ಇಲ್ಲಿ ಗ್ರಾಹಕರೂ ಇದ್ದಾರೆ, ಕೃಷಿಕರೂ ಇದ್ದಾರೆ. ವಿದ್ಯುತ್‌ಗೆ ಬೇಡಿಕೆ ಕೂಡ ಇದೆ. ಆದರೆ ವ್ಯವಸ್ಥೆ ಮಾಡಬೇಕಾದವರು ಮಾತ್ರ ಏನೂ ಗೊತ್ತಿಲ್ಲದಂತೆ ಕುಳಿತಿರುವುದರಿಂದ ಸಮರ್ಪಕ ವಿದ್ಯುತ್ ಪೂರೈಕೆಯ ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ.
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಮೊಳಹಳ್ಳಿ, ಹಾರ್ದಳ್ಳಿ, ಮಂಡಳ್ಳಿ, ಯಡಾಡಿ, ಮತ್ಯಾಡಿ, ಹೊಂಬಾಡಿ, ಮಂಡಾಡಿ, ಜಪ್ತಿ , ಕೊರ್ಗಿ, ಕೆದೂರು , ಬೇಳೂರು ಕಾಳಾವರ, ಅಸೋಡು ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದಲೂ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಯಾಗಬೇಕು ಎನ್ನುವ ಈ ಭಾಗದ ಜನರ ಕನಸು ಇನ್ನೂ ನನಸಾಗದೆ ಹಾಗೆಯೇ ಉಳಿದಿದೆ.
ಗ್ರಾಮೀಣ ಭಾಗವಾಗಿರುವ ಈ ವ್ಯಾಪ್ತಿಯಲ್ಲಿ ಬಹುತೇಕ ಮಂದಿ ಕೃಷಿ ಅವ ಲಂಬಿತರಾಗಿದ್ದು, ಕುಂದಾಪುರ ಕ.ವಿ.ಪ್ರ.ನಿ 110 ಕೆ.ವಿ. ವಿದ್ಯುತ್ ಉಪಕೇಂದ್ರದಿಂದ ಸರಬರಾಜಾಗುತ್ತಿದೆ. ಸಹಜವಾಗಿ 110 ಕೆ.ವಿ. ವಿದ್ಯುತ್ ಮಾರ್ಗಗಳ ಅಂತರಗಳು ಹೆಚ್ಚಾಗಿರುವ ಪರಿಣಾಮ ನಿರಂತರವಾಗಿ ಲೋ ವೋಲ್ಟೆಜ್ ಸಮಸ್ಯೆ ಕಾಡುತ್ತಿದೆ.
ಹಲವು ದಶಕಗಳಿಂದಲೂ ಈ ಭಾಗದಲ್ಲಿ ಪದೇ ಪದೆ ವಿದ್ಯುತ್ ವ್ಯತ್ಯಯ ಉಂಟಾಗಿ ತಾಂತ್ರಿಕ ದೋಷ ಪತ್ತೆ ಹಚ್ಚುವಿಕೆ ಹಾಗೂ ಸರಿಪಡಿಸುವಿಕೆ ಕಾರ್ಯ ವಿಳಂಬವಾಗಿ ಅನಗತ್ಯ ವಿದ್ಯುತ್ ಕಡಿತಗಳನ್ನು ಎದುರಿ ಸುತ್ತಿದ್ದಾರೆ. ಇದರಿಂದ ಸಹಜವಾಗಿ ಕೃಷಿ ಚಟುವಟಿಕೆ, ಕೈಗಾರಿಕೆ ಸೇರಿದಂತೆ ವಾಣಿಜ್ಯ ಚಟುವಟಿಕೆಗಳಿಗೂ ಬಹಳಷ್ಟು ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಈ ನಿಟ್ಟಿನಲ್ಲಿ ಹುಣ್ಸೆಮಕ್ಕಿಯಲ್ಲಿ ಮೆಸ್ಕಾಂನ ಹೊಸದಾಗಿ ಶಾಖಾ ಕಚೇರಿ ಹಾಗೂ ಹುಣ್ಸೆಮಕ್ಕಿ ಗ್ರಾಮದ ಸರಹದ್ದಿನಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಬೇಕು ಎನ್ನುವ ಕೂಗು ನಿರಂತರವಾಗಿ ಕೇಳಿ ಬರುತ್ತಿದೆ. ಹೀಗಾಗಿ ಸಂಬಂಧಪಟ್ಟವರು ಗ್ರಾಮೀಣ ಭಾಗದ ಜನತೆಯ ದಶಕಗಳ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತುರ್ತು ಕ್ರಮಕೈಗೊಳ್ಳಬೇಕು ಎನ್ನುವುದು ಈ ಭಾಗದ ಗ್ರಾಮಸ್ಥರು ಮತ್ತು ರೈತರ ಒಕ್ಕೊರಲ ಆಗ್ರಹವಾಗಿದೆ.
~ ಟಿ. ಲೋಕೇಶ್ ಆಚಾರ್ಯ ತೆಕ್ಕಟ್ಟೆ