ಲಕ್ಷ್ಮೇಶ್ವರ: ಪಶ್ಚಿಮ ಪದವೀಧರ ಮತಕ್ಷೇತ್ರ ನನ್ನ ರಾಜಕೀಯದ ಮಹತ್ತರ ಮೈಲುಗಲ್ಲಾಗಿದೆ. ನಾಲ್ಕು ಅವಧಿಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ನನಗೆ ಕಾರ್ಯಕರ್ತರೆಲ್ಲರೂ ಸೇರಿ ಮತ್ತೆ ಈ ಕ್ಷೇತ್ರವನ್ನು ಗೆಲ್ಲಿಸಿಕೊಟ್ಟಲ್ಲಿ ಪಕ್ಷದ ಅಭ್ಯರ್ಥಿ ಕುಬೇರಪ್ಪನವರಿಗಿಂತ ಹೆಚ್ಚು ಖುಷಿ ಪಡುವ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತೇನೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್.ಕೆ.ಪಾಟೀಲ ಹೇಳಿದರು.
ಪಟ್ಟಣದ ಚನ್ನಮ್ಮನ ವನ ಕಲ್ಯಾಣ ಮಂಟಪದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ| ಆರ್.ಎಂ.ಕುಬೇರಪ್ಪ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಪಕ್ಷ ರಾಜಕಾರಣವನ್ನು ಮೀರಿ ನಿಂತು ಕೆಲಸ
ಮಾಡುವ ಅವಕಾಶ ಈ ಕ್ಷೇತ್ರದಲ್ಲಿದೆ ಮತ್ತು ಅಂತಹ ವ್ಯಕ್ತಿತವ್ವನ್ನು ಕುಬೇರಪ್ಪ ಹೊಂದಿದ್ದಾರೆ. ಪದವೀಧರರ ನೋವು, ನಲಿವುಗಳಿಗೆ ಸ್ಪಂದಿಸುವ ಉತ್ತಮ ಆಡಳಿತಗಾರ ಕುಬೇರಪ್ಪನವರಿಗೆ ಪದವೀಧರರು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ತಮ್ಮ ಸೇವೆಗೆ ಅವಕಾಶ ಕಲ್ಪಿಸಿಕೊಡಬೇಕು. ಬಿಜೆಪಿ ಪಕ್ಷ ಚುನಾವಣೆ ಸಂದರ್ಭದಲ್ಲಿ ಇಲ್ಲಸಲ್ಲದ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಎರಡು ಬಾರಿ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಪಡೆದುಕೊಂಡಿದೆ. ಇದೀಗ ಪದವೀಧರ ಮತದಾರರಿಗೆ ಬಿಜೆಪಿ ಬಗ್ಗೆ ಇದ್ದ ನಂಬಿಕೆ ದೂರವಾಗಿದ್ದು, ಪದವೀಧರರಲ್ಲಿ ಮತ ಕೇಳುವ ನೈತಿಕ ಹಕ್ಕಿಲ್ಲ. ಈ ಬಾರಿ ಕಾಂಗ್ರೇಸ್ ಪಕ್ಷ ಈ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ, ಬಿ.ಆರ್.ಯಾವಗಲ್, ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಪಾಟೀಲ ಮಾತನಾಡಿ, ಬಿಜೆಪಿ ಪಕ್ಷದ ಕೇಂದ್ರ ಮತ್ತು ರಾಜ್ಯದಲ್ಲಿ ತುಘಲಕ್ ದರ್ಬಾರ್ ನಂತೆ ಆಡಳಿತ ನಡೆಸುತ್ತಿವೆ. ಕೃಷಿ, ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಸುರ್ಗಿವಾಜ್ಞೆ ಮೂಲಕ ಜಾರಿಗೊಳಿಸಿರುವುದು ಜನ ವಿರೋಧಿಯಾಗಿದೆ. ಇದಕ್ಕೆ ತಕ್ಕ ಉತ್ತರ ನೀಡಲು ಚುನಾವಣೆಗಳು ಅಸ್ತ್ರವಾಗಿವೆ. ಈ ವೇಳೆ ಮತದಾರರಲ್ಲಿ ತೆರಳಿ ಮತಯಾಚಿಸುವ ಪ್ರಾಮಾಣಿಕ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಸಭೆಯಲ್ಲಿ ಜಿ.ಪಂ.ಅಧ್ಯಕ್ಷ ಸಿದ್ದು ಪಾಟೀಲ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ ಮಂದಾಲಿ, ಪಶ್ಚಿಮ ಪದವೀಧರ ಕ್ಷೇತ್ರದ ಉಸ್ತುವಾರಿ ಆನಂದಸ್ವಾಮಿ ಗಡ್ಡದೇವರಮಠ, ಎಸ್.ಪಿ.ಬಳಿಗಾರ, ರಾಜಣ್ಣ ಕುಂಬಿ ಎಂ.ಎಸ್.ದೊಡ್ಡಗೌಡ್ರ, ಹುಮಾಯೂನ್ ಮಾಗಡಿ, ಸುಜಾತಾ ದೊಡ್ಡಮನಿ, ನೀಲಮ್ಮ ಕೋಣನವರ, ಜಯಕ್ಕ ಕಳ್ಳಿ, ವಿರುಪಾಕ್ಷಪ್ಪ ಪಡಗೇರಿ, ಭಾಗ್ಯಶ್ರೀ ಬಾಬಣ್ಣ, ಸೋಮಣ್ಣ ಬೆಟಗೇರಿ, ವೀರೇಂದ್ರ ಪಾಟೀಲ, ಚನ್ನಪ್ಪ ಜಗಲಿ, ವೀರನಗೌಡ್ರ ನಾಡಗೌಡ್ರ, ರಾಜು ಪಾಟೀಲ, ರಾಮಣ್ಣ ಲಮಾಣಿ(ಶಿಗ್ಲಿ), ಬಸವರಾಜ ಬಾಳೇಶ್ವರಮಠ, ವಿಜಯ ಕರಡಿ, ವಿರೂಪಾಕ್ಷಪ್ಪ ನಂದೆಣ್ಣವರ, ಫಕ್ಕೀರೇಶ ಮ್ಯಾಟಣ್ಣವರ, ಬಸವರಾಜ ಕಡೆಮನಿ, ಸುರೇಶ ಬೀರಣ್ಣವರ, ಅಮರೇಶ ತೆಂಬದಮನಿ, ಸೇರಿದಂತೆ ಅನೇಕ ಮುಖಂಡರು ನೂರಾರು ಕಾರ್ಯಕರ್ತರು ಹಾಜರಿದ್ದರು.