ಒಬ್ಬ ಹುಡುಗನ ಗಾಢವಾದ ಪ್ರೇಮಕತೆ, ಕ್ಷಣ ಕ್ಷಣಕ್ಕೂ ಥ್ರಿಲ್ ಕೊಡುತ್ತಾ, ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸುತ್ತಾ ಸಾಗಿದರೆ ಹೇಗಿರುತ್ತೆ ಹೇಳಿ… ಈ ವಾರ ತೆರೆಕಂಡಿರುವ “ಏಕ್ ಲವ್ ಯಾ’ ಸಿನಿಮಾ ಪ್ರೇಕ್ಷಕರಿಗೆ ಥ್ರಿಲ್ ಕೊಡುತ್ತಾ ಸಾಗುವಲ್ಲಿ ಯಶಸ್ವಿಯಾಗಿದೆ.
ಆ ಮಟ್ಟಿಗೆ ಪ್ರೇಮ್ ಒಂದು ವಿಭಿನ್ನ ಲವ್‌ಸ್ಟೋರಿಯನ್ನು ಕಟ್ಟಿಕೊಟ್ಟಿದ್ದಾರೆ. ಲವ್‌ಸ್ಟೋರಿ ಎಂದರೆ ಮರಸುತ್ತೋದು, ಒಂದಷ್ಟು ಸೆಂಟಿಮೆಂಟ್, ರೊಮ್ಯಾಂಟಿಕ್ ದೃಶ್ಯ ಎಂಬ ಚೌಕಟ್ಟಿನಿಂದ ಪ್ರೇಮ್ ಹೊರಗಡೆ ಬಂದು ಮಾಡಿದ ಸಿನಿಮಾ “ಏಕ್ ಲವ್ ಯಾ’. ಅದೇ ಕಾರಣದಿಂದ ಚಿತ್ರ ಪ್ರೇಕ್ಷಕರಿಗೆ ಮಜಾ ಕೊಡುತ್ತಾ ಸಾಗುತ್ತದೆ.
ಇದು ಅಮರ್ ಎಂಬ ಪಾಗಲ್ ಪ್ರೇಮಿಯೊಬ್ಬನ ಕಥೆ. ತಾನು ಚಿಕ್ಕಂದಿನಿಂದ ಪ್ರೀತಿಸಿದ ಹುಡುಗಿಯ ಹಿಂದೆ ಸುತ್ತುವ ಹಾಗೂ ಆ ನಂತರ ಘಟನೆ, ಆರೋಪ, ಅದರ ತೀವ್ರತೆಯ ಸುತ್ತ ಪ್ರೇಮ್ “ಏಕ್ ಲವ್ ಯಾ’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಈ ಹಂತಗಳಲ್ಲಿ ಪ್ರೇಮ್ ಪ್ರೇಕ್ಷಕರನ್ನು ಎಂಗೇಜ್ ಇಡಲು ಏನೇನು ಮಾಡಬೇಕೋ, ಅವೆಲ್ಲವನ್ನು ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ. ಇದರಲ್ಲಿ ಕೆಲವು ಸಫಲವಾದರೆ, ಇನ್ನು ಕೆಲವು “ಸಮಾಧಾನಕರ ಬಹುಮಾನ’ಕ್ಕಷ್ಟೇ ಸೀಮಿತವಾಗಿದೆ.
ಸಹಜವಾಗಿಯೇ ಬಹುತೇಕ ಸಿನಿಮಾಗಳ ಫಸ್ಟ್‌ಹಾಫ್ನಲ್ಲಿ ಹೀರೋ ಇಂಟ್ರೋಡಕ್ಷನ್, ಒಂದಷ್ಟು ಫನ್ ದೃಶ್ಯಗಳ ಮೂಲಕ ಮೊದಲರ್ಧವನ್ನು ಕಟ್ಟಿಕೊಡಲಾಗಿದೆ. ಆದರೆ, ನಿಜವಾದ ಸಿನಿಮಾ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಇಲ್ಲಿ ಪ್ರೇಮಿಯೊಬ್ಬನ ಉತ್ಕಟ ಬಯಕೆ, ಆತ ಪ್ರೀತಿಸಿದ ಹುಡುಗಿಯ ನಿರ್ಧಾರ, ಅದರ ಜೊತೆಗೆ ಅನಿರೀಕ್ಷಿತ ಘಟನೆಯೊಂದ ಆಗುವ ತೊಳಲಾಟ… ಹೀಗೆ ಅನೇಕ ಅಂಶಗಳು ತೆರೆದುಕೊಳ್ಳುವ ಮೂಲಕ ಸಿನಿಮಾ ಹೆಚ್ಚು ಗಂಭೀರವಾಗುತ್ತಾ ಸಾಗುತ್ತದೆ. ಈ ಹಂತದಲ್ಲಿ ಬರುವ ಟ್ವಿಸ್ಟ್, ಟರ್ನ್ಗಳು ಚಿತ್ರದ ಪ್ಲಸ್.
ಇಡೀ ಸಿನಿಮಾದ ಮತ್ತೂಂದು ಹೈಲೈಟ್ ಎಂದರೆ ಚಿತ್ರದ ಹಾಡುಗಳು. ಅರ್ಜುನ್ ಜನ್ಯಾ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಸಿನಿಮಾದುದ್ದಕ್ಕೂ ಸಾಗಿಬಂದು ಮುದ ನೀಡಿದೆ. ಎಲ್ಲಾ ಹಾಡುಗಳು ಬೇರೆ ಬೇರೆ ಫ್ಲೇವರ್ ಇರುವುದರಿಂದ ಖುಷಿ ಕೊಡುತ್ತದೆ. ಸಣ್ಣಪುಟ್ಟ ತಪ್ಪು, ಲಾಜಿಕ್‌ಗಳನ್ನು ಬದಿಗಿಟ್ಟು ನೋಡಿದರೆ “ಏಕ್ ಲವ್ ಯಾ’ ಒಂದು ನೀಟಾದ ಸಿನಿಮಾ.
ನಾಯಕ ರಾಣಾ ತಮ್ಮ ಚೊಚ್ಚಲ ಸಿನಿಮಾದಲ್ಲಿ ಗಮನ ಸೆಳೆದಿದ್ದಾರೆ. ಪ್ರೇಮಿಯಾಗಿ, ಆ್ಯಕ್ಷನ್ ಹೀರೋ ಆಗಿ ಹಾಗೂ ಸೆಂಟಿಮೆಂಟ್ ದೃಶ್ಯಗಳಲ್ಲಿ ಸ್ಕೋರ್ ಮಾಡಿದ್ದಾರೆ. ನಾಯಕಿ ರೀಷ್ಮಾ ಮೊದಲ ಸಿನಿಮಾದಲ್ಲೇ ಮಿಂಚಿ, ಭರವಸೆ ಮೂಡಿಸಿದ್ದಾರೆ. ಉಳಿದಂತೆ ರಚಿತಾ ಇದ್ದಷ್ಟು ಹೊತ್ತು ಗಮನ ಸೆಳೆದಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್, ಶಶಿಕುಮಾರ್, ಯಶ್ ಶೆಟ್ಟಿ, ಸುಧಿ.. ಹೀಗೆ ಪ್ರತಿಯೊಬ್ಬರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ
ರವಿಪ್ರಕಾಶ್ ರೈ