Advertisement

ಮತಯಾಚನೆಗೆ ಪಾದಯಾತ್ರೆ !

06:20 AM Apr 19, 2018 | Team Udayavani |

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಕಾರ್ಯ ಸ್ವಾರಸ್ಯವಾಗಿರುತ್ತದೆ. ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಎಷ್ಟೊಂದು ತೀವ್ರವಾಗಿದ್ದರೂ ಪ್ರಚಾರ ಕಾರ್ಯ ಮಾತ್ರ ಶಾಂತಿಯುತವಾಗಿ ನಡೆಯುವುದು ಇಲ್ಲಿನ ವೈಶಿಷ್ಟé. ಮತದಾನದ ಪ್ರಕ್ರಿಯೆಯೂ ಇಲ್ಲಿ ಶಾಂತಿಯುತ ವಾಗಿಯೇ ಇರುತ್ತದೆ. ಆದ್ದರಿಂದ ಇಲ್ಲಿನ ಚುನಾವಣಾ ರಾಜಕೀಯ ಪರಂಪರೆ ಶ್ಲಾಘನೀಯವಾಗಿದೆ.

Advertisement

ವಿವಿಧ ಪಕ್ಷಗಳ ರಾಷ್ಟ್ರೀಯ – ರಾಜ್ಯ ನಾಯಕರು ಈ ಪ್ರದೇಶಕ್ಕೆ ಸ್ವಾತಂತ್ರ್ಯಪೂರ್ವ ದಿನಗಳಿಂದಲೇ ಮಹತ್ವ ನೀಡು
ತ್ತಿದ್ದರು. ಈ ಬಾರಿಯೂ  ಈ ಪರಂಪರೆ ಮುಂದುವರಿಯುತ್ತಿದೆ. ಇನ್ನು ಚುನಾವಣೆ ಪ್ರಕ್ರಿಯೆ ಆರಂಭವಾದ ಬಳಿಕ ಮತ್ತಷ್ಟು ರಾಷ್ಟ್ರೀಯ ನಾಯಕರನ್ನು ನಿರೀಕ್ಷಿಸಲಾಗುತ್ತಿದೆ.ಸಾರ್ವಜನಿಕ ಸಭೆಗಳು ಜಿಲ್ಲೆಯಾದ್ಯಂತ ಸಂಘಟನೆ ಯಾಗುತ್ತಿದ್ದು ಪ್ರಭಾವೀ ನಾಯಕರು ಇರುವಲ್ಲಿ ಹೆಚ್ಚಿನ ಸಭೆಗಳು ಸಾಮಾನ್ಯ.

90ರ ದಶಕದಲ್ಲಿ ಆಗಿನ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್‌.  ಶೇಷನ್‌ ಅವರು ಚುನಾವಣಾ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದರು. ಅದಕ್ಕೆ ಮೊದಲು, ಜಿಲ್ಲೆಯಲ್ಲಿ ನಡುರಾತ್ರಿ ಕಳೆದು ಮುಂಜಾನೆಯ ವೇಳೆಗೂ ಸಾರ್ವಜನಿಕ ಸಭೆಗಳು ವಿಸ್ತರಣೆಯಾದ ಘಟ‌ನೆಗಳು ಸಂಭವಿಸಿದ್ದವು.

ಶೇಷನ್‌ ಪರಿಣಾಮವೆಂದರೆ ಈ ಎಲ್ಲ ದುಂದುವೆಚ್ಚಗಳ ನಿಯಂತ್ರಣ. ಸಂಜೆ ಏಳರೊಳಗೆ ಸಾರ್ವಜನಿಕ ಪ್ರಚಾರ ಸಭೆಗಳ ಮುಕ್ತಾಯ. ಪ್ರತೀ ದಿನ ಅಭ್ಯರ್ಥಿಗಳು ತಮ್ಮ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ದಾಖಲಿಸುವ ಅನಿವಾರ್ಯತೆ. ನೀತಿಸಂಹಿತೆ ಉಲ್ಲಂಘಿಸಿದರೆ ಚುನಾ ವಣಾ ಆಯೋಗದಿಂದ ಶಿಸ್ತುಕ್ರಮ.

ಸರಕಾರಿ ವಾಹನಗಳ (ದುರ್‌) ಬಳಕೆಗೆ ನಿಷೇಧ. ಇವೆಲ್ಲವು ಗಳಿಂದಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣಾ ಪ್ರಚಾರದ ಶೈಲಿಯೇ ಬದಲಾಯಿತು. ಮೊದಲೇ ಶಾಂತಿ ಯುತವಾಗಿದ್ದ ಪರಂಪರೆ ಮತ್ತಷ್ಟು ಶಿಸ್ತುಬದ್ಧವಾಯಿತು.

Advertisement

ಪಾದಯಾತ್ರೆ
90ರ ದಶಕದಲ್ಲಿ ಜಿಲ್ಲೆಯಲ್ಲಿ ಹೆಚ್ಚು ಪ್ರಚಲಿತ ವಾದದ್ದು ಚುನಾವಣಾ ಸಂದರ್ಭದ ಪಾದಯಾತ್ರೆ. ಬಹುತೇಕ ಅಭ್ಯರ್ಥಿಗಳು ಪಾದಯಾತ್ರೆಯ ಕ್ರಮವನ್ನು ಇಲ್ಲಿ ರೂಢಿಸಿಕೊಂಡರು. ಈ ಮೂಲಕ ಮನೆ ಮನೆಗಳಿಗೆ ತೆರಳಿ ಮತದಾರರನ್ನು ಭೇಟಿಯಾಗತೊಡಗಿದರು. ಈ ಮೂಲಕ ಅಭ್ಯರ್ಥಿಗಳಿಗೆ ಮತದಾರರೊಂದಿಗೆ ನೇರ ಸಂವಹನ ನಡೆಸಲು ಸಾಧ್ಯವಾಯಿತು. ಮತದಾರರು ಕೂಡ ತಮ್ಮ ಸಮಸ್ಯೆಗಳನ್ನು (ಪರಿಹಾರದ ವಿಷಯ ತಾರ್ಕಿಕ) ನೇರವಾಗಿ ಅಭ್ಯರ್ಥಿಗಳಲ್ಲಿ ಹೇಳಿಕೊಳ್ಳಲು ಸಾಧ್ಯವಾಯಿತು. ಕಡಿಮೆ ಮತದಾರರಿರುವ ಕ್ಷೇತ್ರಗಳಲ್ಲಿ ಇದು ಹೊಸ ಜಾಗೃತಿಯನ್ನು ಮೂಡಿಸುವಲ್ಲಿಯೂ ಸಫಲವಾಯಿತು. ಅಭ್ಯರ್ಥಿಗಳು ಕೂಡ ಈ ಮೂಲಕ ಸಾಕಷ್ಟು ಸಾಮಾಜಿಕ ಕಾಳಜಿಯನ್ನು ರೂಢಿಸಿಕೊಳ್ಳಲು ಸಾಧ್ಯವಾಯಿತು. ವಿಸ್ತಾರವಾದ ಕ್ಷೇತ್ರಗಳಲ್ಲಿ ಇದು ಸುಲಭ ಸಾಧ್ಯವಲ್ಲವಾದರೂ ಅಂತಹ ಪ್ರದೇಶಗಳಲ್ಲಿ ಸಾರ್ವಜನಿಕ ಸಭೆಗಳ ಮೂಲಕ ಅಭ್ಯರ್ಥಿಗಳು, ಮತದಾರರ ನಡುವಣ ಸಂವಹನ ಸಾಧ್ಯವಾಗುತ್ತದೆ.

ವಿಜೇತ-ಪರಾಜಿತರೆನ್ನದೆ ಅಭ್ಯರ್ಥಿಗಳು ಚುನಾವಣೆಯ ಬಳಿಕವೂ ನಿರ್ದಿಷ್ಟ ಪ್ರದೇಶಗಳ ಮೂಲ ಸೌಕರ್ಯಗಳ ಬಗ್ಗೆ ಸ್ಪಂದಿಸಿದ ಮತ್ತು ಸ್ಪಂದಿಸುತ್ತಿರುವ ನಿದರ್ಶನಗಳಿವೆ. ಇದು 90ರ ದಶಕದ ಪಾದಯಾತ್ರೆ ಪರಿಕಲ್ಪನೆಯಿಂದಾದ ಲಾಭ. 

ಅಂದ ಹಾಗೆ …
ಈ ಬಾರಿ ಸ್ಪರ್ಧಿಸಲು ತೀವ್ರ ಆಕಾಂಕ್ಷಿಯಾಗಿರುವ “ಅವರು’ ತಮ್ಮ ಪರವಾಗಿ ಬೆಂಬಲಿಗರಿಂದ, ಕೆಲವು ನಾಯಕರ ಮೂಲಕ ಪಕ್ಷದ ವರಿಷ್ಠರಿಗೆ ಸತತವಾಗಿ ಶಿಫಾರಸು ಪತ್ರಗಳನ್ನು ಕಳುಹಿಸುತ್ತಿದ್ದಾರೆ. ಕೆಲವು ಪತ್ರಗಳಲ್ಲಿ “ಅವರು’ ಜಯಿಸಿದರೆ ಕನಿಷ್ಠ ಐದು ಲಕ್ಷ ಮತಗಳ ಅಂತರದಿಂದ ಜಯಿಸುವರೆಂದು ಶಿಫಾರಸು ಮಾಡಲಾಗಿದೆ. ನಿಜಕ್ಕಾದರೆ, ಪ್ರಸ್ತುತ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆಯೇ ಎರಡು ಲಕ್ಷ ಮೀರಿಲ್ಲ !

 - ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next