ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಟು ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುತ್ತಿದೆ. ಜ್ಞಾನಭಾರತಿಯಲ್ಲಿರುವ ಉತ್ತರ ವಿವಿಯಲ್ಲಿ ಗುಣಮಟ್ಟದ ಪದವಿಗಳನ್ನು ನೀಡಬೇಕು ಮತ್ತು ವಿದ್ಯಾರ್ಥಿಗಳು ಪಡೆದ ಪದವಿಗಳು ಉದ್ಯೋಗ ಪಡೆಯಲು ಸಹಕಾರಿಯಾಗಬೇಕು ಎಂಬ ಉದ್ದೇಶದಿಂದ ಹೊಸ ಕೋರ್ಸ್‌ಗಳನ್ನು ಪರಿಚಯಸಲಾಗಿದೆ.
ಬೆಂಗಳೂರು ವಿವಿಯಲ್ಲಿ ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್‌ಗಳು ಸೇರಿದಂತೆ ಒಟ್ಟು 52 ಕೊರ್ಸ್‌ಗಳಿದ್ದು, ಹೆಚ್ಚುವರಿಯಾಗಿ ಎಂಟು ಪ್ರತ್ಯೇಕ ಕೋರ್ಸ್ ಗಳು ಪ್ರಾರಂಭಿಸಲಾಗುತ್ತಿದೆ. ವಿಪತ್ತು ನಿರ್ವಹಣೆ (ಡಿಸಾಸ್ಟರ್ ಮ್ಯಾನೇಜ್ಮೆಂಟ್), ಸಿನಿಮಾ ನಿರ್ಮಾಣ (ಫಿಲ್ಮ್ ಮೇಕಿಂಗ್ ), ಗ್ರಾಫಿಕ್ಸ್ ಅಂಡ್ ಆನಿಮೇಶನ್ , ವಿಧಿವಿಜ್ಞಾನ( ಫೋರೆನ್ಸಿಕ್ ಸೈನ್ಸ್ ), ಮಾಧ್ಯಮ ಅಧ್ಯಯನ (ಮೀಡಿಯಾ ಸ್ಟಡೀಸ್ ), ಅಪರಾಧ ಶಾಸ್ತ್ರ (ಕ್ರಿಮಿನಾಲಜಿ), ಸಾರ್ವಜನಿಕ ಸಂಪರ್ಕ ಅಧ್ಯಯನ( ಪಬ್ಲಿಕ್ ರಿಲೇಶನ್‌ಶಿಪ್ ಸ್ಟಡೀಸ್ ) ಮತ್ತು ಘನ ತ್ಯಾಜ್ಯ ನಿರ್ವಹಣೆ( ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ) ಸೇರಿದಂತೆ ಹಲವು ಉದ್ಯೋಗ ಬೇಡಿಕೆ ಹೆಚ್ಚಿರುವ ಕೋರ್ಸ್ ಗಳನ್ನು ಪ್ರಾರಂಭಿಸಲಾಗಿದೆ.
ಈ ಎಲ್ಲಾ ಕೋರ್ಸ್ ಗಳು ಸದ್ಯದ ಮಾರುಕಟ್ಟೆಯಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಹೊಂದಿವೆ. ಹಾಗಾಗಿ ಈ ಕೋರ್ಸ್ ಗಳನ್ನು ವಿವಿಯಲ್ಲಿ ಪರಿಚಯಿಸಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೆಲಸ ಪಡೆದುಕೊಳ್ಳುವುದು ಸುಲಭವಾಗಲಿದೆ ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ.ಕೆಆರ್ . ವೇಣುಗೋಪಾಲ್ ತಿಳಿಸಿದರು.
ಅತಿಥಿ ಉಪನ್ಯಾಸಕರ ಸಾರಥ್ಯ: ಸದ್ಯಕ್ಕೆ ವಿವಿಯಲ್ಲಿ ಪ್ರಾಯೋಗಿಕವಾಗಿ ಈ ಕೋರ್ಸ್ ಗಳನ್ನು ಪ್ರಾರಂಭಿಸಲಾಗಿದೆ. ಈ ಎಲ್ಲಾ ಕೋರ್ಸ್‌ಗಳಿಗೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಬೇಕಿದೆ ಎಂದು ತಿಳಿಸಿದರು.
ಕೋರ್ಸ್‌ಗಳ ಸೇರ್ಪಡೆಗೆ ಸ್ವಾಗತ: ಸದ್ಯದ ಪರಿಸ್ಥಿತಿಗೆ ಕೇವಲ ಪದವಿಗಳನ್ನು ನೀಡುವುದಷ್ಟೇ ವಿಶ್ವವಿದ್ಯಾಲಯಗಳ ಜವಾಬ್ದಾರಿಯಲ್ಲ. ಪದವಿ ನೀಡುವುದರ ಜತೆಗೆ ಗುಣಮಟ್ಟದ ಮತ್ತು ವಿದ್ಯಾರ್ಥಿಗಳ ಉದ್ಯೋಗ ಅವಕಾಶಗಳನ್ನು ಒದಗಿಸುವಂತಹ ಶಿಕ್ಷಣ ನೀಡಬೇಕಿದೆ. ಸದ್ಯ ಘನ ತ್ಯಾಜ್ಯ ವಿಲೇವಾರಿ, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಂಪರ್ಕ ಅಧ್ಯಯನ, ವಿಧಿವಿಜ್ಞಾನದಂತಹ ಕೋರ್ಸ್ ಗಳಿಗೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯಿದ್ದು,ಇಂತಹ ಕೋರ್ಸ್ ಗಳನ್ನು ಬೆಂಗಳೂರು ವಿಶ್ವವಿದ್ಯಾಲಯ ಪ್ರಾರಂಭಿಸುತ್ತಿರುವುದು ಸ್ವಾಗತಾರ್ಹ ಎಂದು ಬೆಂವಿವಿ ನಿವೃತ್ತ ಕುಲಪತಿ ಪ್ರೊ. ಜಗದೀಶ್ ಪ್ರಕಾಶ್ ತಿಳಿಸಿದರು.