗೆ ದೆಹಲಿ ಹೈಕೋರ್ಟ್‌ ಆದೇಶದ ಹೊರತಾಗಿಯೂ ವಿಚಾರಣೆ ಮುಂದುವರಿಯಲಿದೆ ಎಂದು ಆಯೋಗ ಸ್ಪಷ್ಟನೆ ನೀಡಿದೆ.

ಮೂರು ವರ್ಷ ಅನರ್ಹ: 2008ರಲ್ಲಿ ನಡೆದ ಚುನಾವಣೆಯಲ್ಲಿ ಮಧ್ಯಪ್ರದೇಶದ ದಾಟಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ನರೋತ್ತಮ್‌ ಮಿಶ್ರಾ ವೆಚ್ಚದ ಬಗ್ಗೆ ಕೆಲವೊಂದು ಮಾಹಿತಿ ನೀಡಿರಲಿಲ್ಲ ಎಂದು ಆರೋಪಿಸಲಾಗಿತ್ತು. ಮಿಶ್ರಾ ಚೌಹಾಣ್‌ ಸಂಪುಟದಲ್ಲಿ ನಂ.2 ಎಂದೇ ಪರಿಗಣಿತರಾಗಿದ್ದಾರೆ. ಕಾಂಗ್ರೆಸ್‌ ನಾಯಕ ರಾಜೇಂದ್ರ ಭಾರ್ತಿ ಅವರು ನರೋತ್ತಮ್‌ ಮಿಶ್ರಾ ವಿರುದ್ಧ ಆರೋಪ ಹೊರಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ತಕ್ಷಣದಿಂದಲೇ ಜಾರಿಯಾಗುವಂತೆ ಈ ಆದೇಶ ಹೊರಬಿದ್ದಿದ್ದು, ಕ್ಷೇತ್ರದ ಚುನಾವಣೆ ಕೂಡ ಅಸಿಂಧುವಾಗಿದೆ. ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಹೋಗುವುದಾಗಿ ಮಿಶ್ರಾ ಹೇಳಿದ್ದಾರೆ. ಇದೇ ವೇಳೆ ಮಿಶ್ರಾ ಅವರ ರಾಜೀನಾಮೆಗೆ ಕಾಂಗ್ರೆಸ್‌ ಮತ್ತು ಆಪ್‌ ಒತ್ತಾಯಿಸಿವೆ.

Advertisement

ಯಾರಿವರು ನರೋತ್ತಮ್‌ ಮಿಶ್ರಾ?
ಸದ್ಯ  ಚೌಹಾಣ್‌ ಸಂಪುಟದಲ್ಲಿ ಜಲಸಂಪನ್ಮೂಲ, ಸಂಸದೀಯ ವ್ಯವಹಾರಗಳು, ಸಾರ್ವಜನಿಕ ಸಂಪರ್ಕ ಖಾತೆ ಸಚಿವ.  1990ರಲ್ಲಿ ಅವರು ಮೊದಲ ಬಾರಿಗೆ ಚುನಾವಣೆ ಗೆದ್ದರು. 1998 ಮತ್ತು 2003ರ ಚುನಾವಣೆಯಲ್ಲಿಯೂ ಅವರು ದಾಟಿಯಾ ಕ್ಷೇತ್ರದಿಂದ ಜಯಿಸಿದ್ದರು. 2005ರಲ್ಲಿ ಬಾಬು ಲಾಲ್‌ ಗೌರ್‌ ಸರ್ಕಾರದಲ್ಲಿ ಮಿಶ್ರಾ ಮೊದಲ ಬಾರಿಗೆ ಸಚಿವರಾದರು.ಶಿವರಾಜ್‌ ಸಿಂಗ್‌ ಚೌಹಾಣ್‌ ಸರ್ಕಾರದಲ್ಲೂ ಇವರು ಉತ್ತಮ ಸ್ಥಾನದಲ್ಲಿದ್ದಾರೆ.

ಆಪ್‌ ಶಾಸಕರಿಗೆ ರಿಲೀಫ್ ಇಲ್ಲ
ಸಂಸದೀಯ ಕಾರ್ಯದರ್ಶಿ ಹುದ್ದೆ ಬಿಟ್ಟರೂ ದೆಹಲಿಯ ಆಪ್‌ನ 21 ಶಾಸಕರಿಗೆ ವಿಚಾರಣೆಯ ಬಿಸಿ ತಪ್ಪಿಲ್ಲ. ಈಗಾಗಲೇ ದೆಹಲಿ ಹೈಕೋರ್ಟ್‌ ಈ ಎಲ್ಲ ಸಂಸದೀಯ ಕಾರ್ಯದರ್ಶಿ ಹುದ್ದೆಗಳನ್ನು ರದ್ದು ಮಾಡಿದೆ. ಹೀಗಿದ್ದರೂ, ವಿಚಾರಣೆ ಮುಂದುವರಿಸುವುದಾಗಿ ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಅಲ್ಲದೆ ಚುನಾವಣಾ ಆಯುಕ್ತ ನದೀಂ ಜೈದಿ ಅವರು ಮುಂದಿನ ತಿಂಗಳು ನಿವೃತ್ತರಾಗಲಿದ್ದು, ಇದಕ್ಕೂ ಮುನ್ನ ತೆಗೆದುಕೊಂಡ ಪ್ರಮುಖ ನಿರ್ಧಾರ ಇದಾಗಿದೆ. ಈ ಮಧ್ಯೆ, ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಆಪ್‌ ಆಯೋಗದ ಆದೇಶವನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗುತ್ತಿದೆ. ಅದರ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಆಪ್‌ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next