ವಾಡಿ: ಇಸ್ಲಾಂ ಧರ್ಮಗುರು ಮಹ್ಮದ್ ಪೈಗಂಬರ್ ಜನ್ಮದಿನವನ್ನು ಮುಸ್ಲಿಂ ಬಾಂಧವರು ಶುಕ್ರವಾರ ಈದ್ ಮಿಲಾದ್ ಹಬ್ಬವನ್ನಾಗಿ ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಜಾಮೀಯಾ ಮಸೀದಿಯಿಂದ ಆರಂಭಗೊಂಡ ಈದ್ ಮೆರವಣಿಗೆಯಲ್ಲಿ ಇಸ್ಲಾಂ ಧರ್ಮದ ಪವಿತ್ರ ಕ್ಷೇತ್ರಗಳ ಸ್ತಬ್ದ ಚಿತ್ರಗಳು ಪ್ರದರ್ಶನಗೊಂಡವು.
ಪವಿತ್ರ ಯಾತ್ರಾ ಸ್ಥಳಗಳಾದ ಮೆಕ್ಕಾ, ಮದೀನಾ ಹಾಗೂ ಮಸೀದಿಗಳ ಎತ್ತರದ ಮಿನಾರ್‌ಗಳು ಮೆರವಣಿಗೆಯ ಆಕರ್ಷಣೆಯಾಗಿದ್ದವು. ಮೆರವಣಿಗೆಯುದ್ದಕ್ಕೂ ಹಸಿರು ಭಾವುಟಗಳು ರಾರಾಜಿಸಿದವು.
ಮಾರುಕಟ್ಟೆ ಪ್ರದೇಶದಿಂದ ಚಾಲನೆ ದೊರೆತ ರ್ಯಾಲಿ ಗಾಂಧಿ ವೃತ್ತ, ಶಿವಾಜಿ ಚೌಕ್, ಇಂದಿರಾ ಕಾಲೋನಿ ಹಾಗೂ ಆಜಾದ್ ಚೌಕ್ ಮಾರ್ಗವಾಗಿ ಪಟ್ಟಣದ ಹಲವು ಪ್ರಮುಖ ರಸ್ತೆಗಳಲ್ಲಿ ಶಾಂತಿಯುತವಾಗಿ ಸಾಗಿತು.
ಮಕ್ಕಳ ಕೈಗಳಲ್ಲಿ ಹಾರಾಡುತ್ತಿದ್ದ ಧರ್ಮ ಸಂಕೇತದ ಧ್ವಜಗಳು ಗಮನ ಸೆಳೆದವು. ಕುದುರೆ ಸವಾರಿ ಹೊರಟ ಮುಸ್ಲಿಂ ಮುಖಂಡರು, ಕುದುರೆ ನೃತ್ಯ ಮೆರವಣಿಗೆ ಭಾಗವಾಗಿತ್ತು. ಧಾರ್ಮಿಕ ಘೋಷಣೆಗಳು ಸಾಮೂಹಿಕವಾಗಿ ಕೇಳಿಬಂದವು. ಜಾಮೀಯಾ ಮಸೀದಿ ರಸ್ತೆಯಲ್ಲಿ ಏರ್ಪಡಿಸಲಾಗಿದ್ದ ಸರಳ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಸಮಾಜಗಳ ಗಣ್ಯರನ್ನು ಹಾಗೂ ಚುನಾಯಿತ ಸ್ಥಳೀಯ ಜನಪ್ರತಿನಿಧಿಗಳನ್ನು ಮುಸ್ಲಿಂರು ಸನ್ಮಾನಿಸಿದರು.
ಜಾಮಿಯಾ ಮಸೀದಿ ಸಮಿತಿ ಅಧ್ಯಕ್ಷ ಮುಕುºಲ್ ಜಾನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ,
ಮಾಜಿ ಜಿಪಂ ಸದಸ್ಯ ಅಜೀಜ್ ಸೇಠ ರಾವೂರ, ಗೋಪಾಲ ರಾಠೊಡ, ಶಂಕರ ಜಾಧವ, ಸೂರ್ಯಕಾಂತ ರದ್ದೇವಾಡಿ,
ಶರಣು ನಾಟೀಕಾರ, ಮಹ್ಮದ್ ಗೌಸ್, ಮಕ್ಸೂದ್ ಜುನೈದಿ, ರಹೆಮಾನ ಖುರೇಶಿ ಪಾಲ್ಗೊಂಡಿದ್ದರು.
ಪುರಸಭೆ ಮಾಜಿ ಸದಸ್ಯ ಸೂರ್ಯಕಾಂತ ರದ್ದೇವಾಡಿ ನೇತೃತ್ವದಲ್ಲಿ ದಲಿತ ಸಮುದಾಯದ ಗೆಳೆಯರು
ಸಾರ್ವಜನಿಕರಿಗೆ ಸಿಹಿ ಪಾನಕ ಹಂಚಿ ಭಾವೈಕ್ಯತೆ ಮೆರೆದರು. ಈದ್-ಮಿಲಾದ್ ಹಬ್ಬ ಶಾಂತಿಯುತವಾಗಿ ನೆರವೇರಿತು.