Advertisement

Election; ಧಾರವಾಡ ಕೆಎಂಎಫ್ ಗೆ 9 ಮಂದಿ ನಿರ್ದೇಶಕರ ಆಯ್ಕೆ

07:44 PM Jun 30, 2024 | Team Udayavani |

ಧಾರವಾಡ : ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ರವಿವಾರ ಚುನಾವಣೆ ಜರುಗಿತು.

Advertisement

ಒಟ್ಟು 9 ನಿರ್ದೇಶಕ ಸ್ಥಾನಗಳಲ್ಲಿ ಗದಗ ಜಿಲ್ಲೆಯ ಗದಗ- ನರಗುಂದ ತಾಲೂಕು ಕ್ಷೇತ್ರದ 1 ನಿರ್ದೇಶಕ ಸ್ಥಾನಕ್ಕೆ ಹನುಮಂತಗೌಡ ಗೋವಿಂದಗೌಡ ಹಿರೇಗೌಡರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಳಿದಂತೆ 8 ಸ್ಥಾನಗಳಿಗೆ ನಡೆದ ಚುನಾವಣೆ ಕಣದಲ್ಲಿ 17 ಅಭ್ಯರ್ಥಿಗಳಿದ್ದರು. ಈ ಪೈಕಿ ಅಂತಿಮವಾಗಿ ನಡೆದ ಮತದಾನದಲ್ಲಿ ಹೆಚ್ಚು ಮತಗಳನ್ನು ಪಡೆದು 8 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಧಾರವಾಡ, ಅಳ್ನಾವರ, ನವಲಗುಂದ ಮತ್ತು ಅಣ್ಣಿಗೇರಿ ತಾಲೂಕು ಮತಕ್ಷೇತ್ರದಿಂದ ಶಂಕರಪ್ಪ ವೀರಪ್ಪ ಮುಗದ ಸತತ 5ನೇ ಬಾರಿಗೆ ಚುನಾಯಿತರಾಗಿದ್ದಾರೆ. ಈ ಕ್ಷೇತ್ರದ ಒಟ್ಟು 83 ಮತದಾರರ ಪೈಕಿ 82 ಜನ ಮತದಾನ ಮಾಡುವ ಶೇ.98.80 ರಷ್ಟು ಮತದಾನವಾಗಿತ್ತು. ಈ ಪೈಕಿ
ಒಟ್ಟು 78 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಹೇಮರಡ್ಡಿ ನಾಗರಡ್ಡಿ ಲಿಂಗರಡ್ಡಿನ್ನು ಮಣಿಸಿದ್ದು, ಹೇಮರಡ್ಡಿ ಕೇವಲ ನಾಲ್ಕು ಮತಗಳಷ್ಟೇ ಪಡೆದಿದ್ದಾರೆ.

ಕಲಘಟಗಿ ತಾಲೂಕು ಮತಕ್ಷೇತ್ರಕ್ಕೆ ಚಲಾವಣೆಗೊಂಡ ಒಟ್ಟು 38 ಮತಗಳಲ್ಲಿ ಗೀತಾ ಸುರೇಶ ಮರಲಿಂಗಣ್ಣವರ 21 ಮತಗಳನ್ನು ಪಡೆಯುವ ಮೂಲಕ ಹನಮಂತಪ್ಪ ಫಕ್ಕೀರಪ್ಪ ಕೊರವರ (17 ಪಡೆದ ಮತ) ಅವರನ್ನು ಸೋಲಿಸಿದ್ದಾರೆ.

Advertisement

ಕುಂದಗೋಳ, ಹುಬ್ಬಳ್ಳಿ ಗ್ರಾಮೀಣ ಮತ್ತು ಹುಬ್ಬಳ್ಳಿ ನಗರ ತಾಲೂಕು ಮತಕ್ಷೇತ್ರಕ್ಕೆ ಚಲಾವಣೆಯಾದ ಒಟ್ಟು 67 ಮತಗಳಲ್ಲಿ ಸುರೇಶ ಬಣವಿ ಅವರು 36 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಗಂಗಪ್ಪ ಮೂಕಪ್ಪ ಮೊರಬದ ಅವರನ್ನು ಕೇವಲ ನಾಲ್ಕು ಮತಗಳ ಅಂತದಿAದ ಮಣಿಸಿದ್ದಾರೆ. ರೋಣ ಮತ್ತು ಗಜೇಂದ್ರಗಡ ತಾಲೂಕು ಮತಕ್ಷೇತ್ರಕ್ಕೆ ಚಲಾವಣೆಗೊಂಡ ಒಟ್ಟು 41 ಮತಗಳಲ್ಲಿ ನೀಲಕಂಠಪ್ಪ ಅಸೂಟಿ 29 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಗದಿಗೆಪ್ಪ ಕಿರೇಸೂರ ಅವರನ್ನು 19 ಮತಗಳಿಂದ ಮಣಿಸಿದ್ದಾರೆ. ಮುಂಡರಗಿ, ಶಿರಹಟ್ಟಿ ಮತ್ತು ಲಕ್ಷೇಶ್ವರ ತಾಲೂಕು ಮತಕ್ಷೇತ್ರದ ಒಟ್ಟು 71 ಮತಗಳ ಪೈಕಿ 69 ಮತದಾರರು ಮತ ಚಲಾಯಿಸಿದ್ದರು. ಈ ಪೈಕಿ ಲಿಂಗರಾಜಗೌಡ ಹನುಮಂತಗೌಡ ಪಾಟೀಲ 50 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿಯಾಗಿದ್ದ ಶೇಖಣ್ಣ ಕಾಳೆ ಕೇವಲ 19 ಮತಗಳಷ್ಟೇ ಪಡೆದಿದ್ದಾರೆ.

ಶಿರಸಿ‌ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಸುರೇಶ್ಚಂದ್ರ ಹೆಗಡೆ ಕೇಶಿನ್ಮನೆ ಅವರು ವಿಜಯಶಾಲಿಯಾಗಿದ್ದಾರೆ.
ಕಳೆದ‌ ಎರಡನೇ ಬಾರಿಯ ಜೊತೆಗೆ ಮೂರನೇ ಬಾರಿಗೆ ಕೂಡ ಸತತ ಗೆಲುವು ಸಾಧಿಸಿದ್ದಾರೆ. ಕೆಶಿನ್ಮನೆ 70 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಉಮಾಮಹೇಶ್ವರ ಹೆಗಡೆ ಕೇವಲ 14 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ

ಸಿದ್ದಾಪುರ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕು ಮತಕ್ಷೇತ್ರದ ಒಟ್ಟು 74 ಮತಗಳ ಪೈಕಿ ಚಲಾವಣೆಗೊಂಡ 73 ಮತಗಳಲ್ಲಿ ಪರಶುರಾಮ ವೀರಭದ್ರ ನಾಯ್ಕ 37 ಮತ ಪಡೆದು ವಿಜಯಶಾಲಿಯಾದರೆ ಪ್ರತಿಸ್ಪರ್ಧಿಗಳಾದ ಸಾಧನಾ ರಾಜೇಶ ಭಟ್ಟ 27, ಮಂಜುನಾಥ ಶಿವರಾಮ ಹೆಗಡೆ 9 ಮತಗಳನ್ನು ಪಡೆದಿದ್ದಾರೆ.

ಯಲ್ಲಾಪೂರ, ದಾಂಡೇಲಿ, ಹಳಿಯಾಳ, ಮುಂಡಗೋಡ, ಅಂಕೋಲಾ, ಜೋಯಿಡಾ ಮತ್ತು ಕಾರವಾರ ತಾಲೂಕು ಮತಕ್ಷೇತ್ರದ ಒಟ್ಟು 94 ಮತಗಳ ಪೈಕಿ ಚಲಾವಣೆಗೊಂಡ 91 ಮತಗಳಲ್ಲಿ ಶಂಕರ ಪರಮೇಶ್ವರ ಹೆಗಡೆ 66 ಮತಗಳನ್ನು ಪಡೆದು 24 ಮತ ಪಡೆದ ಪ್ರಶಾಂತ ಸುಬ್ರಾಯ ಸಭಾಹಿತ ಅವರನ್ನು ಮಣಿಸಿದ್ದಾರೆ.

ಮತದಾನ-ವಿಜಯೋತ್ಸವ
ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಧಾರವಾಡ ಉತ್ಪನ್ನ ಡೇರಿಯ ಮುಖ್ಯ ಕಚೇರಿ ಆವರಣದಲ್ಲಿ ಮತದಾನಕ್ಕೆ ಪ್ರತ್ಯೇಕ ಮೂರು ಕಡೆ ಮೂರು ಜಿಲ್ಲೆಯ ಮತದಾರರಿಗೆ ಅವಕಾಶ ಮಾಡಿಕೊಡಲಾಗಿತ್ತು. ಆಡಳಿತ ಮಂಡಳಿಯ ಎಂಟು ಸ್ಥಾನಗಳಿಗೆ ನಡೆದ ಮತದಾನದಲ್ಲಿ ಶೇ.98.38 ರಷ್ಟು ಮತದಾನ ದಾಖಲಾಲಾಯಿತು. ಒಟ್ಟು 555 ಮತದಾರರ ಪೈಕಿ 546 ಜನ ಮತ ಚಲಾಯಿಸಿದರೆ ಈ ಚಲಾವಣೆಗೊಂಡ ಮತಗಳ ಪೈಕಿ ಯಲ್ಲಾಪೂರ, ದಾಂಡೇಲಿ, ಹಳಿಯಾಳ, ಮುಂಡಗೋಡ, ಅಂಕೋಲಾ, ಜೋಯಿಡಾ ಮತ್ತು ಕಾರವಾರ ತಾಲೂಕು ಮತಕ್ಷೇತ್ರಕ್ಕೆ ಚಲಾವಣೆಯಾದ 91 ಮತಗಳ ಪೈಕಿ 1 ಮತವಷ್ಟೇ ಕುಲಗೆಟ್ಟ ಮತವನ್ನಾಗಿ ಪರಿಗಣಿಸಲಾಯಿತು.

ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ ಸೇರಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಬೆಂಬಲಿಗರ ಪರ ಪ್ರಚಾರ ಕೈಗೊಂಡಿದ್ದು ಕಂಡು ಬಂತು. ಮತದಾನದ ಬಳಿಕ ನಡೆದ ಮತ ಏಣಿಕೆಯಲ್ಲಿ ಫಲಿತಾಂಶ ಪ್ರಕಟಗೊಂಡ ಬಳಿಕ ವಿಜೇತ ಅಭ್ಯರ್ಥಿಗಳ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next