ಸಿಂದಗಿ: ಸಿಂದಗಿ ಮತಕ್ಷೇತ್ರದ ಉಪ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆ ಯಾಗಿಲ್ಲದಿದ್ದರೂ ಯಾವ ಪಕ್ಷದಿಂದ ಯಾರಿಗೆ ಟಿಕೆಟ್ ಸಿಗುತ್ತದೆ, ಇವರಿಗೆ ಸಿಕ್ಕರೆ, ಅವರಿಗೆ ಸಿಕ್ಕರಿ ಹೀಗಾಗುತ್ತದೆ. ಅವರ ಗೆಲುವು ಸರಳವಾಗುತ್ತದೆ ಎಂದು ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡುವವರಿಗಿಂತ ಕ್ಷೇತ್ರದ ಮತದಾರರು, ಪಕ್ಷದ ಕಾರ್ಯಕರ್ತರು ಚಿಂತನೆ ನಡೆಸಿದ್ದಾರೆ.
ಕೆಲವರು ಒಂದು ಹೆಜ್ಜೆ ಮುಂದಿಟ್ಟು ಈ ಪಕ್ಷದಿಂದ ಇವರಿಗೇ ಟಿಕೆಟ್ ಸಿಗುತ್ತದೆ ಎಂದು ಆಕಾಂಕ್ಷಿಗಳ ಮೇಲೆ ಬೆಟ್ಟಿಂಗ್ ದಂಧೆ ಸಿಂದಗಿ ಮತಕ್ಷೇತ್ರದಲ್ಲಿ ತೆರೆಮರೆಯಲ್ಲೇ ಶುರುವಾಗಿದೆ. ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳಿಬ್ಬರ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಟಿಕೆಟ್ ಸಿಗುವ ಬಗ್ಗೆ, ಸೋಲು-ಗೆಲುವಿನ ಲೆಕ್ಕಾಚಾರಕ್ಕಿಂತ ಬೆಟ್ಟಿಂಗ್. ಸಾಕಷ್ಟು ಜಿದ್ದಾಜಿದ್ದಿಯ ಕಣವಾಗುತ್ತಿದೆ ಸಿಂದಗಿ ವಿಧಾನಸಭಾ ಕ್ಷೇತ್ರ. ಬಿಜೆಪಿ: ಬಿಜೆಪಿಯಿಂದ ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಪಕ್ಷದ ಹಳೆ ಕಾರ್ಯಕರ್ತರಾಗಿದ್ದು ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿದ್ದು ಬಿರಾದಾರ ಅಡಕಿ, ಚಂದ್ರಶೇಖರ ನಾಗೂರ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಸಂಘ ಪರಿವಾರದ ಮುತ್ತು ಶಾಬಾದಿ, ಶಂಭುಲಿಂಗ ಕಕ್ಕಳಲಮೇಲಿ ಅವರು ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇವರಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ? ಅವರಿಗೆ ಟಿಕೆಟ್ ಸಿಕ್ಕರೇ ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತಾರೆ? ಎಂಬುದರ ನಡುವೆ ಜೋರಾಗಿದೆ.
ಕಾಂಗ್ರೆಸ್: ಕಾಂಗ್ರೆಸ್ ಪಕ್ಷದಿಂದ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಪಕ್ಷದಲ್ಲಿ ಪೈಪೋಟಿ ನಡೆದಿದೆ. ಮಾಜಿ ಶಾಸಕ ಶರಣಪ್ಪ ಸುಣಗಾರ, ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠuಲ ಕೊಳ್ಳೂರ, ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ದಿ| ಮಾಜಿ ಶಾಸಕ ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ, ಎಂ.ಆರ್. ತಾಂಬೋಳಿ, ಸಂತೋಷ ಹರನಾಳ, 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಲ್ಲಣ್ಣ ಸಾಲಿ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅವರ ಮೇಲೂ ಬೆಟ್ಟಿಂಗ್ ನಡೆಯುತ್ತಿದೆ.
ಜೆಡಿಎಸ್: ಜೆಡಿಎಸ್ ಪಕ್ಷದಿಂದ ಚಾಂದಕವಠೆ ಜಿಪಂ ಸದಸ್ಯ ಗುರುರಾಜಗೌಡ ಪಾಟೀಲ, ವಿಡಿಸಿಸಿ ಮಾಜಿ ನಿರ್ದೇಶಕ, ಗೋಲಗೇರಿ ಗ್ರಾಮದ ಗೋಲ್ಲಾಳಪ್ಪಗೌಡ ಪಾಟೀಲ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅವರ ಮೇಲೆ ಬೆಟ್ಟಿಂಗ್ ಶುರುವಾಗಿದೆ. ಬೆಟ್ಟಿಂಗ್ ವ್ಯವಹಾರ ಪಟ್ಟಣದ ಪ್ರದೇಶದಲ್ಲಿ ಮಾತ್ರ ಕೇಳಿ ಬರುತ್ತಿತ್ತು.
ಉಪ ಚುನಾವಣೆ ಸಮಿಪ ಬರುತ್ತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿಯೂ ಜೋರಾಗಿ ನಡೆಯುತ್ತಿದೆ. ಬೆಟ್ಟಿಂಗ್ ಸಮರವು ಟೀ ಶಾಪ್, ಹೋಟೆಲ್, ಬಾರ್ ಆ್ಯಂಡ್ ರೆಸ್ಟೂರೆಂಟ್, ಬಸ್ ನಿಲ್ದಾಣ, ಮೊಬೈಲ್‌ಗಳ ಮೂಲಕ ನಡೆಯುತ್ತಿದೆ. ಇಷ್ಟು ದಿನ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಸದ್ದು ಮಾತ್ರ ಕೇಳಿ ಬರುತ್ತಿತ್ತು. ಈಗ ಉಪ ಚುನಾವಣೆಯಲ್ಲಿಯೂ ಕೇಳಿ ಬರುತ್ತಿದೆ. ಇದರ ಮಿತಿಯು ನೂರು, ಸಾವಿರ ರೂ.ಗಳಿಂದ ಹಿಡಿದು ಲಕ್ಷಾಂತರ ರೂ. ತನಕ ವ್ಯಾಪಿಸಿದೆ ಎನ್ನಲಾಗಿದೆ. ಕೆಲವರು ತಮ್ಮ ಬೆಂಬಲಿತ ಅಭ್ಯರ್ಥಿ ಪರ ಕುರಿ, ಮೇಕೆ, ಮೊಬೈಲ್, ಬೈಕ್ ಇನ್ನಿತರ ವಸ್ತುಗಳ ಮೇಲೆ ಬೆಟ್ಟಿಂಗ್ ಕಟ್ಟಿದರೆ, ಕೆಲವರು ನೇರವಾಗಿ ಹಣವನ್ನು ಬಾಜಿ ಕಟ್ಟುತ್ತಿದ್ದಾರೆ.