ಅಹ್ಮದಾಬಾದ್ : ಗುಜರಾತ್‌ನಲ್ಲಿನ ಆಳುವ ಬಿಜೆಪಿ ತನ್ನ ವಿದ್ಯುನ್ಮಾನ ಜಾಹೀರಾತುಗಳಲ್ಲಿ “ಪಪ್ಪು’ ಪದವನ್ನು ಬಳಸಕೂಡದೆಂದು ಚುನಾವಣಾ ಆಯೋಗ ಅಪ್ಪಣೆ ಕೊಡಿಸಿದೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅವರ ಕುಟುಂಬದವರು ಆತ್ಮೀಯತೆಯಿಂದ ಕರೆಯುವ ಹೆಸರು ಇದಾಗಿದ್ದು ಅದನ್ನು ಜಾಹೀರಾತುಗಳಲ್ಲಿ ಬಳಸುವುದರಿಂದ ರಾಹುಲ್ ಗಾಂಧಿಗೆ ಅಪಮಾನ ಮಾಡಿದಂತಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.
ಸಾಮಾಜಿಕ ಜಾಲ ತಾಣದಲ್ಲಿ ಕೂಡ ರಾಹುಲ್ ಗಾಂಧಿ ಅವರನ್ನು ಅವಹೇಳನ ಮಾಡುವುದಕ್ಕೆ ಪಪ್ಪು ಪದವನ್ನು ಸಾಮಾನ್ಯವಾಗಿ ಬಳಸುವುದುಂಟು.
ಪಪ್ಪು ಪದ ಬಳಕೆಯನ್ನು ವಿದ್ಯುನ್ಮಾನ ಜಾಹೀರಾತಿನಲ್ಲಿ ಬಿಜೆಪಿ ಬಳಸದಂತೆ ನಿಷೇಧಿಸಿರುವ ಹೊಸ ವಿದ್ಯಾಮಾನವನ್ನು ಇಂದು ಪಕ್ಷದ ಮೂಲಗಳು ದೃಢಪಡಿಸಿವೆ. ಆದರೆ ನಾವು ಈ ಪದವನ್ನು ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ಗುರಿ ಇರಿಸಿ ಬಳಸಿಲ್ಲ ಎಂದು ಅದು ಹೇಳಿಕೊಂಡಿದೆ.
ಬಿಜೆಪಿ ಕಳೆದ ತಿಂಗಳಲ್ಲೇ ತನ್ನ ವಿದ್ಯುನ್ಮಾನ ಜಾಹೀರಾತುಗಳ ಬರಹಗಳನ್ನು ಚುನಾವಣಾ ಆಯೋಗದ ಅವಲೋಕನ ಮತ್ತು ಸಮ್ಮತಿಗೆ ಒಪ್ಪಿಸಿತ್ತು. ಏಕೆಂದರೆ ಯಾವುದೇ ಚುನಾವಣಾ ಜಾಹೀರಾತನ್ನು ನಾವು ಪ್ರಕಟಿಸುವ ಮುನ್ನ ಅದರ ಪಠ್ಯವನ್ನು ಚುನಾವಣಾ ಆಯೋಗದ ಸಮಿತಿಗೆ ಒಪ್ಪಿಸಿ ಸರ್ಟಿಫಿಕೇಟ್ ಪಡೆಯಬೇಕಾಗಿದೆ ಎಂದು ಬಿಜೆಪಿ ಹೇಳಿದೆ.
ಪಪ್ಪು ಪದ ಬಳಕೆ ನಿರ್ದಿಷ್ಠ ವ್ಯಕ್ತಿಯನ್ನು ಗುರಿ ಇರಿಸಿರುವುದರಿಂದ ಅದು ಅನಪೇಕ್ಷಿತ; ಅದನ್ನು ಜಾಹೀರಾತಿನಿಂದ ತೆಗೆಯಬೇಕು ಎಂದು ಚುನಾವಣಾ ಆಯೋಗ ಹೇಳಿರುವಂತೆ ನಾವು ಮಾಡಿದ್ದೇವೆ ಎಂದು ಹಿರಿಯ ಬಿಜೆಪಿ ನಾಯಕರೋರ್ವರು ಹೇಳಿದ್ದಾರೆ.