ಉತ್ತರ ಪ್ರದೇಶ: ಪಾಪಿ ಕೋವಿಡ್ ಸೋಂಕು ಜನರ ಪ್ರಾಣದ ಜೊತೆಗೆ ಮಾನವೀಯತೆಯನ್ನು ಕಿತ್ತುಕೊಳ್ಳುತ್ತಿದೆ. ಕೋವಿಡ್ ಮಹಾಮಾರಿಗೆ ಭಯಪಟ್ಟು ಒಬ್ಬರಿಗೊಬ್ಬರು ಸಹಾಯ ಮಾಡದಂತಹ ಪರಿಸ್ಥಿತಿಗೆ ಜನರು ಬಂದು ತಲುಪಿದ್ದಾರೆ. ಇದೀಗ ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆಯೊಂದು ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ.
ಅಂತ್ಯ ಸಂಸ್ಕಾರಕ್ಕಾಗಿ ತನ್ನ ಮಡದಿಯ ಶವವನ್ನು ವೃದ್ಧನೋರ್ವ ಸೈಕಲಿನಲ್ಲಿ ಹೊತ್ತು ಇಡೀ ಊರು ತಿರುಗಾಡಿದ ಮನಕಲಕುವಂತಹ ಘಟನೆ ಉತ್ತರ ಪ್ರದೇಶದ ಜೌನಪುರ್ ಜಿಲ್ಲೆಯ ಅಂಬೆರಪುರ ಗ್ರಾಮದಲ್ಲಿ ನಡೆದಿದೆ. ವಯಸ್ಸಾದ ತಿಲಕಧರಿ ಸಿಂಗ್ ಅವರಿಗೆ ಹೆಂಡತಿ ಕಳೆದುಕೊಂಡ ದುಃಖ ಒಂದು ಕಡೆಯಾದರೆ, ಆಕೆಯ ಅಂತ್ಯ ಸಂಸ್ಕಾರಕ್ಕೆ ಹಳ್ಳಿ ಜನ ಅವಕಾಶ ನೀಡದಿದ್ದದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ತಿಲಕಧರಿ ಅವರ ಪತ್ನಿ 50 ವರ್ಷದ ರಾಜಕುಮಾರಿ ಅವರ ಸ್ಥಿತಿ ಸೋಮವಾರ ತೀವ್ರ ಬಿಗಡಾಯಿಸಿತ್ತು. ಕೂಡಲೇ ಆಕೆಯನ್ನು ಉಮಾನಾಥ್ ಸಿಂಗ್ ಹೆಸರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಳು.
ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಸಿಗದ ಹಿನ್ನೆಲೆ ತಿಲಕ್ ಧರಿ ತನ್ನ ಪತ್ನಿಯ ಶವವನ್ನು ಸೈಕಲ್ ಮೇಲೆ ತನ್ನೂರಿಗೆ ತಂದಿದ್ದ. ಆದರೆ, ಊರಿನ ಜನ ಮೃತ ದೇಹದ ಅಂತ್ಯ ಸಂಸ್ಕಾರಕ್ಕೆ ಅನುಮತಿ ನೀಡಿಲ್ಲ. ಆಕೆ ಕೋವಿಡ್‍ನಿಂದ ಮೃತ ಪಟ್ಟಿರಬಹುದೆಂದು ಶಂಕಿಸಿದ ಗ್ರಾಮಸ್ಥರು, ಹೆಣ ಹೂಳಲು ವಿರೋಧ ವ್ಯಕ್ತಪಡಿಸಿದ್ದಾರೆ.
ಹೆಂಡತಿಯ ಶವ ಸೈಕಲ್ ಮೇಲೆ ಇಟ್ಟುಕೊಂಡು ಇಡೀ ಊರು ಸುತ್ತಿದ ವೃದ್ಧನಿಗೆ ಯಾರೋಬ್ಬರು ಸಹಾಯ ಮಾಡಿಲ್ಲ. ಕೊನೆಗೆ ನಡುರಸ್ತೆಯಲ್ಲಿಯೇ ಸೈಕಲ್ ಹಾಗೂ ಶವ ಬಿಟ್ಟು ದಿಕ್ಕು ತೋಚದಂತೆ ತಿಲಕಧರಿ ಕುಳಿತು ಬಿಟ್ಟಿದ್ದ. ಆತನ ದುಸ್ಥಿತಿಯ ಫೋಟೊಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರ ಕಣ‍್ಣಾಲಿಗೆಗಳನ್ನು ತೇವಗೊಳಿಸುತ್ತಿವೆ.
ಕೊನೆಗೆ ಜೌನಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧನಿಗೆ ಸಹಾಯ ಮಾಡಿದ್ದಾರೆ. ಪೊಲೀಸರೆ ಮುಂದೆ ನಿಂತು ಶವಕ್ಕೆ ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾರೆ.