ಬಾಗಲಕೋಟೆ : ಜಿಲ್ಲೆಯಲ್ಲಿ ಮುಂಬರುವ ಜಿ.ಪಂ. ಹಾಗೂ ವಿಧಾನಸಭೆ ಚುನಾವಣೆಗೆ ಪಕ್ಷದ ಹಿರಿಯರು ಸೂಚಿಸಿದರೆ ಮಾತ್ರ ಸ್ಪರ್ಧೆ ಮಾಡುತ್ತೇನೆ. ಪಕ್ಷದ ಹಿರಿಯರ ಆಶೀರ್ವಾದ ಇದ್ದರೆ ಶಾಸಕಿಯೂ ಆಗುತ್ತೇನೆ. ಇಲ್ಲದಿದ್ದರೂ ಹಿರಿಯರ ಸಲಹೆ- ಸೂಚನೆಯಂತೆ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಎಂ.ಎಸ್. ಈಟಿ ಫೌಂಡೇಶನ್ ಕಾರ್ಯದರ್ಶಿ ರಕ್ಷಿತಾ ಭರತಕುಮಾರ ಈಟಿ ಹೇಳಿದರು.
ಕೊರೊನಾ 2 ನೇ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಪತ್ರಕರ್ತರ ಅನುಕೂಲತೆಗಾಗಿ ಪತ್ರಿಕಾಭವನಕ್ಕೆ ಎಂ.ಎಸ್.ಈಟಿ ಫೌಂಡೇಶನ್ ವತಿಯಿಂದ ಅಟೋಮ್ಯಾಟಿಕ್ ಸ್ಯಾನಿಟೈಸರ್ ಮಷಿನ್ ಹಸ್ತಾಂತರಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಕ್ಷದ ಹಿರಿಯರ ಒಪ್ಪಿಗೆ ಇದ್ದರೆ ಮಾತ್ರ ಜಿಪಂ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ.
ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಅತಿಹೆಚ್ಚು ಅವಕಾಶಗಳಿವೆ. ಲಕ್ಷ್ಮಿ ಹೆಬ್ಟಾಳಕರ, ಸೌಮ್ಯ ರಡ್ಡಿ, ಅಂಜಲಿ ನಿಂಬಾಳ್ಕರ ಮುಂತಾದವರೇ ಇದಕ್ಕೆ ಸಾಕ್ಷಿ. ನಾನು ಪಕ್ಷವನ್ನು ತಾಯಿ ರೂಪದಲ್ಲಿ ನೋಡುತ್ತೇನೆ. ಜನ್ಮ ನೀಡಿದ ತಾಯಿ ಒಂದೆಡೆಯಾದರೆ, ನಮ್ಮನ್ನು ಗುರುತಿಸಿ, ಹಲವು ಜವಾಬ್ದಾರಿ ನೀಡಿದ ಕಾಂಗ್ರೆಸ್ ಪಕ್ಷವೂ ನನಗೆ ತಾಯಿ ರೂಪ ಎಂದರು.
ಸಧ್ಯ ಜಿಪಂ ಚುನಾವಣೆ ಬಂದಾಕ್ಷಣ ನಾನು ಟಿಕೆಟ್ ಕೊಡಿ ಎಂದು ಕೇಳುವುದಿಲ್ಲ. ಪಕ್ಷ ಸಂಘಟನೆ ಹಾಗೂ ನನ್ನ ಸೇವೆ ಗುರುತಿಸಿ, ಚುನಾವಣೆಗೆ ಸ್ಪರ್ಧಿಸಲು ಸೂಚಿಸಿದರೆ ಮಾತ್ರ ಸ್ಪರ್ಧೆ ಮಾಡುತ್ತೇನೆ. ಇಲ್ಲದಿದ್ದರೆ ಪಕ್ಷ ಸಂಘಟನೆ, ಮಹಿಳೆಯರ ಜಾಗೃತಿಯೇ ನನ್ನ ಗುರಿ ಎಂದು ಹೇಳಿದರು. ಕೊರೊನಾ ಬಗ್ಗೆ ಜಾಗೃತಿ ವಹಿಸಿ: ರಾಜ್ಯಾದ್ಯಾಂತ ಕೊರೊನಾ 2ನೇ ವ್ಯಾಪಕವಾಗಿ ಹರಡುತ್ತಿದೆ. ಜನರು ಜಾಗೃತಿ ವಹಿಸಬೇಕು. ಪ್ರತಿಯೊಬ್ಬರೂ ಗಂಭೀರವಾಗಿ ಹಾಗೂ ಸವಾಲಿನ ಪರಿಸ್ಥಿತಿ ನಿಭಾಯಿಸಬೇಕು. ಈ ವಿಷಯದಲ್ಲಿ ಕೇವಲ ಸರ್ಕಾರ ಟೀಕಿಸಿದರೆ ಕೊರೊನಾ ನಿಯಂತ್ರಣವಾಗಲ್ಲ. ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು.
ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು. ಬಡವರ ನೆರವಿಗೆ ಫೌಂಡೇಶನ್: ಜಿಲ್ಲೆಯಲ್ಲಿ ಕೊರೊನಾ ಹಾಗೂ ಪ್ರವಾಹದ ವೇಳೆ ಬಡವರು, ಶ್ರಮಿಕರು, ಮಹಿಳೆಯರು, ಕೂಲಿ ಕಾರ್ಮಿಕರಿಗೆ ನಮ್ಮ ಮಾವನವರ ಹೆಸರಿನಲ್ಲಿ ಸ್ಥಾಪಿಸಿದ ಎಂ.ಎಸ್. ಈಟಿ ಫೌಂಡೇಶನ್‌ದಿಂದ ನೆರವು ನೀಡುವ ಕಾರ್ಯ ಮಾಡುತ್ತಿದ್ದಾರೆ. ಆಹಾರ ಕಿಟ್, ಸರ್ಕಾರಿ ಕಚೇರಿ, ಶಾಲೆಗಳಲ್ಲಿ ಸ್ಯಾನಿಟೈಜರ್ ಯಂತ್ರ ಅಳವಡಿಸಲಾಗಿದೆ. ಇದು ಪ್ರಚಾರಕ್ಕಾಗಿ ಮಾಡುತ್ತಿಲ್ಲ. ಬಡವರಿಗೆ ಸಹಾಯವಾಗಲಿ, ಮತ್ತೂಬ್ಬರಿಗೆ ಪ್ರೇರಣೆಯಾಗಲಿ ಎಂಬುದಷ್ಟೇ ನಮ್ಮ ಕಳಕಳಿ ಎಂದು ತಿಳಿಸಿದರು. ಮಹಿಳಾ ಕಾಂಗ್ರೆಸ್‌ನ ಬಾಗಲಕೋಟೆ ಬ್ಲಾಕ್ ಅಧ್ಯಕ್ಷೆ ರೇಣುಕಾ ನ್ಯಾಮಗೌಡರ, ಪ್ರಮುಖರಾದ ಜಯಶ್ರೀ ಗುಳಬಾಳ, ಗಂಗಾ ರಾಠೊಡ, ಅನ್ನಪೂರ್ಣ ಗೂಗಿಹಾಳ ಉಪಸ್ಥಿತರಿದ್ದರು.