ವಾಡಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬಳವಡಗಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಏಲಾಂಬಿಕೆ ದೇವಿಯ ಶಿಲಾದೇವಸ್ಥಾನದ ನಿರ್ಮಾಣದಲ್ಲಿ ಕದಂಬರ ಶೈಲಿಯ ಪ್ರಭಾವ ಹೆಚ್ಚಿದೆ.
ಭಾರತದ ಏಕೈಕ ದಕ್ಷಿಣಾಭಿಮುಖೀ ದೇವಸ್ಥಾನ ಎನ್ನಲಾದ ಈ ದೇವಸ್ಥಾನಕ್ಕೆ ಏಳು ನೂರು ವರ್ಷಗಳ ಐತಿಹಾಸಿಕ ಹಿನ್ನೆಲೆಯಿದೆ ಎಂದು ಹೇಳಲಾಗಿದ್ದು, ಮೂಲ ದೇವಸ್ಥಾನದ ಗರ್ಭಗುಡಿಯನ್ನು ನೆಲದಾಳದಲ್ಲೇ ಉಳಿಸಿಕೊಂಡು ನೂತನ ದೇಗುಲ ನಿರ್ಮಿಸಲಾಗುತ್ತಿದೆ. ರಾಜ್ಯ ಮುಜುರಾಯಿ ಇಲಾಖೆಯಿಂದ ಘೋಷಣೆಯಾದ ಐದು ಕೋಟಿ ರೂ. ಅನುದಾನದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕೈಗೊಳ್ಳಲಾಗಿದ್ದು, ಶಾಸಕ ಪ್ರಿಯಾಂಕ್ ಖರ್ಗೆ ಸಚಿವರಿದ್ದಾಗ 50 ಲಕ್ಷ ರೂ., ಸದಾನಂದಗೌಡ ಸರ್ಕಾರದಲ್ಲಿ 30 ಲಕ್ಷ ರೂ., ನಂತರ ಆರು ಲಕ್ಷ ರೂ. ಅಲ್ಲದೇ ಶೃಂಗೇರಿ ಮಠದಿಂದ ಎರಡು ಲಕ್ಷ ರೂ., ಧರ್ಮಸ್ಥಳ ಟ್ರಸ್ಟ್‌ದಿಂದ 10 ಲಕ್ಷ ರೂ. ಸೇರಿದಂತೆ ಸದ್ಯ ಒಂದು ಕೋಟಿ ರೂ. ದೇವಸ್ಥಾನ ಸಮಿತಿಯ ಕೈಸೇರಿದೆ. ಭಕ್ತರ ದೇಣಿಗೆ ಹಣ ಪ್ರತ್ಯೇಕವಾಗಿದೆ. ಬಾಕಿ ಅನುದಾನ ಬಿಡುಗಡೆಗೆ ವಿಘ್ನಗಳು ಎದುರಾಗಿದ್ದರಿಂದ ದೇಗುಲ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗಿದ್ದು, ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.
2012ರಲ್ಲಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಾಧಿಕಾರಿ ಶ್ರೀ ಭೀಮೇಶ್ವರ ಜೋಶಿ ಅವರಿಂದ ಭೂಮಿಪೂಜೆ ನೆರವೇರಿದ್ದು, ಉಡುಪಿಯ ಹೆಸರಾಂತ ಶಿಲ್ಪಿ ರಾಜಶೇಖರ ಹೆಬ್ಟಾರ ಈ ದೇಗುಲ ನಿರ್ಮಿಸುತ್ತಿದ್ದಾರೆ. ಹೆಚ್ಚಿನ ಅಲಂಕಾರವಿಲ್ಲದೇ ಪಿರಾಮಿಡ್ ಆಕಾರದಲ್ಲಿ ಶಿಖರ ನಿರ್ಮಿಸಲಾಗಿದೆ. ಅದರ ತುದಿಯಲ್ಲಿ ಶಿಲಾ ಕಲಶ ಕೆತ್ತಲಾಗಿದೆ. ಚತುರ್ಭುಜ ಲಂಬ ಪ್ರಕ್ಷೇಪಗಳ ಏಕರೂಪದ ಸರಣಿಯಿಂದ ಅಲಂಕರಿಸಲ್ಪಟ್ಟಿದೆ. ಶೇ.90ರಷ್ಟು ಶಿಲ್ಪಕಲೆ ಕೆತ್ತನೆ ಮತ್ತು ಜೋಡಣೆ ಕಾರ್ಯ ಪೂರ್ಣಗೊಂಡಿದ್ದು, ಬಾದಾಮಿ ಮತ್ತು ಐಹೊಳೆ ದೇವಸ್ಥಾನಗಳನ್ನು ಹೋಲುತ್ತಿದೆ. ಅತ್ಯಾಕರ್ಷಕ ಶೈಲಿಯಲ್ಲಿ ಸಿದ್ಧವಾಗಿರುವ ಈ ದೇಗುಲ ಭಕ್ತರ ಕಣ್ಮನ ಸೆಳೆಯುತ್ತಿದೆ. 2023ರ ಫೆಬ್ರುವರಿ ತಿಂಗಳಲ್ಲಿ ದೇವಸ್ಥಾನವನ್ನು ಅದ್ಧೂರಿಯಾಗಿ ಉದ್ಘಾಟನೆ ನೆರವೇರಿಸಲು ಗ್ರಾಮದ ಮುಖಂಡರು ಈಗಿನಿಂದಲೇ ಸಿದ್ಧತೆ ನಡೆಸುತ್ತಿದ್ದಾರೆ.
ಶ್ರೀ ಏಲಾಂಬಿಕೆಯ ಹಳೆಯ ದೇಗುಲದ ಜೀರ್ಣೋದ್ಧಾರ ಕಾರ್ಯ ಬಹುತೇಕ ಪೂರ್ಣವಾಗಿದೆ. ಸರ್ಕಾರ ಮತ್ತು ಭಕ್ತರ ದೇಣಿಗೆ ಜತೆಗೆ ಶೃಂಗೇರಿ ಪೀಠ ಮತ್ತು ಧರ್ಮಸ್ಥಳ ಟ್ರಸ್ಟ್ ವತಿಯಿಂದಲೂ ಅನುದಾನ ಬಂದಿದೆ. ಹೀಗಾಗಿ ಶಿಲಾ ದೇಗುಲ ಆಕರ್ಷಕವಾಗಿ ನಿರ್ಮಾಣವಾಗಲು ಸಾಧ್ಯವಾಗಿದೆ. ದೇವಿಯ ಮೂಲ ಮೂರ್ತಿಯನ್ನೇ ಮರು ಪ್ರತಿಷ್ಠಾಪಿಸಲಾಗುತ್ತಿದೆ. 2023ರ ಜನವರಿ ಅಥವಾ ಫೆಬ್ರುವರಿ ತಿಂಗಳಲ್ಲಿ ದೇವಸ್ಥಾನ ಲೋಕಾರ್ಪಣೆಗೊಳಿಸುವ ಚಿಂತನೆ ನಡೆದಿದೆ. ಶೃಂಗೇರಿ, ಧರ್ಮಸ್ಥಳ, ಹೊರನಾಡು ಪೂಜ್ಯರು ಸೇರಿದಂತೆ ಜಿಲ್ಲೆಯ ವಿವಿಧ ಮಠಾಧಿಪತಿಗಳನ್ನು ಆಹ್ವಾನಿಸಲು ತೀರ್ಮಾನಿಸಿದ್ದೇವೆ.
-ಮಲ್ಲಣ್ಣಗೌಡ ಪೊಲೀಸ್ ಪಾಟೀಲ, ಅಧ್ಯಕ್ಷ ಶ್ರೀಏಲಾಂಬಿಕೆ ದೇವಿ ದೇವಸ್ಥಾನ ಟ್ರಸ್ಟ್, ಬಳವಡಗಿ
-ಮಡಿವಾಳಪ್ಪ ಹೇರೂರ