Advertisement

ಯಕ್ಷಗಾನ‌ಕ್ಕೂ ತಟ್ಟಿದ ಚುನಾವಣೆ ನೀತಿ ಸಂಹಿತೆ ಬಿಸಿ

01:54 AM Mar 28, 2019 | Team Udayavani |

ಕುಂದಾಪುರ: ಚುನಾವಣೆ ನೀತಿ ಸಂಹಿತೆಯ ಬಿಸಿ ಯಕ್ಷಗಾನಕ್ಕೂ ತಟ್ಟಿದ್ದು, ಪ್ರದರ್ಶನದ ವೇಳೆ ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ಧಕ ಬಳಸಲು ಅನುಮತಿ ನಿರಾಕರಿಸುತ್ತಿರುವುದಕ್ಕೆ ಹಲವೆಡೆ ವಿರೋಧ ವ್ಯಕ್ತವಾಗಿದೆ.

Advertisement

ಸಾರ್ವಜನಿಕ ಸಮಾರಂಭಗಳಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ಮಾತ್ರ ಧ್ವನಿವರ್ಧಕ ಬಳಸ ಬಹುದು. ಇದು ಯಕ್ಷಗಾನಕ್ಕೂ ಅನ್ವಯ. ಆದರೆ ಬಯಲಾಟ ಆರಂಭವಾಗುವುದೇ ರಾತ್ರಿ 9ರ ಬಳಿಕ. ಹೀಗಾಗಿ ಧ್ವನಿವರ್ಧಕ ಬಳಕೆ ನಿಯಮ ಆಯೋಜಕರನ್ನು ಸಂಕಷ್ಟಕ್ಕೀಡು ಮಾಡಿದೆ.

ವಿರೋಧ
ಬೆಳಗಿನವರೆಗೆ ಪ್ರದರ್ಶಿಸಲ್ಪಡುವ ಪ್ರಸಂಗ ಗಳನ್ನು ಈಗ ರಾತ್ರಿ 10ರೊಳಗೆ ಮುಗಿಸಬೇಕಿದ್ದು, ಉಭಯ ಜಿಲ್ಲೆಗಳ ಡಿಸಿಗಳ ನಿರ್ಧಾರಕ್ಕೆ ಯಕ್ಷಗಾನ ಸಂಘಟಕರು, ಮೇಳಗಳ ಯಜಮಾನರು, ಕಲಾವಿದರು ವಿರೋಧ ವ್ಯಕ್ತಪಡಿಸಿದ್ದಾರೆ.

ಕರಾವಳಿಯಲ್ಲಿ ಈಗ ಬಯಲಾಟಗಳ ಸೀಸನ್‌. ತಿಂಗಳಿಗೂ ಮುನ್ನವೇ ಮೇಳ ಕಾಯ್ದಿರಿಸಿ, ಪ್ರದರ್ಶನ ನಿಗದಿಪಡಿಸಲಾಗುತ್ತದೆ. ಕೆಲವು ಮೇಳಗಳ ಆಟಗಳು ವರ್ಷಕ್ಕೂ ಹಿಂದೆ ಕಾಯ್ದಿರಿಸಲ್ಪಟ್ಟವು. ಆದರೆ ಈಗಷ್ಟೇ ಘೋಷಣೆ ಯಾದ ನೀತಿ ಸಂಹಿತೆಯನ್ನು ಆಟಗಳಿಗೆ ಅನ್ವಯಿಸಿರುವುದು ಸರಿಯಲ್ಲ. ಇಲ್ಲಿ ಯಕ್ಷಗಾನ ಕಲೆ ಮಾತ್ರವಲ್ಲದೆ ಆರಾಧನೆಯೂ ಹೌದು. ಹಾಗಾಗಿ ನೀತಿ ಸಂಹಿತೆಯಿಂದ ವಿನಾಯಿತಿ ನೀಡಬೇಕೆಂಬ ಅಭಿಪ್ರಾಯ ಕೇಳಿಬರುತ್ತಿದೆ.

ಸಂಘಟಕರಿಗೆ ಸಂಕಷ್ಟ
40ಕ್ಕೂ ಹೆಚ್ಚು ಮೇಳಗಳು ಮಾತ್ರವಲ್ಲದೆ ಹವ್ಯಾಸಿ ಮೇಳಗಳು ಪ್ರದರ್ಶನ ನೀಡುತ್ತಿವೆ. ಒಂದು ಮೇಳದಲ್ಲಿ ಸುಮಾರು 20 ಕಲಾವಿ ದರು, 15 ಸಿಬಂದಿ ಸಹಿತ ಒಟ್ಟು ಸುಮಾರು 800 ಮಂದಿ ವೃತ್ತಿಪರ ಮತ್ತು ಹವ್ಯಾಸಿ ಕಲಾ ವಿದರಿದ್ದಾರೆ. ಮೇ ಅಂತ್ಯದ ವರೆಗೆ ಪ್ರದರ್ಶನ ಗಳಿಗೆ ಈಗಾಗಲೇ ಬುಕ್ಕಿಂಗ್‌ ಆಗಿದೆ. ಹೆಚ್ಚಿನ ಕಲಾವಿದರಿಗೆ ದಿನಕ್ಕೆ ಇಂತಿಷ್ಟು ಸಂಭಾವನೆ ನೀಡಲಾಗುತ್ತದೆ. ಈಗ ಪ್ರದರ್ಶನಕ್ಕೆ ಅಡ್ಡಿ ಯಾದರೆ ಆದಾಯಕ್ಕೂ ಪೆಟ್ಟು ಬೀಳಲಿದೆ.

Advertisement

ಯಕ್ಷಗಾನಕ್ಕೆ ಅಡ್ಡಿ ಬೇಡ
10 ಗಂಟೆಗೆ ನಿಲ್ಲಿಸಿ ಅಂದರೆ ಹೇಗೆ? ಹರಕೆ ಆಟ ಆರಂಭವಾಗುವುದೇ 9.30ಕ್ಕೆ. ಮೇಳದಲ್ಲಿ 40 ಮಂದಿ ಇರುತ್ತಾರೆ. ಅವರಿಗೆ 6 ತಿಂಗಳಿಗೆ ಅಗ್ರಿಮೆಂಟ್‌ ಆಗಿರುತ್ತದೆ. ಹರಕೆಯಾಟ ಬೆಳಗ್ಗೆವರೆಗೆ ನಡೆಯಬೇಕು ಎಂದಿದೆ. 10 ಗಂಟೆಗೆ ಮುಗಿಸುವುದಾದರೆ ಎಲ್ಲರಿಗೂ ವೇಷ ಕೊಡಲು ಅಸಾಧ್ಯ, ಇದರಿಂದ ಅವರಿಗೆ ಸಂಬಳ ಕೊಡುವುದಕ್ಕೂ ಸಮಸ್ಯೆ. ಇದನ್ನು ಸರಿಪಡಿಸಬೇಕು.
– ಅಶೋಕ ಶೆಟ್ಟಿ ಚೋನಮನೆ, ನೀಲಾವರ ಮೇಳದ ವ್ಯವಸ್ಥಾಪಕರು

ಕಾನೂನಿನ ಚೌಕಟ್ಟಿನಡಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಾನೂನು ಉಲ್ಲಂಘನೆ ಮಾಡಿದರೆ ಕ್ರಮ ಜರಗಿಸಬೇಕಾಗುತ್ತದೆ. ನೀತಿ ಸಂಹಿತೆ ಪಾಲನೆ ಮಾಡಿ. ಈ ಬಗ್ಗೆ ಸಭೆ ಕರೆದು ತಿಳಿಸಲಾಗಿದೆ.
– ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next