ನವದೆಹಲಿ: ಕರ್ನಾಟಕ ಬಿಜೆಪಿಯ ಆಕ್ಷೇಪಾರ್ಹ ಪೋಸ್ಟ್ ಅನ್ನು ತೆಗೆದುಹಾಕಲು ಚುನಾವಣಾ ಆಯೋಗವು ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ಎಕ್ಸ್ (ಟ್ವಿಟರ್) ಗೆ ಸೂಚಿಸಿದೆ. ಈ ಹಿಂದೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಆದೇಶ ನೀಡಿದ ನಂತರವೂ ಪಕ್ಷವು ಅದನ್ನು ತೆಗೆದುಹಾಕದ ಕಾರಣ ನೇರವಾಗಿ ಎಕ್ಸ್ ಗೆ ಸೂಚಿಸಲಾಗಿದೆ.
ಆಕ್ಷೇಪಾರ್ಹ ಪೋಸ್ಟ್ ಕುರಿತು ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ.
“ಈ ವಿಷಯದಲ್ಲಿ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಪೋಸ್ಟ್ ಅನ್ನು ಇನ್ನೂ ತೆಗೆದುಹಾಕಲಾಗಿಲ್ಲ” ಎಂದು ಚುನಾವಣಾ ಆಯೋಗ (ಇಸಿ) ಹೇಳಿಕೆಯಲ್ಲಿ ತಿಳಿಸಿದೆ.
ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗೆ ಕಾರಣವಾಗಬಹುದಾದ ಅವಹೇಳನಕಾರಿ ವಿಷಯವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಕರ್ನಾಟಕ ಬಿಜೆಪಿ ಮುಖ್ಯಸ್ಥ ಬಿವೈ ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಮೀಸಲಾತಿ ಮತ್ತು ನಿಧಿ ಹಂಚಿಕೆಯಲ್ಲಿ ಹಿಂದುಳಿದ ವರ್ಗಗಳಿಗಿಂತ ವಿರೋಧ ಪಕ್ಷವು ಮುಸ್ಲಿಮರಿಗೆ ಒಲವು ತೋರುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ವಿರುದ್ಧ ವಿಡಿಯೋದಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿತ್ತು.
ವೀಡಿಯೊವು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಪೊಲೀಸರು ಮತ್ತು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.
ಬಿಜೆಪಿಯು “ಗಲಭೆಗಳನ್ನು ಪ್ರಚೋದಿಸಲು ಮತ್ತು ದ್ವೇಷವನ್ನು ಉತ್ತೇಜಿಸಲು” ಬಯಸುತ್ತದೆ ಎಂದು ಇಸಿಗೆ ನೀಡಿದ ದೂರಿನಲ್ಲಿ ಕಾಂಗ್ರೆಸ್ ಆರೋಪಿಸಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದರು.