Advertisement
ಈ ಬೆನ್ನಲ್ಲೇ, ಬೋಟು ಮತ್ತು ಮೀನುಗಾರರನ್ನು ಯಾವುದಾದರೂ ದೇಶದ ಕಡಲ್ಗಳ್ಳರು ಹೈಜಾಕ್ ಮಾಡಿರಬಹುದೇ? ದೋಣಿ ಅಪಾಯಕ್ಕೆ ಸಿಲುಕಿರಬಹುದೇ ಎಂಬ ಗುಮಾನಿ ಬಲವಾಗಿದೆ.
ಈ ಬೆನ್ನಲ್ಲೇ ಕೇಂದ್ರಗುಪ್ತಚರ ದಳ, ರಕ್ಷಣಾ ಇಲಾಖೆ, ರಾಜ್ಯ ಗುಪ್ತಚರ ದಳ ಪ್ರತ್ಯೇಕವಾಗಿ ಆಂತರಿಕ ತನಿಖೆ ಆರಂಭಿಸಿವೆ. ನೆರೆರಾಜ್ಯಗಳು ಹಾಗೂ ಸಮುದ್ರ ತೀರದ ದೇಶಗಳ ಜತೆ ಚರ್ಚೆ ಆರಂಭಿಸಿವೆ ಎಂದು ತಿಳಿದು ಬಂದಿದೆ.
Related Articles
Advertisement
ಈಗಾಗಲೇ ಕರ್ನಾಟಕ ಕರಾವಳಿ ಪೊಲೀಸ್ ಪಡೆ ಸ್ಥಳೀಯ ಮೀನುಗಾರರು, ವಾಣಿಜ್ಯ ಬೋಟ್‌ಗಳ ಮೀನುಗಾರರ ತಂಡಗಳ ಹೋವರ್ ಕ್ರಾಫ್ಟ್, ಡಾರ್ನಿಯಲ್ ಏರ್ ಕ್ರಾಫ್ಟ್ ಹಾಗೂ ಹೆಲಿಕಾಪ್ಟರ್‌ಗಳ ಮೂಲಕ ಜಲಮಾರ್ಗ ಹಾಗೂ ಹೆಲಿಕಾಪ್ಟರ್‌ಗಳ ಮೂಲಕವೂ ನಾಪತ್ತೆಯಾಗಿರುವ ಹಡಗು ಹಾಗೂ ಮೀನುಗಾರರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದೆ.ಇದಲ್ಲದೆ ಡಿ.24ರಿಂದಲೇ ಭಾರತೀಯ ನೌಕಾಪಡೆಯ ಒಂದು ಹಡಗು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಆದರೆ, ಇದುವರೆಗೂ ಮೀನುಗಾರರ ಕುರಿತ ಸುಳಿವು ಲಭ್ಯವಾಗಿಲ್ಲ.ದೋಣಿ ಹಾಗೂ ಮೀನುಗಾರರ ನಾಪತ್ತೆ ವಿಷಯವನ್ನು ಗುಜರಾತ್, ಮಹಾರಾಷ್ಟ್ರ, ಕೇರಳ, ಗೋವಾ ರಾಜ್ಯದ ಸಮುದ್ರ ತೀರದ ಪ್ರದೇಶಗಳಿಗೆ ಮಾಹಿತಿ ನೀಡಿದ್ದು, ಅವರೂ ಕಾರ್ಯಚರಣೆ ಮುಂದುವರಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಜ.5ರಂದು ಗೃಹ ಸಚಿವ ಎಂಬಿ ಪಾಟೀಲ್ ಸ್ಥಳಕ್ಕೆ ಭೇಟಿ!ನಿಗೂಢವಾಗಿ ನಾಪತ್ತೆಯಾಗಿರುವ ಹಡಗು ಹಾಗೂ ಮೀನುಗಾರರ ಪತ್ತೆಗೆ ಕ್ಷಿಪ್ರಗತಿಯ ಕಾರ್ಯಾಚರಣೆ ನಡೆಸುವಂತೆ ನಿರ್ದೇಶಿಸಿರುವ ರಾಜ್ಯ ಗೃಹ ಸಚಿವ ಎಂ.ಬಿ ಪಾಟೀಲ್, ಜನವರಿ 5ರಂದು ಉಡುಪಿಗೆ ಭೇಟಿ ನೀಡಲಿದ್ದು ಕಾರ್ಯಾಚರಣೆಯ ಮಾಹಿತಿ ಪಡೆಯಲಿದ್ದಾರೆ.ಜತೆಗೆ, ನಾಪತ್ತೆಯಾಗಿರುವ ಮೀನುಗಾರರ ಕುಟುಂಬದವರ ಜತೆಯೂ ಚರ್ಚೆ ನಡೆಸಲಿದ್ದಾರೆ. ಜ.8ರಂದು ರಾಜ್ಯ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಭೇಟಿ ನೀಡಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊನೆಯ ಕರೆ ಯಾರಿಗೆ ಮಾಡಿದ್ದರು ?
ಮೀನುಗಾರಿಕೆ ಸಲುವಾಗಿ ಸುವರ್ಣ ತ್ರಿಭುಜ ಹಡಗಿನ ಮಾಲೀಕ ಚಂದ್ರಶೇಖರ ಹಾಗೂ ಮೀನುಗಾರರಾದ ದಮಾದಾರ್ ಬದನಿಡಿಯಾರ್, ಲಕ್ಷ್ಮಣ ಕುಮಟ, ಸತೀಶ್ ಕುಮಟ, ರವಿ, ಮಂಕಿ ಹರೀಶ್ ಕುಮಟ, ರಮೇಶ್ ಕುಮಟ,ಜೋಗಯ್ಯ ಕುಮಟ ಡಿ.13ರಂದು ಸಂಜೆ ಮಲ್ಫೆ ಫಿಶಿಂಗ್ ಬಂದರಿನಿಂದ ಸಮುದ್ರಕ್ಕೆ ತೆರಳಿದ್ದರು. ಡಿ.16ರಂದು ರಾತ್ರಿ 1 ಗಂಟೆ ಸುಮಾರಿಗೆ ಚಂದ್ರಶೇಖರ್ ತಮ್ಮ ಸಹೋದರ ನಿತ್ಯಾನಂದ ಅವರಿಗೆ ದೂರವಾಣಿ ಕರೆ ಮಾಡಿ, ಗೋವಾ ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದು, ಮೀನುಗಾರಿಕೆಗೆ ಬಂದಿದ್ದ ಇತರೆ ಹಡಗುಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ತಿಳಿಸಿದ್ದರು. ಮೀನುಗಾರಿಗೆ ನಡೆಸಲು ಅನುಮತಿ ಪಡೆದುಕೊಂಡಿದ್ದ 10 ದಿನಗಳ ಅವಧಿ ಪೂರ್ಣಗೊಂಡ ಬಳಿಕವೂ ಸಹೋದರ ಹಾಗೂ ಇತರೆ ಏಳು ಮಂದಿ ಮೀನುಗಾರರು ವಾಪಾಸ್ ಬರದ ಹಿನ್ನೆಲೆಯಲ್ಲಿ ನಿತ್ಯಾನಂದ ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಜತೆಗೆ ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದರು. – ಮಂಜುನಾಥ್ ಲಘುಮೇನಹಳ್ಳಿ