ಅಯೋಧ್ಯೆ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಏಕನಾಥ್ ಶಿಂಧೆ ಅವರು ಉತ್ತರ ಪ್ರದೇಶದ ಅಯೋಧ್ಯೆಗೆ ಭಾನುವಾರ ಭೇಟಿ ನೀಡುತ್ತಿದ್ದಾರೆ. ಇವರೊಂದಿಗೆ ಶಿಂಧೆ ಬಣದ ಅನೇಕ ಶಿವಸೇನೆ ಸಚಿವರು, ಸಂಸದರು, ಶಾಸಕರು ಹಾಗೂ ಸಾವಿರಾರು ಶಿವಸೈನಿಕರು ಅಯೋಧ್ಯೆಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯ ಬಹುತೇಕ ಹೋಟೆಲ್‌ಗಳು, ಅತಿಥಿ ಗೃಹಗಳು ಮತ್ತು ಧರ್ಮಶಾಲಾಗಳು ಬುಕ್ ಆಗಿವೆ.
ಸಾವಿರಾರು ಶಿವಸೈನಿಕರು ಶನಿವಾರವೇ ವಿಶೇಷ ರೈಲಿನಲ್ಲಿ ಆಯೋಧ್ಯೆಗೆ ಆಗಮಿಸಿದ್ದಾರೆ. ಸಿಎಂ ಏಕನಾಥ್ ಶಿಂಧೆ ಅವರು ಭಾನುವಾರ ಬೆಳಗ್ಗೆ ಲಕ್ನೋದಿಂದ ಅಯೋಧ್ಯೆಗೆ ಹೆಲಿಕಾಪ್ಟರ್‌ನಲ್ಲಿ ಆಗಮಿಸುತ್ತಾರೆ. ಹನುಮಂತ ಮತ್ತು ಶ್ರೀರಾಮಚಂದ್ರ ದೇಗುಲಗಳಿಗೆ ಭೇಟಿ ನೀಡುತ್ತಾರೆ. ರಾಮಜನ್ಮಭೂಮಿ ದೇಗುಲದ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಲಿದ್ದಾರೆ. ಸಂಜೆ ಸರಯೂ ನದಿಗೆ ಆರತಿ ಬೆಳಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.