ಗಂಗಾವತಿ: ಮನೆಗಳಿಗೆ ಪಟ್ಟಾ, ಸ್ವಾಮೀತ್ವ ಯೋಜನೆ ಅನುಷ್ಠಾನ ಹಾಗೂ ಗ್ರಾಮಗಳಿಗೆ ಗಾಂವಠಾಣಾ ಮಂಜೂರಿ ಮಾಡುವಂತೆ ಆಗ್ರಹಿಸಿ ತಾಲೂಕಿನ ಆನೆಗೊಂದಿ ಭಾಗದ ಐದು ಗ್ರಾಮಗಳ ಗ್ರಾಮಸ್ಥರು ಲೋಕಸಭಾ ಚುನಾವಣಾ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಎರಡು ತಾಸಿನಲ್ಲೇ ಸಹಾಯಕ ಆಯುಕ್ತರ ನೇತೃತ್ವದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ಚಿಕ್ಕರಾಂಪೂರ ಗ್ರಾಮಕ್ಕೆ ಆಗಮಿಸಿ ಸ್ಥಳೀಯರ ಸಭೆ ನಡೆಸಿ ಮತದಾನ ಬಹಿಷ್ಕಾರ ಮಾಡದಂತೆ ಮನವೊಲಿಸಲು ಯತ್ನಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ನೀಲಪ್ಪ, ಅಂಜಿನಪ್ಪ ಹಾಗೂ ಪಿ.ಲಕ್ಷö್ಮಣ ನಾಯಕ ರಾಂಪೂರ ಮಾತನಾಡಿ, ಆನೆಗೊಂದಿ ಭಾಗದ ನಾಲ್ಕು ಗ್ರಾ.ಪಂ. ವ್ಯಾಪ್ತಿಯ ಬಹುತೇಕ ಗ್ರಾಮಗಳ ಮನೆಗಳಿಗೆ ಪಟ್ಟಾಗಳಿಲ್ಲ. ಕೆಲ ಗ್ರಾಮಗಳ ಗಾಂವಠಾಣಾ ಜಾಗವಿಲ್ಲ. ಆದ್ದರಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹನುಮನಹಳ್ಳಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿ ಪ್ರತಿಭಟನೆ ನಡೆಸಿದ್ದರು. ಆಗ ಜಿಲ್ಲಾಡಳಿತ ಸಮಸ್ಯೆ ಪರಿಹಾರ ಭರವಸೆ ನೀಡಿ ಮರೆತಿದೆ. ಮನೆಗಳಿಗೆ ಪಟ್ಟಾ ಇಲ್ಲದೇ ಅರಣ್ಯ ಇಲಾಖೆ, ಕಂದಾಯ ಮತ್ತು ಹಂಪಿ ಅಭಿವೃದ್ಧಿ ಪ್ರಾದಿಕಾರದ ಅಧಿಕಾರಿಗಳು ಸದಾ ಕಿರುಕುಳ ನೀಡುತ್ತಿದ್ದಾರೆ. ಮನೆಗಳ ಮೇಲೆ ಸಾಲ ಮಾಡಲು ಆಗುತ್ತಿಲ್ಲ. ಮಕ್ಕಳಿಗೆ ಹೆಣ್ಣು ಗಂಡು ತರುವುದು ಕಷ್ಟವಾಗಿದೆ. ಆದ್ದರಿಂದ ಚುನಾವಣೆ ಬಹಿಷ್ಕಾರ ಮಾಡಲು ತೀರ್ಮಾನಿಸಲಾಗಿದೆ. ಸಮಸ್ಯೆ ಪರಿಹಾರ ಮಾಡಿ 15 ಗ್ರಾಮಗಳ ಮನೆಗಳಿಗೆ ಪಟ್ಟಾ ವಿತರಿಸಬೇಕು. ಗಾಂವಠಾಣಾ ಭೂಮಿ ಗುರುತಿಸುವಂತೆ ಆಗ್ರಹಿಸಿದರು.
ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಮಾತನಾಡಿ, ಆನೆಗೊಂದಿ ಹಳೆ ಮಂಡಲದ ಗ್ರಾಮಗಳು ಬಹುತೇಕ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದೆ. ಇನ್ನೂ ಕೆಲವು ಗ್ರಾಮಗಳ ಸರ್ವೇ ನಂಬರ್ ಗಳಲ್ಲಿ ಗಾಂವಠಾಣಾ ಭೂಮಿ ಇಲ್ಲ. ಆದ್ದರಿಂದ ಹಲವು ದಶಕಗಳಿಂದ ಇಲ್ಲಿ ನೆಲೆಸಿದ ಬಡವರ ಮನೆಗಳಿಗೆ ಪಟ್ಟಾ ಇಲ್ಲ.ಇದರಿಂದ ಬಹಳ ತೊಂದರೆಯಾಗಿದೆ. ಇದು ಸರಿಕಾರಿ ಪಾಲಿಸಿ ವಿಷಯವಾಗಿದ್ದು ಈಗಾಗಲೇ ಸ್ವಾಮೀತ್ವ ಯೋಜನೆಯಡಿ ಪ್ರತಿ ಗ್ರಾಮದಲ್ಲಿ ಸರ್ವೇ ಕಾರ್ಯವಾಗಿದ್ದು ಅರಣ್ಯ ಸರ್ವೇ ನಂಬರ್ ಇರುವ ಕಾರಣ ಪಟ್ಟಾ ಕೊಡಲು ಆಗಿಲ್ಲ. ಲೋಕಸಭಾ ಚುನಾವಣಾ ನಂತರ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾ.ಪಂ. ನೇತೃತ್ವದಲ್ಲಿ ಗಾಂವಠಾಣಾ ನಿಗದಿ ಮತ್ತು ಪಟ್ಟಾ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಲೋಕಸಭಾ ಚುನಾವಣೆ ದೇಶದ ಆಡಳಿತವನ್ನು ನಿರ್ಧರಿಸುವುದಾಗಿದ್ದು ಮತದಾನ ಬಹಿಷ್ಕಾರ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮಾಡುವ ಅಗೌರವವಾಗಿದ್ದು ಬಹಿಷ್ಕಾರ ವಾಪಸ್ ಪಡೆದು ಸಹಕಾರ ನೀಡಬೇಕು. ಈ ಕುರಿತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ.ಪ್ರತಿಯೊಬ್ಬರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ಸಿಪಿಐ ಸೋಮಶೇಖರ ಜುಟ್ಟಲ್, ಅರಣ್ಯಾಧಿಕಾರಿ ಸುಭಾಷ ನಾಯಕ, ಕಂದಾಯ ಅಧಿಕಾರಿ ಮಂಜುನಾಥ ಸ್ವಾಮಿ ಹಿರೇಮಠ, ಆನೆಗೊಂದಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಳೆಕಾಯಿ ತಿಮ್ಮಪ್ಪ, ಸದಸ್ಯ ಮಲ್ಲಿಕಾರ್ಜುನ ಸ್ವಾಮಿ ಸೇರಿ ಸ್ಥಳೀಯರಿದ್ದರು.