Advertisement

Election: ಚುನಾವಣ ಆಮಿಷ, ಅಕ್ರಮ: ಪಕ್ಷಗಳು ಗಂಭೀರವಾಗಿ ಚಿಂತಿಸಲಿ

12:37 AM Nov 22, 2023 | Team Udayavani |

ಚುನಾವಣೆಗಳಲ್ಲಿ ನಾನಾ ತೆರನಾದ ಆಮಿಷಗಳನ್ನು ಒಡ್ಡಿ ಮತದಾರರನ್ನು ಸೆಳೆಯುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಹುನ್ನಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚುನಾವಣ ಆಯೋಗ ಪ್ರತೀ ಚುನಾವಣೆಯ ಸಂದರ್ಭದಲ್ಲೂ ಕಠಿನ ನಿಯಮಗಳನ್ನು ಜಾರಿಗೊಳಿಸುತ್ತಲೇ ಬಂದಿದೆ. ಆದರೆ ಇವೆಲ್ಲದರ ಹೊರತಾಗಿಯೂ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರರನ್ನು ತಮ್ಮತ್ತ ಸೆಳೆಯಲು ವಿವಿಧ ತೆರನಾದ ಉಡುಗೊರೆ, ಕೊಡುಗೆ, ಹಣ, ಮದ್ಯ, ಮಾದಕ ವಸ್ತು ಗಳನ್ನು ಹಂಚುವ ಮೂಲಕ ರಂಗೋಲಿ ಯಡಿಗೆ ನುಸುಳುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

Advertisement

ಇದೀಗ ದೇಶದ ಐದು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಮತದಾರ ರಿಗೆ ಆಮಿಷವೊಡ್ಡುವ ಕಾರ್ಯಗಳು ಎಗ್ಗಿಲ್ಲದೆ ಸಾಗಿದ್ದು ಭಾರೀ ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಯೋಗ ನೀಡಿ ರುವ ಅಧಿಕೃತ ಅಂಕಿಅಂಶಗಳ ಪ್ರಕಾರ ಈ ಪಂಚರಾಜ್ಯ ಚುನಾವಣೆಯಲ್ಲಿ ಈ ಬಾರಿ ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾದ ವಸ್ತುಗಳ ಒಟ್ಟಾರೆ ಮೌಲ್ಯ, 2018ರಲ್ಲಿ ಈ ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ವಸ್ತುಗಳ ಮೌಲ್ಯಕ್ಕಿಂತ 7 ಪಟ್ಟು ಹೆಚ್ಚಳವಾಗಿದೆ.

ಅ.9ರಂದು ಚುನಾವಣೆ ಘೋಷಣೆಯಾದಾಗಿನಿಂದ ಸೋಮವಾರದ ವರೆಗೆ ಈ ಐದು ರಾಜ್ಯಗಳಲ್ಲಿ ಮತದಾರರಿಗೆ ಆಮಿಷವೊಡ್ಡಲೆಂದು ಸಂಗ್ರಹಿಸಿಡಲಾಗಿದ್ದ ಮತ್ತು ಸಾಗಿಸಲಾಗುತ್ತಿದ್ದ ವಿವಿಧ ವಸ್ತುಗಳು ಮತ್ತು ನಗದು ಸಹಿತ ಬರೋಬ್ಬರಿ 1,760 ಕೋ. ರೂ. ಮೌಲ್ಯದ ವಸ್ತುಗಳನ್ನು ವಿವಿಧ ತನಿಖಾ ಸಂಸ್ಥೆಗಳು ಮತ್ತು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಿಜೋರಾಂ, ಛತ್ತೀಸ್‌ಗಢ, ಮಧ್ಯಪ್ರದೇಶಗಳಲ್ಲಿ ಈಗಾಗಲೇ ಮತದಾನ ಪೂರ್ಣಗೊಂಡಿದ್ದರೆ ರಾಜಸ್ಥಾನದಲ್ಲಿ ನ. 25 ಮತ್ತು ತೆಲಂಗಾಣದಲ್ಲಿ ನ. 30ರಂದು ಮತದಾನ ನಡೆಯಲಿದೆ. ಈ ವೇಳೆಗೆ ಈ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ನ್ಯಾಯಯುತ, ನಿಷ್ಪಕ್ಷ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಚುನಾವಣ ಆಯೋಗ ಕಳೆದ ಹಲವಾರು ದಶಕಗಳಿಂದ ನಿರಂತರ ಪ್ರಯತ್ನಗಳನ್ನು ನಡೆಸುತ್ತ ಬಂದಿದೆ. ಪ್ರತೀ ಚುನಾವಣೆಯ ಸಂದರ್ಭದಲ್ಲೂ ಚುನಾವಣ ಆಯೋಗ ಕಟ್ಟುನಿಟ್ಟಿನ ಭದ್ರತೆ, ಬಿಗಿ ತಪಾಸಣೆ ಸಹಿತ ರಾಜಕೀಯ ಪಕ್ಷಗಳು ಮತ್ತು ಚುನಾವಣ ಕಣದಲ್ಲಿರುವ ಅಭ್ಯರ್ಥಿಗಳ ಮೇಲೆ ಹದ್ದುಗಣ್ಣು ಇರಿಸುತ್ತಿದೆ. ಅಷ್ಟು ಮಾತ್ರವಲ್ಲದೆ ಈ ಬಿಗಿ ಕ್ರಮಗಳಿಂದಾಗಿ ಭಾರೀ ಪ್ರಮಾಣದಲ್ಲಿ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪರಿಣಾಮ ಅಷ್ಟರಮಟ್ಟಿಗೆ ಆಮಿಷ, ಅಕ್ರಮಗಳನ್ನು ನಿಯಂತ್ರಿಸುವಲ್ಲಿ ಚುನಾವಣ ಆಯೋಗ ಸಫ‌ಲವಾಗಿದೆ.

ಆಯೋಗದ ಇಷ್ಟೆಲ್ಲ ಕಟ್ಟುನಿಟ್ಟಿನ ನಿಗಾದ ಹೊರತಾಗಿಯೂ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಇಂತಹ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ಬೆಳವಣಿಗೆ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಗಂಭೀರವಾಗಿ ಚಿಂತಿಸಬೇಕಿದೆ. ಇದರ ಜತೆಯಲ್ಲಿ ಮತದಾರರು ಕೂಡ ಇಂತಹ ಆಮಿಷಗಳಿಗೆ ಒಳಗಾಗದೆ ತಮ್ಮ ಹಕ್ಕನ್ನು ನಿರ್ಭೀತಿಯಿಂದ ಚಲಾಯಿಸಿದಾಗಲಷ್ಟೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ನೈಜ ಉದ್ದೇಶ ಈಡೇರಲು ಸಾಧ್ಯ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next