ಬೆಂಗಳೂರು: ಇತ್ತೀಚೆಗಷ್ಟೇ ನೆರೆಮನೆಯ ಇಬ್ಬರು ಕೆಲಸದಾಳುಗಳ ಮೇಲೆ ಹಲ್ಲೆ ನಡೆಸಿದ ಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಕುಟುಂಬದ ಸದಸ್ಯರ ಪತ್ತೆಗೆ ಉತ್ತರ ವಿಭಾಗದ ಪೊಲೀಸರು ಎಂಟು ತಂಡಗಳನ್ನು ರಚಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸೌಂದರ್ಯ ಜಗದೀಶ್ ಪುತ್ರ ನಟ ಸ್ನೇಹಿತ್ ಜಗದೀಶ್ ಮತ್ತು ಇತರ ಏಳು ಮಂದಿಯ ವಿರುದ್ಧ ಕಾರ್ಮಿಕರ ಮಾನಹಾನಿ ಮತ್ತು ಅತಿಕ್ರಮಣ ಮಾಡಿದ ಆರೋಪದ ಮೇಲೆ ಭಾನುವಾರ ಪ್ರಕರಣ ದಾಖಲಿಸಿದ್ದರು.
ಸೌಂದರ್ಯ ಜಗದೀಶ್ ಮನೆ ಪಕ್ಕದ ನಿವಾಸಿ ಪುರುಷೋತ್ತಮ್ ಮತ್ತು ಮಂಜುಳಾ ದಂಪತಿ ಮನೆಯಲ್ಲಿ ಕೆಲಸ ಮಾಡುತ್ತಿರುವ ಅನುರಾಧ ಮತ್ತು ಅವರ ತಾಯಿ ಮೇಲೆ ಆರೋಪಿಗಳು ಮನೆ ಮುಂದೆ ಕಸ ಗುಡಿಸುವ ವಿಚಾರಕ್ಕೆ ಜಗಳ ತೆಗೆದು, ಬಳಿಕ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದರು.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾದ ನಂತರ, ಕುಟುಂಬವು ತಲೆಮರೆಸಿಕೊಂಡು, ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದೆ. ಸೋಮವಾರ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ನಟ ಸ್ನೇಹಿತ್ ಮತ್ತು ಅವರ ತಾಯಿ ರೇಖಾ ಸೇರಿದಂತೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತಾದರೂ ಹಾಜರಾಗದೇ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದಾರೆ.
ಆರೋಪಿಗಳ ಪತ್ತೆಗೆ ಪ್ರಯತ್ನ ಮುಂದುವರಿದಿದ್ದು, ಮೂರು ತಂಡಗಳು ಮಂಗಳೂರು, ಮೈಸೂರು ಮತ್ತು ಬೆಳಗಾವಿಗೆ ಭೇಟಿ ನೀಡಿ ಅವರ ಸಂಬಂಧಿಕರಿಂದ ವಿವರಗಳನ್ನು ಸಂಗ್ರಹಿಸಿವೆ. ಸ್ನೇಹಿತ್ ತನ್ನ ತಾಯಿಯೊಂದಿಗೆ ಭಾನುವಾರ ತಡರಾತ್ರಿ ಎರಡು ಕಾರುಗಳಲ್ಲಿ ನಗರದಿಂದ ಹೊರಟು ಮೈಸೂರಿನ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಎಂದು ವರದಿಯಾಗಿದೆ
ಚಲನವಲನಗಳನ್ನು ಪತ್ತೆಹಚ್ಚಲು ನಾವು ನೆರೆಯ ರಾಜ್ಯಗಳ ಪೊಲೀಸ್ ಇಲಾಖೆಗಳನ್ನೂ ಸಂಪರ್ಕ ಮಾಡಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಮಹಿಳಾ ಸಂಘಗಳು ಮಂಗಳವಾರ ನಿರ್ಮಾಪಕರ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದರು.