ನವದೆಹಲಿ: ಗುಜರಾತ್ ಚುನಾವಣೆ ದಿನಾಂಕವನ್ನು ಘೋಷಿಸದೇ ಇರುವ ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ ವಾಗ್ಧಾಳಿ ನಡೆಸಿದ್ದಾರೆ.
ಆಯೋಗವು ದಿನಾಂಕ ಘೋಷಣೆ ಮಾಡುವ “ಅಧಿಕಾರ’ವನ್ನು ಪ್ರಧಾನಿ ಮೋದಿ ಅವರಿಗೇ ವಹಿಸಿದಂತಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಗುಜರಾತ್ ಸಿಎಂ ವಿಜಯ್ ರೂಪಾನಿ, “ಕಾಂಗ್ರೆಸ್‌ಗೆ ಚುನಾವಣೆಯ ಭಯ ಹುಟ್ಟಿರುವುದು ಈ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ’ ಎಂದಿದ್ದಾರೆ.
ಶುಕ್ರವಾರ ಸರಣಿ ಟ್ವೀಟ್‌ಗಳನ್ನು ಮಾಡಿದ ಚಿದಂಬರಂ, “ಗುಜರಾತ್ ಸರ್ಕಾ ರವು ಎಲ್ಲ ಕೊಡುಗೆಗಳನ್ನು ಘೋಷಿ ಸುವವರೆಗೆ ಚುನಾವಣಾ ಆಯೋಗವು ರಜೆಯಲ್ಲಿರುತ್ತದೆ. ಚುನಾವಣಾ ದಿನಾಂಕ ನಿಗದಿಯ ಹೊಣೆಯನ್ನು ಪ್ರಧಾನಿ ಮೋದಿ ಅವರಿಗೇ ಆಯೋಗ ವಹಿಸಿದಂ ತಿದೆ. ತಮ್ಮ ಕೊನೆಯ ರ್ಯಾಲಿಯಲ್ಲಿ ಮೋದಿ ಅವರು ದಿನಾಂಕವನ್ನು ಘೋಷಣೆ ಮಾಡಲಿದ್ದಾರೆ,’ ಎಂದು ಹೇಳಿದ್ದಾರೆ.
ಹತಾಶೆಯ ಹೇಳಿಕೆ: ಚಿದಂಬರಂ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ರೂಪಾನಿ, “ಚಿದಂಬರಂ ಹಾಗೂ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಸೋಲುವ ಭಯ ಕಾಡುತ್ತಿದೆ. ಹತಾಶೆಯಿಂದ ಇಂಥ ಹೇಳಿಕೆ ನೀಡುತ್ತಿದ್ದಾರೆ. ಚುನಾವಣಾ ಆಯೋಗವನ್ನು ಟೀಕಿಸುವುದು ಪ್ರಜಾ ಪ್ರಭುತ್ವದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ,’ ಎಂದಿದ್ದಾರೆ.
ನಾಳೆ ಗುಜರಾತ್‌ಗೆ ಪ್ರಧಾನಿ ಭೇಟಿ: ಭಾನುವಾರ ಪ್ರಧಾನಿ ಮೋದಿ ಅವರು ಗುಜರಾತ್‌ಗೆ ಮತ್ತೆ ಭೇಟಿ ನೀಡಲಿದ್ದು, ಭಾವ್‌ನಗರ ಮತ್ತು ವಡೋದರಾದಲ್ಲಿ ಹಲವು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದು ಪ್ರಸಕ್ತ ತಿಂಗಳಲ್ಲಿ ಪ್ರಧಾನಿ ಮೋದಿ ಅವರ 3ನೇ ಗುಜರಾತ್ ಭೇಟಿಯಾಗಿದೆ. ತಮ್ಮ ಕನಸಿನ ಯೋಜನೆಯಾದ ಘೋಘಾದಿಂದ ದಹೇಜ್‌ಗೆ ದೋಣಿ ಸೇವೆಯ ಮೊದಲ ಹಂತವನ್ನು ಮೋದಿ ಉದ್ಘಾಟಿಸಲಿದ್ದಾರೆ. ಅಲ್ಲಿ ಅವರು ದೋಣಿಯಲ್ಲೇ ಪ್ರಯಾಣ ಬೆಳೆಸಿ, ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
“ರಾಹುಲ್ ಉಳಿಸಿ’ ಅಭಿಯಾನ
ಇನ್ನೊಂದೆಡೆ, ಬಿಜೆಪಿ ವಕ್ತಾರ ಜಿ.ವಿ. ಎಲ್. ನರಸಿಂಹ ರಾವ್ ಅವರೂ ಚಿದಂಬರಂ ವಿರುದ್ಧ ಹರಿಹಾಯ್ದಿದ್ದು, “ಇದು ರಾಹುಲ್ ಉಳಿಸಿ ಅಭಿಯಾನದ ಒಂದು ಭಾಗ,’ ಎಂದಿದ್ದಾರೆ. ಗುಜರಾತ್ ಚುನಾವಣೆಯಲ್ಲಿ ಸೋತರೆ ರಾಹುಲ್ ಗಾಂಧಿ ಅವ ರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಅಡ್ಡಿಯಾಗುತ್ತದೆ. ಹಾಗಾಗಿ, ರಾಹುಲ್‌ರನ್ನು ರಕ್ಷಿಸುವ ಉದ್ದೇಶದಿಂದ ಇಂಥ ಹೇಳಿಕೆ ನೀಡಲಾಗುತ್ತಿದೆ ಎಂದಿದ್ದಾರೆ. ಜತೆಗೆ, ಆಯೋಗದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಜಿ.ವಿ.ಎಲ್. ರಾವ್, “ಯಾವುದೇ ರಾಜ್ಯದಲ್ಲಿ 45 ದಿನಗಳಿಗಿಂತ ಹೆಚ್ಚು ಅವಧಿಗೆ ನೀತಿ ಸಂಹಿತೆ ಜಾರಿಯಲ್ಲಿರಬಾರದು. ಹೀಗಾಗಿ, ಆಯೋಗ ಕೈಗೊಂಡ ನಿರ್ಧಾರ ಸರಿಯಿದೆ,’ ಎಂದಿದ್ದಾರೆ.