ಮುಂಬಯಿ: ಗೋರೆಗಾಂವ್ ಕರ್ನಾಟಕ ಸಂಘದ ವತಿಯಿಂದ ವಾರ್ಷಿಕ ನಾರಾಯಣ ಶೆಟ್ಟಿ ಮತ್ತು ಪದ್ಮಾವತಿ ಶೆಟ್ಟಿ ಸಂಸ್ಮರಣ ದತ್ತಿನಿಧಿ ಕಾರ್ಯಕ್ರಮವು ಮಾ. 26ರಂದು ಸಂಜೆ ಗೋರೆಗಾಂವ್ ಕರ್ನಾಟಕ ಸಂಘದ ಬಾಕ್ರೂರು ರುಕ್ಮಿಣಿ ಶೆಟ್ಟಿ ಮಿನಿ ಸಭಾಗೃಹದಲ್ಲಿ ನಡೆಯಿತು.
ಈ ದತ್ತಿ ನಿಧಿಯನ್ನು ನಾರಾಯಣ್ ಶೆಟ್ಟಿ ಮತ್ತು ಪದ್ಮಾವತಿ ಶೆಟ್ಟಿ ಅವರ ಪುತ್ರ, ಗೋರೆಗಾಂವ್ ಪಶ್ಚಿಮದ ಹೊಟೇಲ್ ಪ್ರಕಾಶ್‌ನ ಮಾಲಕ ಪ್ರಕಾಶ್ ಶೆಟ್ಟಿ ಸ್ಥಾಪಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ನಿತ್ಯಾನಂದ ಡಿ. ಕೊಟ್ಯಾನ್ ಮಾತನಾಡಿ, ಗೋರೆಗಾಂವ್ ಕರ್ನಾಟಕ ಸಂಘ ಹಿರಿಯರ ನೆನಪನ್ನು ಉಳಿಸುವ ದೃಷ್ಟಿಯಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಭವಿಷ್ಯದಲ್ಲೂ ಇದೇ ರೀತಿಯ ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತಿರಲಿ. ಸಂಘದ ಪ್ರತಿಯೊಂದು ಕಾರ್ಯಕ್ರಮಗಳಿಗೆ ಸದಸ್ಯರು, ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ತಿಳಿಸಿದರು.
ಕವಿಯತ್ರಿ, ಲೇಖಕಿ ಹೇಮಾ ಸದಾನಂದ ಅಮೀನ್ ಅವರು ಸಾಮಾಜಿಕ ನೆಲೆಗಟ್ಟಲ್ಲಿ ಜಾನಪದ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಮನುಷ್ಯ ಸ್ವಯಂನಿಂದ ಉದಾತ್ತವಾದುದರ ಕಡೆಗೆ ನಡೆಯಲು ಜಾನಪದ ಆದರ್ಶಗಳು ನಮಗೆ ದಾರಿದೀಪವಾಗುತ್ತವೆ. ಜಾನಪದ ಸಾಹಿತ್ಯದಲ್ಲಿ ಮಹಿಳೆಯರದ್ದೇ ಸಿಂಹಪಾಲು ಎಂದು ಹೇಳಬಹುದು. ಅವರ ದಿನನಿತ್ಯದ ಕೆಲಸಗಳಲ್ಲಿ ಹಾಡುಗಳೇ ಹಾಸು ಹೊಕ್ಕಿವೆ ಎಂದರು.
ಹಿರಿಯರಾದ ವೇದಾ ಸುವರ್ಣ ಮತ್ತು ಸುಮಿತ್ರಾ ಗುಜರಾನ್ ಅವರನ್ನು ಯುವ ವಿಭಾಗದ ವತಿಯಿಂದ ಗೌರವಿಸಲಾಯಿತು. ಗೌರವವನ್ನು ಸ್ವೀಕರಿಸಿದ ಸುಮಿತ್ರಾ ಗುಜರನ್ ಅವರು, ಮಹಿಳೆಯರು ಅನ್ಯಾಯವನ್ನು ಎದುರಿಸುವ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದರು.
ಸಂಘದ ಮಾಜಿ ಕಾರ್ಯದರ್ಶಿ ವೇದಾ ಸುವರ್ಣ ಅವರಿಂದ ಜಾನಪದ ಗೀತೆಗಳ ಗಾಯನ ನಡೆಯಿತು. ಸರಿತಾ ನಾಯಕ್, ಉಷಾ ಡಿ. ಶೆಟ್ಟಿ, ಸುಮನಾ ಶಿಬ್ಡೆ ಅವರು ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷ ವಿಶ್ವನಾಥ್ ಶೆಟ್ಟಿ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ವಾಣಿ ಶೆಟ್ಟಿ ಪ್ರಾಸ್ತಾವಿಸಿದರು. ಕೋಶಾಧಿಕಾರಿ ಆನಂದ ಶೆಟ್ಟಿ ವಂದಿಸಿದರು. ಸಂಘದ ಪದಾಧಿಕಾರಿಗಳು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ತುಳು-ಕನ್ನಡಿಗರು, ಸಾಹಿತ್ಯಾಭಿಮಾನಿಗಳು ಪಾಲ್ಗೊಂ ಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.