Advertisement

ಕರ್ನಾಟಕದ ಹಣ ಬಲದ್ದೇ ಚಿಂತೆ! ಚುನಾವಣ ಆಯೋಗ ಕಳವಳ

12:39 AM Mar 12, 2023 | Team Udayavani |

ಬೆಂಗಳೂರು: ಕರ್ನಾಟಕದಲ್ಲಿನ “ಹಣ ಬಲ’ ನಮ್ಮ ಪಾಲಿಗೆ ಬಹಳ ಕಳವಳದ ವಿಷಯ, ಗಂಭೀರ ಸವಾ ಲಾಗಿದೆ ಎಂದು ಕೇಂದ್ರ ಚುನಾವಣ ಆಯೋಗದ ಮುಖ್ಯ ಚುನಾವಣ ಆಯುಕ್ತ ರಾಜೀವ್‌ ಕುಮಾರ್‌ ಹೇಳಿದರು.

Advertisement

ಉಚಿತ ಉಡುಗೊರೆಗಳ ಹಂಚಿಕೆ, ಚುನಾವಣ ಆಮಿಷ ಗಳನ್ನು ಮಟ್ಟ ಹಾಕಲು “ಮುಹೂರ್ತ’ಕ್ಕಾಗಿ ಕಾಯಬೇಡಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿನ ನಿರೂಪಣೆ (ನರೇಟಿವ್‌) ಮತ್ತು ಅಭಿಪ್ರಾಯಗಳಿಗೆ ಕಡಿವಾಣ ಹಾಕುವುದೂ ನಮ್ಮ ಮುಂದಿರುವ ದೊಡ್ಡ ಸವಾಲು ಎಂದೂ ಹೇಳಿದರು.

ಚುನಾವಣೆ ಸಿದ್ಧತೆಗಳ ಪರಿಶೀಲನೆಗೆ ರಾಜ್ಯಕ್ಕೆ 3 ದಿನಗಳ ಪ್ರವಾಸ ಕೈಗೊಂಡಿದ್ದ ಅವರು ಶನಿವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ನಗರ ಮತದಾರರು ಮತ್ತು ಯುವ ಮತದಾರರ ನಿರಾಸಕ್ತಿ ಬಗ್ಗೆ ಆಯೋಗಕ್ಕೆ ಕಳವಳವಿದೆ. ಸಾಮಾಜಿಕ ಮಾಧ್ಯಮಗಳ ಸುಳ್ಳು ವದಂತಿಗಳಿಗೆ ಕಡಿವಾಣ ಹಾಕಲು ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಟಿಎಂಗಳ ಮೇಲೂ ಕಣ್ಣು
ಅಕ್ರಮ ಹಣ ಚಲಾವಣೆಗೆ ಕಡಿವಾಣ ಹಾಕಲು ಸಂಜೆ 5ರಿಂದ ಬೆಳಗ್ಗೆ 10ರ ವರೆಗೆ ಎಟಿಎಂ ಯಂತ್ರಗಳಲ್ಲಿ ನಗದು ಹಾಕುವುದನ್ನು ನಿರ್ಬಂಧಿಸಲಾಗುತ್ತದೆ. ಸಂದೇಹಾಸ್ಪದ ವಹಿವಾಟುಗಳ ಬಗ್ಗೆ ನಿಗಾ ಇಡುವಂತೆ ಎಲ್ಲ ಬ್ಯಾಂಕುಗಳಿಗೆ ತಾಕೀತು ಮಾಡಲಾಗಿದೆ. ರಾಜ್ಯಕ್ಕೆ ಮತ್ತೂಂದು ರಾಜ್ಯದಿಂದ ಸಾಮಾನ್ಯವಾಗಿ ಬರುವ ಎಲೆಕ್ಟ್ರಾನಿಕ್‌ ಉಪಕರಣಗಳು ಸಹಿತ ಸಾಮಾನ್ಯ ಬಳಕೆಯ ವಸ್ತುಗಳ ಪ್ರಮಾಣ ಹೆಚ್ಚಾದರೆ ಅವುಗಳನ್ನು ಪರಿಶೀಲಿಸಲಾಗುವುದು. ಆಧುನಿಕ ಎಲೆಕ್ಟ್ರಾನಿಕ್‌ ವಿಧಾನದ ಹಣಕಾಸಿನ ವಹಿವಾಟುಗಳ ಮೇಲೂ ಕಣ್ಣಿಡಲಾಗುತ್ತದೆ ಎಂದರು.

Advertisement

ಕಟ್ಟುನಿಟ್ಟಿನ ನಿರ್ದೇಶನ
ಚುನಾವಣೆ ಮೇಲೆ ಪ್ರಭಾವ ಬೀರಬಹುದಾದ “ಹಣ ಬಲ’ಕ್ಕೆ ಕಡಿವಾಣ ಹಾಕಲು ರಾಜ್ಯ ಪೊಲೀಸರು, ಕಂದಾಯ ಗುಪ್ತಚರ ನಿರ್ದೇಶನಾಲಯ, ರಾಜ್ಯ ಜಿಎಸ್‌ಟಿ ವಿಭಾಗ, ಕೇಂದ್ರ ಜಿಎಸ್‌ಟಿ ವಿಭಾಗ, ಕರಾವಳಿ ಕಾವಲು ಪಡೆ, ಇಡಿ, ಏರ್‌ಪೋರ್ಟ್‌, ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ (ಸಿಬಿಐಸಿ) ಸಹಿತ ಚುನಾವಣ ನೀತಿ ಸಂಹಿತೆ ಜಾರಿಗೆ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗುತ್ತದೆ. ಅಕ್ರಮ ಮತ್ತು ಅನಿಯಮಿತ ಉಚಿತ ಉಡುಗೊರೆಗಳು ಹಾಗೂ ಹಣದ ಬಳಕೆ ಮತ್ತು ಒಳಹರಿವಿನ ಮೇಲೆ ಕಣ್ಗಾವಲು ಇಟ್ಟು ಅವುಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲು ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ ಎಂದರು.

ಆಯೋಗದ ಪರಮಾಧಿಕಾರ
ಚುನಾವಣೆ ಯಾವಾಗ ಮತ್ತು ಎಷ್ಟು ಹಂತಗಳಲ್ಲಿ ನಡೆಸಬೇಕು ಎಂದು ನಿರ್ಧರಿಸಲು ಪರಮಾಧಿಕಾರ ಇರುವುದು ಚುನಾವಣ ಆಯೋಗಕ್ಕೆ ಮಾತ್ರ. ಇದರಲ್ಲಿ ಯಾರ ಹಸ್ತಕ್ಷೇಪವೂ ಇರುವುದಿಲ್ಲ ಎಂದು ಸಿಇಸಿ ರಾಜೀವ್‌ ಕುಮಾರ್‌ ತಿಳಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯನ್ನು 3 ಹಂತಗಳಲ್ಲಿ ನಡೆಸುವಂತೆ ಬಿಜೆಪಿ ಮನವಿ ಮಾಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಗೆ ದಿನಾಂಕ ಮತ್ತು ಹಂತಗಳನ್ನು ನಿಗದಿಪಡಿಸಲು ರಾಜ್ಯದ ಭೌಗೋಳಿಕ ವಿಸ್ತೀರ್ಣ, ಚುನಾವಣ ಸಿಬಂದಿ ಮತ್ತು ಭದ್ರತಾ ಪಡೆಗಳ ಲಭ್ಯತೆ, ಪರೀಕ್ಷೆಗಳು, ಹಬ್ಬ-ಜಾತ್ರೆಗಳು, ಪ್ರಕೃತಿ ವಿಕೋಪಗಳು, ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರಬಹುದಾದ ವಿದ್ಯಮಾನಗಳು ಇತ್ಯಾದಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಉಳಿದಂತೆ ಯಾವುದನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ರಾಜಕೀಯ ಪಕ್ಷಗಳ ಅಭಿಪ್ರಾಯ ಕೇಳುವುದು ಸಾಮಾನ್ಯ ಪ್ರಕ್ರಿಯೆ. ಒಂದೇ ಹಂತದಲ್ಲಿ ಚುನಾವಣೆ ನಡೆಸಬೇಕು ಎಂದೂ ಅಭಿಪ್ರಾಯಗಳು ಬಂದಿವೆ. ಈ ಎಲ್ಲ ಅಂಶಗಳನ್ನು ಗಮನಿಸಿ ಆಯೋಗ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ರಾಜೀವ್‌ ಕುಮಾರ್‌ ಹೇಳಿದರು.

ಮುಹೂರ್ತಕ್ಕೆ ಕಾಯಬೇಡಿ
ರಾಜ್ಯದಲ್ಲಿನ ಚುನಾವಣ ಸಿದ್ಧತೆಗಳು ಸಮಾಧಾನ ತಂದಿವೆಯೇ ಎಂದು ಕೇಳಿದ ಪ್ರಶ್ನೆಗೆ ರಾಜೀವ್‌ ಕುಮಾರ್‌ ಉತ್ತರಿಸಿ, ಮತಗಟ್ಟೆ ಸೇರಿದಂತೆ ಮೂಲಸೌಕರ್ಯಗ ಳನ್ನು ಸಿದ್ಧಪಡಿಸುವ ಕೆಲಸ ಪೂರ್ಣವಾಗಿದೆ. ಆದರೆ ಉಡುಗೊರೆ, ಆಮಿಷ ತಡೆಯುವಲ್ಲಿ ಸ್ವಲ್ಪ ಹಿಂದೆ ಇದ್ದೇವೆ. ಇನ್ನೂ ನೀತಿ ಸಂಹಿತೆ ಜಾರಿ ಆಗಿಲ್ಲ ಎಂಬ ಭಾವನೆಯಿಂದ ಕೆಲವು ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ. ಇದಕ್ಕಾಗಿ “ಮುಹೂರ್ತ’ಕ್ಕಾಗಿ ಕಾಯಬೇಡಿ, ಕಾನೂನಿನ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉಡುಗೊರೆ, ಹಣ ಹಂಚಿಕೆ, ಆಮಿಷಗಳಿಗೆ ಕಡಿವಾಣ
ಹಾಕುವಂತೆ ಸಂಬಂಧಪಟ್ಟ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next