ಬೀದರ: ಬೆಂಗಳೂರಿನಲ್ಲಿ ಮಾ.28ರಂದು ಆಯೋಜಿಸಿರುವ ಬೃಹತ್ ರೈತರ ಸಮಾವೇಶದಲ್ಲಿ ಬರುವ ವಿಧಾನಸಭೆ ಚುನಾವಣೆಯಲ್ಲಿ ರೈತ ಸಂಘದ ಚುನಾವಣೆ ರಾಜಕೀಯ ಕುರಿತು ನಿರ್ಧರಿಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಸುಧಾರಣೆ, ಕೃಷಿ ಮಾರುಕಟ್ಟೆ, ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಭೂಸ್ವಾಧೀನ ತಿದ್ದುಪಡಿ ಸೇರಿ ವಿವಾದಿತ ನಾಲ್ಕು ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಹಲವು ಬಾರಿ ಹೋರಾಟ ನಡೆಸಿ, ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಹೀಗಾಗಿ ರೈತ ಸಮಾವೇಶದಲ್ಲಿ ಚುನಾವಣೆ ರಾಜಕೀಯದ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ರೈತ ವಿರೋಧಿಕೃಷಿ ಕಾಯ್ದೆಗಳನ್ನು ಈಗಾಗಲೇ ಹಿಂಪಡೆದಿದೆ. ಆದರೆ ರಾಜ್ಯದಲ್ಲಿ ಮಾತ್ರ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಚುನಾವಣೆಯಲ್ಲಿ ನಾಡಿನ ರೈತರು ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ರೈತ ವಿರೋಧಿ ಕೃಷಿ ಕಾಯ್ದೆ ಜಾರಿಗೆ ಮಾಡಿದ ಪರಿಣಾಮವನ್ನು ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿನ ಜನ ಬಿಜೆಪಿಗೆ ಪಾಠ ಕಲಿಸಿದ್ದಾರೆ. ರಾಜ್ಯದಲ್ಲಿ ಸಹ ರೈತ ವಿರೋಧ ಕಾಯ್ದೆಗಳನ್ನು ವಾಪಸ್ ಪಡೆಯದಿದ್ದರೆ ಪಂಜಾಬ್‌ನಂತೆ ಬರುವ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾದ್ಯಕ್ಷ ಸಿದ್ರಾಮಪ್ಪ ಆಣದೂರೆ, ದಯಾನಂದ ಸ್ವಾಮಿ ಇದ್ದರು.
ಬೀದರ ಜಿಲ್ಲೆಯ ಕೆಲವೊಂದು ಸಕ್ಕರೆ ಕಾರ್ಖಾನೆಗಳು ಕೇವಲ ಶೇ.6ರಷ್ಟು ರಿಕವರಿ ತೋರಿಸಿ ರೈತರಿಗೆ ಅನ್ಯಾಯ ಮಾಡುತ್ತಿವೆ. ಕೂಡಲೇ ಇಂಥ ಕಾರ್ಖಾನೆಗಳ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು. ಕಬ್ಬು ಸಾಕಾಣಿಕೆ ಮಾಡಿದ ರೈತರಿಗೆ ತಕ್ಷಣ ಹಣವನ್ನು ಜಮೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮವಹಿಸಬೇಕು.
-ಕೋಡಿಹಳ್ಳಿ ಚಂದ್ರಶೇಖರ, ರಾಜ್ಯಾಧ್ಯಕ್ಷ, ರೈತ ಸಂಘ ಮತ್ತು ಹಸಿರು ಸೇನೆ