Advertisement

 ಹಿರಿಯರ ಗುರುತು ಚೀಟಿ ವಿತರಣೆ: ರಾಜ್ಯದಲ್ಲಿ ಉಡುಪಿ ಜಿಲ್ಲೆಗೆ ಮೂರನೇ ಸ್ಥಾನ

11:41 PM Jul 05, 2020 | Sriram |

ಉಡುಪಿ: ಹಿರಿಯ ನಾಗರಿಕರ ಹಿತರಕ್ಷಣೆಯ ಉದ್ದೇಶದಿಂದ ಸರಕಾರ ಹಿರಿಯ ನಾಗರಿಕರಿಗೆ ನೀಡುವ ಗುರುತಿನ ಚೀಟಿ ವಿತರಿಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ 3,999 ಮಂದಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಹಿರಿಯರ ಗುರುತು ಚೀಟಿ ವಿತರಣೆಯಲ್ಲಿ ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ.

Advertisement

ಮಾಹಿತಿ ಕೊರತೆಯಿಂದ ಹಿರಿಯ ನಾಗರಿಕ ಸಮುದಾಯದವರು ಈ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎನ್ನುವ ಅಪವಾದದ ಮಧ್ಯೆಯೂ, ಜಿಲ್ಲೆಯಲ್ಲಿ ಇಷ್ಟು ಪ್ರಮಾಣದ ಸಾಧನೆಯಾಗಿದೆ.

ಸರಕಾರದ ಅಧಿಕೃತ ಇಲಾಖೆ ಜಿಲ್ಲಾ ಮಟ್ಟದಲ್ಲಿ ದೃಢೀಕರಿಸಿ, ಈ ಚೀಟಿಯ ವಿತರಣೆಯನ್ನು ಹಲವಾರು ವರ್ಷಗಳಿಂದ ನಗರ ಹಾಗೂ ಗ್ರಾಮಾಂತರ ಭಾಗದ ಹಿರಿಯ ನಾಗರಿಕರಿಗೆ ವಿತರಿಸುತ್ತಿತ್ತು. ಈಗ ಸೇವಾ ಸಿಂಧು ಯೋಜನೆಯಲ್ಲಿ ಆನ್‌ಲೈನ್‌ ಮೂಲಕ ಗುರುತು ಚೀಟಿ ವಿತರಿಸಲಾಗುತ್ತಿದೆ.

ಗ್ರಾಮೀಣ ಭಾಗದ ಅವಿದ್ಯಾವಂತ ಹಿರಿಯರಿಗೆ ಈ ಸೌಲಭ್ಯದ ಮಾಹಿತಿಯಿಲ್ಲ. ಹಿರಿಯರು ಚೀಟಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಅರ್ಜಿ ಸಲ್ಲಿಸುವುದು ಹೇಗೆ ಇತ್ಯಾದಿ ಗೊಂದಲಗಳು ಹಿರಿಯ ನಾಗರಿಕರಲ್ಲಿದ್ದವು. ಹೀಗಾಗಿ ಚೀಟಿ ಪಡೆಯಲು ಸಾಧ್ಯವಾಗದೆ ಹಿರಿಯ ನಾಗರಿಕರಿಗೆ ಸರಕಾರದ ಸೌಲಭ್ಯಗಳು ಮರೀಚಿಕೆಯಾಗಿದ್ದವು.

ಏನಿದು ಚೀಟಿ?
60 ವರ್ಷ ತುಂಬಿದ ಹಿರಿಯ ನಾಗರಿಕರಿಗೆ ಸರಕಾರ ಹಿರಿಯ ನಾಗರಿಕರ ಗುರುತಿನ ಚೀಟಿ ನೀಡುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪಾಲಕರ, ಪೋಷಕರ ಸಂರಕ್ಷಣೆ ಮತ್ತು ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯಡಿ ಸರಕಾರದ ವಿವಿಧ ಯೋಜನೆಗಳನ್ನು ಪಡೆಯಲು ಹಿರಿಯರ ಗುರುತಿನ ಚೀಟಿ ಹೊಂದಿರುವುದು ಅವಶ್ಯಕವಾಗಿದೆ.

Advertisement

ದಾಖಲೆಗಳು
ಆಧಾರ್‌ ಕಾರ್ಡ್‌,(ಮೊಬೈಲ್‌ ನಂಬರ್‌ ಸೇರ್ಪಡೆಯಾಗಿರಬೇಕು) ಹುಟ್ಟಿದ ದಿನಾಂಕ, ಮನೆ ದೂರವಾಣಿ ಸಂಖ್ಯೆ, ತುರ್ತು ಸಂದರ್ಭ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ, ರಕ್ತದ ಗುಂಪು, ಪಾಸ್‌ ಪೋರ್ಟ್‌ 2 ಭಾವಚಿತ್ರವಿರಬೇಕು.

ದೊರೆಯುವ ಸವಲತ್ತುಗಳು
ಹಿರಿಯ ನಾಗರಿಕರು ಅಪರಿಚಿತ ಸ್ಥಳದಲ್ಲಿ ಅಪಘಾತ, ಅಸ್ವಸ್ಥ ಇನ್ನಿತರ ತೊಂದರೆಗೊಳಗಾದಲ್ಲಿ ತುರ್ತು ಚಿಕಿತ್ಸೆ ನೀಡಲು ಈ ಚೀಟಿ ನೆರವಾಗುತ್ತದೆ. ಚೀಟಿಯಲ್ಲಿ ತುರ್ತು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಲಭ್ಯವಿರುವುದರಿಂದ ಸಂಬಂಧಿಕರನ್ನು ಸಂಪರ್ಕಿಸಲು ಇದರಿಂದ ಅನುಕೂಲವಾಗುತ್ತದೆ. ರಕ್ತದ ಮಾದರಿಯ ಮಾಹಿತಿ ಇರುವುದರಿಂದ ತುರ್ತು ಸಂದರ್ಭದಲ್ಲಿ ರಕ್ತ ಪೂರೈಸಲು ಸಹಾಯವಾಗುತ್ತದೆ.

ಸರಕಾರಿ ಬಸ್‌, ರೈಲು, ಇಂಡಿಯನ್‌ ಏರ್‌ಲೈನ್ಸ್‌, ಏರ್‌ ಇಂಡಿಯಾ ಹಾಗೂ ಸಹರಾ ಏರ್‌ಲೈನ್ಸ್‌ ಇಕನಾಮಿಕ್‌ ವರ್ಗದಲ್ಲಿ ರಿಯಾಯಿತಿ ಪಡೆಯಲು ಸಹಕಾರಿಯಾಗುತ್ತದೆ. ಹೆತ್ತವರ ಮತ್ತು ಹಿರಿಯ ನಾಗರಿಕರ ಕಾಯಿದೆಯಡಿ ಪಡೆಯಬಹುದಾದ ಸವಲತ್ತುಗಳು, ಕೇಂದ್ರ ಹಾಗೂ ರಾಜ್ಯ ಸರಕಾರ ಹಿರಿಯ ನಾಗರಿಕರಿಗೆ ಕೊಡಮಾಡುವ ಸೌಲಭ್ಯಗಳನ್ನು ಪಡೆಯಲು ಈ ಗುರುತಿನ ಚೀಟಿ ಬಹೂಪಯೋಗಿಯಾಗಿ ಬಳಕೆಯಾಗುತ್ತದೆ.

ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸಬೇಕು
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಹಿರಿಯ ನಾಗರಿಕರ ಗುರುತಿನ ಚೀಟಿ ಪಡೆಯಲು ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವಿದೆ. ಸೇವಾಸಿಂಧು (https://sevasindhu.karnataka.gov.in) ವೆಬ್‌ಸೈಟ್‌ನಲ್ಲಿ ಅಥವಾ ಸಿ.ಎಸ್‌.ಸಿ. ಕೇಂದ್ರಗಳಲ್ಲಿ ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಶುಲ್ಕ 40 ರೂ. ಆಗಿರುತ್ತದೆ.

ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನ
ಹಿರಿಯ ನಾಗರಿಕರು ಸರಕಾರ ಮತ್ತು ಇತರ ವ್ಯವಸ್ಥೆಯಡಿ ದೊರೆಯುವ ಸವಲತ್ತು ಪಡೆಯುವಂತಾಗಬೇಕು. ಈ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನ ನಡೆಸುತ್ತಿದ್ದೇವೆ. ಇದರ ಪರಿಣಾಮ ಹೆಚ್ಚಿನ ಹಿರಿಯ ನಾಗರಿಕರು ಕಾರ್ಡ್‌ ಮಾಡಿಸಿಕೊಂಡಿದ್ದಾರೆ.
ಚಂದ್ರ ನಾಯ್ಕ ,
ಅಂಗವಿಕಲರ ಹಾಗೂ ಹಿರಿಯ ನಾಗರಿಕರ
ಸಬಲೀಕರಣ ಅಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next