ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನಾ-ಬಿಜೆಪಿ ಮೈತ್ರಿಕೂಟದ ಸರ್ಕಾರ ಮುಂದಿನ ಆರು ತಿಂಗಳೊಳಗೆ ಪತನವಾಗಲಿದೆ ಎಂದು ಎನ್ ಸಿಪಿ ವರಿಷ್ಠ ಶರದ್ ಪವಾರ್ ಸೋಮವಾರ (ಜುಲೈ 04) ಭವಿಷ್ಯ ನುಡಿದಿದ್ದು, ಮಧ್ಯಂತರ ಚುನಾವಣೆಗೆ ಸಿದ್ಧರಾಗುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ:ದಕ್ಷಿಣದ ರಾಜ್ಯ ಮಾತ್ರವಲ್ಲ ಬೇರೆ ಕಡೆಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ: ಸಿ.ಟಿ.ರವಿ
ಭಾನುವಾರ ಸಂಜೆ ನಡೆದ ಪಕ್ಷದ ಶಾಸಕರು ಮತ್ತು ಇತರ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ವೇಳೆ ಶರದ್ ಪವಾರ್ ಈ ಹೇಳಿಕೆಯನ್ನು ನೀಡಿರುವುದಾಗಿ ವರದಿ ವಿವರಿಸಿದೆ. ಮಹಾರಾಷ್ಟ್ರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶಿಂಧೆ ನೇತೃತ್ವದ ಸರ್ಕಾರ ಇನ್ನು ಆರು ತಿಂಗಳಲ್ಲಿ ಪತನವಾಗಲಿದ್ದು, ನೀವೆಲ್ಲರೂ ಮಧ್ಯಂತರ ಚುನಾವಣೆಗೆ ಸಿದ್ಧರಾಗಬೇಕೆಂದು ತಿಳಿಸಿರುವುದಾಗಿ ವರದಿ ಹೇಳಿದೆ.
ಪ್ರಸ್ತುತ ಶಿಂಧೆ ಅವರನ್ನು ಬೆಂಬಲಿಸಿರುವ ಬಂಡಾಯ ಶಾಸಕರು ಅಸಮಾಧಾನಗೊಂಡಿದ್ದು, ಒಂದು ಬಾರಿ ಸಚಿವ ಸ್ಥಾನ ಹಂಚಿಕೆಯಾದ ಮೇಲೆ ಅವರ ಆಕ್ರೋಶ ಬಹಿರಂಗವಾಗಿ ಸ್ಫೋಟಗೊಳ್ಳಲಿದ್ದು, ಇದರ ಪರಿಣಾಮ ಸರ್ಕಾರ ಪತನಗೊಳ್ಳಲಿದೆ ಎಂದು ಪವಾರ್ ತಿಳಿಸಿದ್ದಾರೆ.
ಬಿಜೆಪಿ-ಶಿವಸೇನಾ ಮೈತ್ರಿಯ ಪ್ರಯೋಗದ ವೈಫಲ್ಯದಿಂದ ಹಲವಾರು ಬಂಡಾಯ ಶಾಸಕರು ಮತ್ತೆ ಉದ್ಧವ್ ಠಾಕ್ರೆ ನೇತೃತ್ವದ ಮೂಲ ಶಿವಸೇನಾ ಪಕ್ಷಕ್ಕೆ ಮರಳಿ ಸೇರ್ಪಡೆಯಾಗಲಿದ್ದಾರೆ. ಹೀಗಾಗಿ ನಮಗೆ ಇನ್ನು ಕೇವಲ ಆರು ತಿಂಗಳು ಮಾತ್ರ ಸಿಗಲಿದ್ದು, ಎನ್ ಸಿಪಿ ಶಾಸಕರು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಸಮಯವನ್ನು ಕಳೆಯಬೇಕಾಗಿದೆ ಎಂದು ಪವಾರ್ ಸಲಹೆ ನೀಡಿದ್ದಾರೆ.