Advertisement

Election 2023: ಪುತ್ರನ ಭವಿಷ್ಯಕ್ಕೆ “ಲಕ್ಕಿ ಅಂಬಾಸಿಡರ್‌”ಏರಿದ BSY…

12:30 AM Apr 20, 2023 | Team Udayavani |

ಶಿವಮೊಗ್ಗ: ಚುನಾವಣ ರಾಜಕೀಯದಿಂದ ನಿವೃತ್ತಿ ಪಡೆದು ತಮ್ಮ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟು ಕೊಟ್ಟ ಮಾಜಿ ಸಿಎಂ ಯಡಿಯೂರಪ್ಪ ಅವರು ಪುತ್ರನ ನಾಮಪತ್ರ ಸಲ್ಲಿಕೆಗೆ ತಮ್ಮ ಲಕ್ಕಿ ಕಾರು ಅಂಬಾಸಿಡರ್‌ನಲ್ಲಿ ತೆರಳಿ ಗಮನಸೆಳೆದಿದ್ದಾರೆ.

Advertisement

ಯಡಿಯೂರಪ್ಪ ಅವರ ಅಚ್ಚುಮೆಚ್ಚಿನ ಹಳೆಯ ಅಂಬಾಸಿಡರ್‌ಗೆ ಮೂರು ದಶಕಗಳ ಹಿನ್ನೆಲೆ ಇದೆ. ಪುರಸಭೆ ಸದಸ್ಯರಾಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಬಿಎಸ್‌ವೈಗೆ 1988ರಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ದೊರಕಿತ್ತು. ಕಾರ್ಯಕರ್ತರು, ಮುಖಂಡರೇ ಇಲ್ಲದ ಆ ಕಾಲಘಟ್ಟದಲ್ಲಿ ಪಕ್ಷ ಸಂಘಟಿಸುವ ಬಹುದೊಡ್ಡ ಜವಾಬ್ದಾರಿ ಅವರ ಮೇಲಿತ್ತು. ರಾಜ್ಯ ಸುತ್ತಿ ಪಕ್ಷ ಅ ಧಿಕಾರಕ್ಕೆ ತರಬೇಕೆಂಬ ಹುಮ್ಮಸ್ಸಿಗೆ ಸಾಥ್‌ ಕೊಟ್ಟಿದ್ದು ಇದೇ ಸಿಕೆಆರ್‌ 45 ನಂಬರ್‌ನ ಅಂಬಾಸಿಡರ್‌ ಕಾರು. ಈಗಲೂ ಈ ಲಕ್ಕಿ ಕಾರಿನ ನಂಬರ್‌ನ್ನೇ ತಮ್ಮ ಮನೆಯ ಪ್ರತೀ ಕಾರಿಗೆ ಬಳಸುತ್ತಾರೆ. ಅವರ ಮನೆಯ ಯಾವುದೇ ಕಾರುಗಳು ನಂಬರ್‌ 4545 ಆಗಿರುವುದು ಈ ಸಿಕೆಆರ್‌ 45 ಕಾರಿನ ಮಹಿಮೆ.

90ರ ದಶಕದಲ್ಲಿ ಯಡಿಯೂರಪ್ಪ ಅವರನ್ನು ಕಂಡಿದ್ದ ಯಾವುದೇ ಮುಖಂಡರು ಅವರ ಅಂಬಾಸಿಡರ್‌ ಕಾರನ್ನು ಸಹ ಮರೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ಪಕ್ಷ ಕಟ್ಟಿ ಅಧಿಕಾರಕ್ಕೇರಲು ಸಾಥ್‌ ಕೊಟ್ಟ ಈ ಕಾರನ್ನು ಬಿಎಸ್‌ವೈ ಇಂದಿಗೂ ತಮ್ಮ ಜತೆ ಇಟ್ಟುಕೊಂಡಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ಈ ಕಾರನ್ನು ಕೊಡುವುದು ಬೇಡ ಎಂದು ನಿಶ್ಚಯ ಮಾಡಿ ಈಗಲೂ ಅದನ್ನು ಸುಸ್ಥಿತಿಯಲ್ಲಿಟ್ಟಿದ್ದಾರೆ. ಈಗ ಬಳಕೆ ಕಡಿಮೆಯಾದರೂ, ಅದರ ಮೇಲಿನ ಪ್ರೀತಿ, ವ್ಯಾಮೋಹ ಮಾತ್ರ ಕಡಿಮೆಯಾಗಿಲ್ಲ. ಶಿಕಾರಿಪುರಕ್ಕೆ ಬಂದಾಗ ಶಿವಮೊಗ್ಗದಿಂದ-ಶಿಕಾರಿಪುರಕ್ಕೆ ಓಡಾಡಲು ಅಥವಾ ಬೇಸರವಾದಾಗ ಈ ಕಾರಿನಲ್ಲಿ ಒಂದು ರೌಂಡ್‌ ಹೋಗಿಬರುತ್ತಾರೆ. ಬಿಎಸ್‌ವೈ ಮೊಮ್ಮಕ್ಕಳು ಈ ಕಾರಿನ ಮೇಲೆ ವಿಶೇಷ ಪ್ರೀತಿ ಹೊಂದಿದ್ದು ಅದರ ರಿಪೇರಿ, ನಿರ್ವಹಣೆ ಮಾಡುತ್ತಿದ್ದಾರೆ.

ಬಿಎಸ್‌ವೈ ಅವರ ಹಿರಿಯ ಕಾರು ಚಾಲಕ ಶಂಕರ್‌ ಈ ಕಾರಿನ ಬಗ್ಗೆ ನೆನಪು ಮೆಲುಕು ಹಾಕುತ್ತಾರೆ. 1988ರಲ್ಲಿ ಈ ಕಾರು ಖರೀದಿಸಲಾಗಿತ್ತು. ರಾಜ್ಯಾದ್ಯಂತ ಇದೇ ಕಾರಿನಲ್ಲೇ ಪ್ರಯಾಣ ಮಾಡುತ್ತಿದ್ದರು. 15 ವರ್ಷದ ಹಿಂದೆ ಬೆಂಗಳೂರಿಗೆ ಹೋಗುವಾಗ ಅರಸೀಕೆರೆ ಬಳಿ ಬೆಳಗ್ಗೆ 7.30ರ ಸಮಯದಲ್ಲಿ ಚಕ್ರ ಕಿತ್ತು ಬಂದು ಕಾರು 3 ಪಲ್ಟಿಯಾಗಿತ್ತು. ಆದರೂ ಯಡಿಯೂರಪ್ಪ ಸಾಹೇಬರಿಗೆ ಸಣ್ಣಪುಟ್ಟ ಗಾಯ ಬಿಟ್ಟರೆ ಏನೂ ಆಗಿರಲಿಲ್ಲ. ಆಗ ಈ ಕಾರು, ನಂಬರ್‌ ನನಗೇ ಇರಲಿ ಎಂದು ಆಸೆ ಪಟ್ಟರು. ರಾಜಕೀಯ ಭವಿಷ್ಯ ಕೂಡ ಉತ್ತಮವಾಗುತ್ತಾ ಬಂತು. ಅನಂತರ ಯಾವುದೇ ಕಾರು ತೆಗೆದ ುಕೊಂಡರೂ 4545 ನಂಬರ್‌ ಇಡುತ್ತಾ ಬಂದಿದ್ದಾರೆ. ನಾನೇ ಈ ಕಾರನ್ನು 15 ವರ್ಷ ಓಡಿಸಿದ್ದೆ. ರಿಪೇರಿ, ಖರ್ಚು, ವೆಚ್ಚ ಜವಾವಾªರಿ ನನಗೆ ಕೊಟ್ಟಿದ್ದಾರೆ. ಕಾರು ತೋಟದಲ್ಲೇ ಇರುತ್ತದೆ. ವಾರಕ್ಕೊಮ್ಮೆ ಚಾಲನೆ ಮಾಡಿ ನಿಲ್ಲಿಸುತ್ತೇವೆ. ಎರಡು ಬಾರಿ ಎಂಜಿನ್‌ ರೆಡಿ ಮಾಡಿಸಿದ್ದೇವೆ. ಆಯುಧ ಪೂಜೆ ದಿನ ಶಾಲೆ ಬಸ್‌ಗಳ ಜತೆ ಇದಕ್ಕೂ ಪೂಜೆ ಮಾಡಿ ಓಡಿಸುತ್ತೇವೆ ಎನ್ನುತ್ತಾರೆ ಶಂಕರ್‌.

ನನಗಿಂತ ಮೊದಲು ಮಂಜಣ್ಣ, ನಾನು, ಕೃಷ್ಣಪ್ಪ ಎಂಬವರು ಈ ಕಾರನ್ನು ಓಡಿಸಿದ್ದೇವೆ. ದೂರದ ಪ್ರಯಾಣಕ್ಕೆ ನನ್ನನ್ನೇ ಕರೆದುಕೊಂಡು ಹೋಗುತ್ತಿದ್ದರು. ಕೇರಳ, ಗೋವಾ, ಮಹಾರಾಷ್ಟ್ರ ಕೂಡ ಪ್ರವಾಸ ಮಾಡಿದ್ದೇವೆ. ಅಡ್ವಾಣಿಯವರು ಸಹ ಈ ಕಾರಲ್ಲಿ ಓಡಾಡಿದ್ದಾರೆ. ಬುಧವಾರ ಬೆಳಗ್ಗೆ ಸಹ ಯಡಿಯೂರಪ್ಪ ಅವರು ಇದೇ ಕಾರಿನಲ್ಲಿ ದೇವಸ್ಥಾನಕ್ಕೆ ಹೋಗೋಣ ಎಂದರಲ್ಲದೇ ಬಳಿಕ ಅದೇ ಕಾರಿನಲ್ಲಿ ತೆರಳಿದರು ಎಂದು ಶಂಕರ್‌ ತಿಳಿಸಿದರು.

Advertisement

ಶಾಮನೂರು ಶಿವಶಂಕರಪ್ಪಗೆ 555 ಬಹಳ ಅದೃಷ್ಟದ ಸಂಖ್ಯೆ
ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ 555 ಬಹಳ ಅದೃಷ್ಟದ ಸಂಖ್ಯೆ. ಹಾಗಾಗಿಯೇ ಯಾವುದೇ ಕಾರು, ವಾಹನ ಖರೀದಿಸಿದರೂ ಕೊನೆಯ ಅಂಕಿ 555 ಇರಲೇಬೇಕು. ಇತ್ತೀಚಿನವರೆಗೆ ತಮ್ಮ ಅದೃಷ್ಟದ 555 ನಂಬರ್‌ನ ಅಂಬಾಸಿಡರ್‌ ಕಾರಿನಲ್ಲೇ ಬಂದು ನಾಮಪತ್ರ ಸಲ್ಲಿಸುತ್ತಿದ್ದರು. ಈಗ ಬಳಸುತ್ತಿರುವ ಕಾರ್‌ನ ನಂಬರ್‌ನ ಕೊನೆಯ ಮೂರು ಅಂಕಿ ಸಹ 555 ಆಗಿದೆ. ಅದೃಷ್ಟದ ಸಂಕೇತವಾಗಿ ಸದಾ ಬಿಳಿವಸ್ತ್ರ ಧರಿಸುತ್ತಾರೆ. ತಮ್ಮ ಮನೆದೇವರು ಹೊಳಲ್ಕೆರೆ ತಾಲೂಕಿನ ಎಮ್ಮಿಗನೂರು ಗ್ರಾಮದ ಶ್ರೀ ಕಲ್ಲೇಶ್ವರ ದೇವಸ್ಥಾನಕ್ಕೆ ತೆರಳಿ ನಾಮಪತ್ರ, ಬಿ-ಫಾರಂನ್ನು ದೇವರ ಮುಂದಿಟ್ಟು ಪೂಜೆ ಮಾಡಿಸಿದ ಅನಂತರವೇ ನಾಮಪತ್ರ ಸಲ್ಲಿಸುವುದನ್ನು ರೂಢಿಸಿಕೊಂಡಿದ್ದಾರೆ. ನಾಮಪತ್ರಕ್ಕೆ ಕಡ್ಡಾಯವಾಗಿ ಕುರುಬ ಮತ್ತು ಮುಸ್ಲಿಂ ಸಮಾಜದವರೇ ಅನುಮೋದಕರಾಗಿರುತ್ತಾರೆ. ಅವರ ಸಹಿ ಅದೃಷ್ಟದ ಸಂಕೇತ ಎಂದೇ ಭಾವಿಸಿದ್ದಾರೆ.

ತಾಯಿ ಕೊಟ್ಟ ಅದೃಷ್ಟದ ಹಸುರು ಸೀರೆ ಉಟ್ಟು ಹೆಬ್ಟಾಳ್ಕರ್‌ನಾಮಪತ್ರ ಸಲ್ಲಿಕೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ತಾಯಿ ಕೊಟ್ಟ ಅದೃಷ್ಟದ ಹಸುರು ಸೀರೆಯನ್ನೇ ಧರಿಸಿ ನಾಮಪತ್ರ ಸಲ್ಲಿಸುವುದು ವಿಶೇಷ. ಅದರಂತೆ ವಿಧಾನಸಭೆ ಚುನಾವಣೆಗೂ ಹಸುರು ಸೀರೆ ಧರಿಸಿ ನಾಮಪತ್ರ ಸಲ್ಲಿಸಿದರು. 2018ರ ವಿಧಾನಸಭೆ ಚುನಾವಣೆ, ಸಹೋದರ ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್‌ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸುವಾಗ ಹೆಬ್ಟಾಳ್ಕರ್‌ಹಸುರು ಸೀರೆ ಧರಿಸಿದ್ದರು. ಈಗ ತಮ್ಮ ನಾಮಪತ್ರ ಸಲ್ಲಿಸುವಾಗಲೂ ಅದೇ ಅದೃಷ್ಟದ ಹಸುರು ಸೀರೆಯಲ್ಲಿ ಮಿಂಚಿದರು. ಈ ಹಸುರು ಸೀರೆಯನ್ನು ಅವರ ತಾಯಿ ಗಿರಿಜಾ ಹಟ್ಟಿಹೊಳಿ ನೀಡಿದ್ದಾರೆ. ಈ ಸೀರೆ ಶುಭ ಸಂಕೇತವಾಗಿರುವುದರಿಂದ ಹೆಬ್ಟಾಳ್ಕರ್‌ ಅವರು ಇದನ್ನೇ ಧರಿಸಿ ನಾಮಪತ್ರ ಸಲ್ಲಿಸುತ್ತಾರೆ. ನಾಮಪತ್ರ ಸಲ್ಲಿಸುವಾಗ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ನೀಡಿದ ಆಶೀರ್ವಾದ ಹೂವನ್ನು ಡಬ್ಬಿಯಲ್ಲಿ ತಂದಿದ್ದರು. ಪ್ರತೀ ನಾಮಪತ್ರ ಸಲ್ಲಿಸುವಾಗಲೂ ಹೆಬ್ಟಾಳ್ಕರ್‌ ದೇವಿಯ ಹೂ ತರುವುದು ಕೂಡ ವಿಶೇಷ.

~ ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next