ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 14 ಗ್ಯಾರಂಟಿ ಸಮಾವೇಶ ಹಾಗೂ 76 ಪ್ರಜಾಧ್ವನಿ ಜನ ಸಮಾವೇಶಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದು, ಅಂದಾಜು 14 ಲಕ್ಷ ಜನರೊಂದಿಗೆ ನೇರವಾಗಿ ಮುಖಾಮುಖಿಯಾಗಿದ್ದಾರೆ.
ಚುನಾವಣ ಪ್ರಚಾರದ ಭಾಗವಾಗಿ ರಾಜ್ಯದ ವಿವಿಧೆಡೆ ಮೇ 5ರ ವರೆಗೆ ಪ್ರಜಾಧ್ವನಿ, ಗ್ಯಾರಂಟಿ ಸಮಾವೇಶಗಳು ಸಹಿತ ನೂರಾರು ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಭಾಗ ವಹಿಸಿದ್ದರು. ಸ್ವತಃ ಮುಖ್ಯಮಂತ್ರಿ ಮಾಧ್ಯಮ ತಂಡ ನೀಡಿದ ಅಂಕಿಅಂಶಗಳ ಪ್ರಕಾರ ಒಟ್ಟಾರೆ 90 ಸಮಾವೇಶಗಳಿಗೆ ಈ ಅವಧಿಯಲ್ಲಿ ಸಿಎಂ ಸಾಕ್ಷಿಯಾಗಿದ್ದಾರೆ.
ರಾಜ್ಯದಲ್ಲಿ 20ರಿಂದ 26 ಸಾವಿರ ಕಿ.ಮೀ. ಸಂಚರಿಸಿದ್ದಾರೆ. ಒಂದು ಸಭೆ ಅಥವಾ ರೋಡ್ ಶೋನಲ್ಲಿ ತಲಾ 15 ಸಾವಿರ ಜನ ಭಾಗವಹಿಸಿದ್ದಾರೆ ಎಂದು ಲೆಕ್ಕಹಾಕಿದರೂ ಒಟ್ಟಾರೆ 14 ಲಕ್ಷ ಜನರನ್ನು ಈ ಅವಧಿಯಲ್ಲಿ ಮುಖ್ಯಮಂತ್ರಿ ತಮ್ಮ ಮಾತುಗಳ ಮೂಲಕ ಸಂಪರ್ಕ ಬೆಸೆದಿದ್ದಾರೆ ಎಂದು ತಂಡ ತಿಳಿಸಿದೆ.
ಇದರಲ್ಲಿ ಚುನಾವಣೆ ಘೋಷಣೆಗೂ ಮೊದಲು 14 ಗ್ಯಾರಂಟಿ ಸಮಾವೇಶಗಳನ್ನು ನಡೆಸಲಾಯಿತು. ಎಲ್ಲ ಕಡೆಗೂ ಮುಖ್ಯಮಂತ್ರಿ, ಗ್ಯಾರಂಟಿ ಯೋಜನೆಗಳ ತಾತ್ವಿಕತೆ, ಅಗತ್ಯ, ಅನಿವಾರ್ಯತೆ ಮತ್ತು ಪರಿಣಾಮಗಳನ್ನು ತಮ್ಮದೆ ಶೈಲಿಯಲ್ಲಿ ಜನರಿಗೆ ಮನದಟ್ಟು ಮಾಡಿಸಿದರು. ಪ್ರಮುಖವಾಗಿ ನೆರೆದಿದ್ದ ಜನರ ಜತೆ ಸಂವಾದ ನಡೆಸುತ್ತಲೇ ಅವರನ್ನು ಒಳಗೊಳ್ಳುತ್ತಾ ಜನಪದ (ಜನಪರ) ಕಲಾವಿದರ ಶೈಲಿಯಲ್ಲಿ ಸ್ಪಂದಿಸಿದ್ದು, ಪರಿಣಾಮಕಾರಿಯಾಗಿತ್ತು ಎಂದು ಮುಖ್ಯಮಂತ್ರಿಯವರ ಮಾಧ್ಯಮ ವಿಭಾಗ ತಿಳಿಸಿದೆ.