Advertisement

Election 2023: ಮುಂದಿನ ವಾರ ಮೋದಿ, ಯೋಗಿ, ಶಾ ಅಖಾಡಕ್ಕೆ

10:02 PM Apr 22, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಅಖಾಡ ಸಿದ್ಧಗೊಂಡಂತೆಯೇ, ಪ್ರಧಾನಿ ಮೋದಿ-ಉ.ಪ್ರ.ಮುಖ್ಯಮಂತ್ರಿ ಯೋಗಿ-ಗೃಹ ಸಚಿವ ಅಮಿತ್‌ ಶಾ ಅವರೂ ಪ್ರಚಾರಕ್ಕೆ ಇಳಿಯಲಿದ್ದಾರೆ. ಪ್ರಚಾರದ ನಿಜವಾದ “ಕಿಕ್‌ ಸ್ಟಾರ್ಟ್‌” 28ರಿಂದ ಪ್ರಾರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಮೊದಲ ರ್ಯಾಲಿ ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾವೇರಿಯಲ್ಲಿ ನಡೆಯುವ ಸಾಧ್ಯತೆ ಇದೆ.

Advertisement

ಪ್ರಧಾನಿ ಪ್ರಚಾರ ಸಭೆಗಳ ಬಗ್ಗೆ ಪಕ್ಷದ ಕಚೇರಿಯಲ್ಲಿ ಶನಿವಾರ ವಿಸ್ತೃತ ಚರ್ಚೆಯಾಗಿದೆ. ಮೊದಲ ಸಭೆ ಹಳೇ ಮೈಸೂರು ಭಾಗದಲ್ಲಿ ನಡೆಸಬೇಕೋ, ಕರಾವಳಿ ಕರ್ನಾಟಕವೋ ಅಥವಾ ಉತ್ತರ ಕರ್ನಾಟಕವೋ ಎಂಬ ಬಗ್ಗೆ ಸ್ಪಷ್ಟತೆ ಮೂಡಿಲ್ಲ. ಆದರೆ ಬಿಜೆಪಿ ಮೂಲಗಳ ಪ್ರಕಾರ ಮೊದಲ ರ್ಯಾಲಿ ಸಿಎಂ ತವರು ಜಿಲ್ಲೆ ಹಾವೇರಿಯಲ್ಲಿ ನಡೆಯಬಹುದು. ಆ ಮೂಲಕ ಹುಬ್ಬಳ್ಳಿ-ಧಾರವಾಡ, ಹಾವೇರಿ, ದಾವಣೆಗೆರೆ ಜಿಲ್ಲೆಯಲ್ಲಿ ಪಕ್ಷದ ಪರ ಸಂಚಲನ ಮೂಡಿಸಲು ನಿರ್ಧರಿಸಲಾಗಿದೆ. ಏ.30ರಂದು ಪ್ರಧಾನಿ ನರೇಂದ್ರ ಮೋದಿ ಚನ್ನಪಟ್ಟಣದಲ್ಲಿ ಬೃಹತ್‌ ಸಮಾವೇಶ ನಡೆಸಲು ಸಿದ್ಧತೆಗಳು ಪ್ರಾರಂಭಗೊಂಡಿವೆ.

ಪ್ರಧಾನಿ ನರೇಂದ್ರ ಮೋದಿ ಒಟ್ಟು ಆರು ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಪ್ರತಿ ದಿನ ಮೂರು ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗುತ್ತಾರೆ. ಒಟ್ಟು 20 ಸಭೆಗಳಲ್ಲಿ ಅವರು ಪಾಲ್ಗೊಳ್ಳುತ್ತಾರೆ. ಹಳೇ ಮೈಸೂರು, ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ತಲಾ ಮೂರು ಜಿಲ್ಲೆಗಳನ್ನು ಒಳಗೊಂಡಂತೆ ಬೃಹತ್‌ ಸಮಾವೇಶ ನಡೆಯುತ್ತದೆ. ಉಳಿದಂತೆ ರೋಡ್‌ ಶೋ ಹಾಗೂ ಟೆಂಪಲ್‌ ರನ್‌ ನಡೆಸಲು ಯೋಜನೆ ರೂಪಿಸಲಾಗಿದೆ. ರಾಜ್ಯ ಘಟಕ ಕೊಟ್ಟ ಪ್ರವಾಸದ ಸಂಖ್ಯೆಗೆ ಪ್ರಧಾನಿ ಕಾರ್ಯಾಲಯ ಒಪ್ಪಿಗೆ ನೀಡಿದೆ. ಆದರೆ ಯಾವ ಸ್ಥಳದಲ್ಲಿ ಎಂದು ಸಮಾವೇಶ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಕೊಟ್ಟಿಲ್ಲ.

ಏಪ್ರಿಲ್‌ 29ಕ್ಕೆ ಬೀದರ್‌ ಜಿಲ್ಲೆಯ ಹುಮನಾಬಾದ್‌ನಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ತಿಳಿಸಿದ್ದಾರೆ.ಕಲ್ಯಾಣ ಕರ್ನಾಟಕವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿರುವ ಪ್ರತೀಕವಾಗಿ ಪ್ರಧಾನಿ ಇಲ್ಲಿಗೆ ಆಗಮಿಸಲಿದ್ದಾರೆ.

ಶೆಟ್ಟರ್‌ ಕೋಟೆಯಲ್ಲಿ ಶಾ :
ಕಾಂಗ್ರೆಸ್‌ಗೆ ಸೇರ್ಪಡೆಯಾದ ಜಗದೀಶ ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿಯವರಿಂದ ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಯಾವುದೇ ಹಾನಿಯಾಗದಂತೆ ತಡೆಯುವುದಕ್ಕಾಗಿ ಖುದ್ದು ಅಮಿತ್‌ ಶಾ ರಣಾಂಗಣಕ್ಕೆ ಇಳಿಯಲಿದ್ದಾರೆ. ಮುಂದಿನ ವಾರದಿಂದ 7 ದಿನಗಳ ಕಾಲ ಅವರು, ಹುಬ್ಬಳ್ಳಿ, ಬೆಳಗಾವಿ ಸೇರಿ ಮುಂಬೈ ಕರ್ನಾಟಕ ಭಾಗದಲ್ಲಿ ತಂತ್ರಗಾರಿಕೆ ಸಭೆ ನಡೆಸಲಿದ್ದಾರೆ. ಅದಕ್ಕಾಗಿ ಅವರು ಹುಬ್ಬಳ್ಳಿಯಲ್ಲೇ ವಾಸ್ತವ್ಯ ಹೂಡುವ ಸಾಧ್ಯತೆ ಇದೆ.

Advertisement

ಕನಕಪುರಕ್ಕೆ ಯೋಗಿ ? :
ಇದೆಲ್ಲದರ ಜತೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಜ್ಯದಲ್ಲಿ ನಾಲ್ಕರಿಂದ ಐದು ಸಮಾವೇಶದಲ್ಲಿ ಭಾಗಿಯಾಗುವಂತೆ ಯೋಜನೆ ರೂಪಿಸಲಾಗುತ್ತಿದೆ. ಹಿಂದುತ್ವದ ಪ್ರಬಲ ನೆಲೆಯಾದ ಕರಾವಳಿ ಜಿಲ್ಲೆಗಳ ಜತೆಗೆ ಕೊಪ್ಪಳಕ್ಕೂ ಅವರು ಭೇಟಿ ಕೊಡುತ್ತಾರೆ. ಕೊಪ್ಪಳ ಜಿಲ್ಲೆಯ ಸುಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಅವರು ಭೇಟಿ ಕೊಟ್ಟು ಪೂಜೆ ಸಲ್ಲಿಸುವ ಮೂಲಕ ಕೇಸರಿ ಅಲೆಯನ್ನು ಬಡಿದೆಬ್ಬಿಸಲಿದ್ದಾರೆ.

ಅದೆಲ್ಲಕ್ಕಿಂತ ಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಅಖಾಡ ಕನಕಪುರಕ್ಕೆ ಯೋಗಿ ಆದಿತ್ಯನಾಥ ಭೇಟಿಕೊಟ್ಟು ಬೃಹತ್‌ ಸಮಾವೇಶವನ್ನು ಉದ್ದೇಶಿ ಮಾತನಾಡುವುದು ಅಧಿಕೃತಗೊಂಡಿದೆ. ಕನಕಪುರದಿಂದ ಒಕ್ಕಲಿಗರ ಪ್ರಾಬಲ್ಯವಿರುವ ಎಲ್ಲ ಜಿಲ್ಲೆಗಳಿಗೆ ಸಂದೇಶ ರವಾನೆ ಮಾಡುವುದು ಇದರ ಉದ್ದೇಶ. ಈ ಹಿಂದೆ ತೀವ್ರ ಚರ್ಚೆಗೆ ಕಾರಣವಾಗಿದ್ದ “ಏಸುಬೆಟ್ಟ” ವಿವಾದವನ್ನು ಬಿಜೆಪಿ ಮತ್ತೆ ಮುನ್ನೆಲೆಗೆ ತರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next