Advertisement

3 ಕ್ಷೇತ್ರಗಳಿಗೆ ಚುನಾವಣೆ ಘೋಷಣೆ: ಜಿಜ್ಞಾಸೆಗೆ ಕಾರಣ

06:20 AM Oct 07, 2018 | |

ಬೆಂಗಳೂರು:2019 ರಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಎಲ್ಲ ಪಕ್ಷಗಳು ಸಿದ್ದತೆ ಮಾಡಿಕೊಳ್ಳುವ ಆಲೋಚನೆಯಲ್ಲಿರುವಾಗ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿರುವುದು ಜಿಜ್ಞಾಸೆಗೆ ಕಾರಣವಾಗಿದೆ.

Advertisement

ಪ್ರಜಾಪ್ರತಿನಿಧಿ ಕಾಯ್ದೆ 1951 ಪ್ರಕಾರ ಯಾವುದೇ ಕ್ಷೇತ್ರದಲ್ಲಿ ಆರು ತಿಂಗಳಿಗಿಂತ ಹೆಚ್ಚು ಅವಧಿ ಜನ ಪ್ರತಿನಿಧಿ ಇಲ್ಲದೇ ಇರಬಾರದು ಎಂಬ ನಿಯಮವಿದೆ. ಈಗಾಗಲೇ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಲ್ಕು ತಿಂಗಳು ಕಳೆದಿದ್ದು, ಇನ್ನೆರಡು ತಿಂಗಳೊಳಗೆ ಚುನಾವಣೆ ನಡೆಸಬೇಕಾದ ಅನಿವಾರ್ಯತೆ ಇದೆ. ಆದರೆ, ಕಾನೂನಿನಲ್ಲಿ ಅವಕಾಶವಿದ್ದರೂ 2019 ರ ಲೋಕಸಭೆ ಚುನಾವಣೆಗೆ ಏಳು ತಿಂಗಳ ಅವಧಿ ಬಾಕಿ ಉಳಿದಿದ್ದು, ಈ ಸಂದರ್ಭದಲ್ಲಿ ಚುನಾವಣೆ ನಡೆಸುವ ಅಗತ್ಯವಿತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಧಾನಸಭೆಗೆ ಆಯ್ಕೆಯಾದ ಲೋಕಸಭಾ ಸದಸ್ಯರು ಒಂದು ಕಡೆ ಮಾತ್ರ ತಮ್ಮ ಸದಸ್ಯತ್ವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಹದಿನಾಲ್ಕು ದಿನದಲ್ಲಿ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ, ಸದಸ್ಯತ್ವ ಕಳೆದುಕೊಳ್ಳುವ ಆತಂಕ ಇರುತ್ತದೆ. ಹೀಗಾಗಿ ರಾಜೀನಾಮೆ ನೀಡುವುದರಿಂದ ಖಾಲಿಯಾಗುವ ಸ್ಥಾನಕ್ಕೆ ಆರು ತಿಂಗಳೊಳಗೆ ಚುನಾವಣೆ ಮಾಡಬೇಕೆಂಬ ನಿಯಮ ಇರುವುದಿರಂದ ಚುನಾವಣಾ ಆಯೋಗ ಮೂರು ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಮಾಡಿದೆ.

ಒಬ್ಬ ವ್ಯಕ್ತಿ ಆರು ತಿಂಗಳಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಆಯ್ಕೆಯಾದರೂ, ಜನ ಪ್ರತಿನಿಧಿಯಾಗಿ ಆ ಕ್ಷೇತ್ರಕ್ಕೆ ಯಾವುದೇ ರೀತಿಯ ನ್ಯಾಯ ಸಲ್ಲಿಸಲು ಅವಕಾಶ ದೊರೆಯುವುದಿಲ್ಲ. ಆರು ತಿಂಗಳಲ್ಲಿ ಸಂಸತ್ತಿನಲ್ಲಿ ಎರಡು ಅಧಿವೇಶನದಲ್ಲಿ ಪಾಲ್ಗೊಳ್ಳಲು ಮಾತ್ರ ಅವಕಾಶ ದೊರೆಯಲಿದ್ದು, ಹೊಸದಾಗಿ ಆಯ್ಕೆಯಾದ ಸಂಸದ ಎರಡು ಬಾರಿ ಸಂಸತ್ತಿಗೆ ತೆರಳಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ಸಿಗುವುದು ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ.

ಕೋರ್ಟಿಗೆ ಹೋದರೂ ಪ್ರಯೋಜನವಾಗಿಲ್ಲ: 2013 ರಲ್ಲಿಯೂ ಇದೇ ರೀತಿ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾದಾಗ ಲೋಕಸಭೆ ಚುನಾವಣೆಗೆ ಕೇವಲ 8 ತಿಂಗಳು ಅವಕಾಶವಿತ್ತು. ಅಷ್ಟು ಕಡಿಮೆ ಅವಧಿಗೆ ಚುನಾವಣೆ ನಡೆಸುವ ಅಗತ್ಯವಿಲ್ಲ ಎಂದು ಜೆಡಿಯು ರಾಜ್ಯಾಧ್ಯಕ್ಷರಾಗಿದ್ದ ಎಂ.ಪಿ. ನಾಡಗೌಡ ಅವರು ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಅನಗತ್ಯ ಚುನಾವಣೆ ನಡೆಸುವುದನ್ನು ತಡೆಯೊಡ್ಡಬೇಕೆಂದು ಮನವಿ ಮಾಡಿದ್ದರು. ಆದರೆ, ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ನಡೆಯುವ ಸಂದರ್ಭದಲ್ಲಿಯೇ ಕೇಂದ್ರ ಚುನಾವಣಾ ಆಯೋಗ ಎರಡೂ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಮಾಡಿದ್ದರಿಂದ ಪ್ರಕರಣ ಅಲ್ಲಿಯೇ ಸ್ಥಗಿತಗೊಳಿಸಲಾಗಿತ್ತು.

Advertisement

ಒಂದು ದಿನವಾದರೂ ಸದಸ್ಯ:ಲೋಕಸಭೆಗೆ ಆಯ್ಕೆಯಾಗುವ ವ್ಯಕ್ತಿಯು ಜನರಿಂದ ಆಯ್ಕೆಯಾದ ನಂತರ ಗೆಲುವಿನ ಪ್ರಮಾಣ ಪತ್ರ ಪಡೆದ ತಕ್ಷಣ ಅವರು ಸಂಸದರಾದಂತೆ.  ಆ ನಂತರ ಒಂದೇ ದಿನದಲ್ಲಿ ಅವರ ಅಧಿಕಾರ ಹೋದರೂ, ಅವರು ಮಾಜಿ ಸಂಸದರಾಗುತ್ತಾರೆ. ಅಲ್ಲದೇ ಮಾಜಿ ಸಂಸದರಿಗೆ ದೊರೆಯುವ ರೈಲು ಪ್ರಯಾಣ ಭತ್ಯೆ, ಮಾಸಿಕ ಪಿಂಚಣಿ ಸೇರಿದಂತೆ ಎಲ್ಲ ಸೌಲಭ್ಯಗಳಿಗೂ ಅವರು ಅರ್ಹತೆ ಪಡೆಯುತ್ತಾರೆ.

ಆರೇಳು ತಿಂಗಳು ಇರುವಾಗ ಚುನಾವಣೆ ನಡೆಸುವುದು ಯಾವುದೇ ರೀತಿಯಿಂದಲೂ ಅನುಕೂಲಕರವಲ್ಲ. ಆಯ್ಕೆಯಾಗುವ ಸಂಸದರು ಕ್ಷೇತ್ರದ ಜನತೆಗೂ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಈ ಗೊಂದಲ ನಿವಾರಿಸುವಂತೆ ಹೈ ಕೋರ್ಟ್‌ ಮೆಟ್ಟಿಲೇರಿದ್ದರೂ ಯಾವುದೇ ತಾರ್ಕಿಕ ಅಂತ್ಯ ಕಾಣಲು ಸಾಧ್ಯವಾಗಿಲ್ಲ. ಈ ರೀತಿಯ ಚುನಾವಣೆಗಳಿಗೆ ಕಡಿವಾಣ ಹಾಕಲು, ದೊಡ್ಡ ಮಟ್ಟದಲ್ಲಿ ಚುನಾವಣಾ ಸುಧಾರಣೆ ಆಗಬೇಕು.
– ಎಂ.ಪಿ. ನಾಡಗೌಡ, ಜೆಡಿಯು ಮುಖಂಡ.

ಉಪ ಚುನಾವಣೆಗಳೆ ನಡೆಯಬಾರದು ಎನ್ನುವುದು ನನ್ನ ನಿಲುವು. ಯಾವುದೇ ಸದಸ್ಯನ ಅವಧಿಗೂ ಮುಂಚೆ ಸ್ಥಾನ ತೆರವಾದರೆ ಆ ಸ್ಥಾನಕ್ಕೆ ಎರಡನೇ ಸ್ಥಾನ ಪಡೆದ ಅಭ್ಯರ್ಥಿಗೆ ಅವಕಾಶ ಕಲ್ಪಿಸಿಕೊಡಲು ಕಾನೂನು ತಿದ್ದುಪಡಿಯಾಗಬೇಕು. ಈ ರೀತಿಯ ಉಪ ಚುನಾವಣೆಗಳು ಆರ್ಥಿಕವಾಗಿ ದೇಶಕ್ಕೆ ಹೊರೆಯಾಗುತ್ತವೆ ಹೊರತು ಯಾವುದೇ ಪ್ರಯೋಜನವಿಲ್ಲ.
– ಬಿ.ಎಲ್‌. ಶಂಕರ, ಕೆಪಿಸಿಸಿ ಉಪಾಧ್ಯಕ್ಷ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next