Advertisement
ಅಲ್ಲಾಹನ ಶ್ರೇಷ್ಠತೆಯ ಅಂಗೀಕಾರ, ಮಾನವ ಬದುಕಿಗೆ ಉನ್ನತ ಭರವಸೆಯನ್ನೂ, ಸ್ಫೂರ್ತಿಯನ್ನೂ, ನವ ಚೈತನ್ಯವನ್ನೂ ನೀಡುತ್ತದೆ. ಪವಿತ್ರ ರಮ್ಜಾನ್‌ನ ಒಂದು ಪೂರ್ಣ ಮಾಸ ಕಾಲ ಉಪವಾಸವನ್ನು ಆಚರಿಸಿ, ಆತ್ಮ ಸಂತೃಪ್ತಿಯನ್ನು ಪಡೆದು, ಅಲ್ಲಾಹನಿಗೆ ಕೃತಜ್ಞತೆಯನ್ನು ಸಲ್ಲಿಸತಕ್ಕ ದಿನವೇ ಈದುಲ್ ಫಿತ್ರ.
Related Articles
Advertisement
ಪವಿತ್ರ ರಮ್ಜಾನ್‌ನ ಕೊನೆಯ ಹತ್ತು ದಿನಗಳಲ್ಲಿ ಬರುವ ಒಂದು ರಾತ್ರಿಯು ಅತ್ಯಂತ ಮಹತ್ವಪೂರ್ಣ ರಾತ್ರಿಯಾಗಿರುತ್ತದೆ. ಅದುವೇ “ಲೈಲತುಲ್ ಕದ್ರ್’ ಅರ್ಥಾತ್ ಶ್ರೇಷ್ಠ ಹಾಗೂ ನಿರ್ಣಾಯಕ ರಾತ್ರಿ. ಸಮಗ್ರ ಮಾನವ ಜನಾಂಗಕ್ಕೆ ಪ್ರಪ್ರಥಮವಾಗಿ ಕುರಾನ್ ಅವತೀರ್ಣಗೊಂಡ ರಾತ್ರಿ.
ಈ ಪಾವನ ರಾತ್ರಿಯು ಸಾವಿರ ಮಾಸಗಳಿಗಿಂತಲೂ ಶ್ರೇಷ್ಠ ರಾತ್ರಿಯೆಂದು ಕುರಾನ್ ಸ್ಪಷ್ಟೀಕರಿಸುತ್ತದೆ. ಇದು ಶಾಂತಿ ಮತ್ತು ಸುಭಿಕ್ಷೆಯ ರಾತ್ರಿ. ಈ ರಾತ್ರಿಯನ್ನು ಸಂಪೂರ್ಣ ಅಲ್ಲಾಹನ ಸ್ತುತಿ-ಸ್ತೋತ್ರ ಗಳಿಂದಲೂ, ನಮಾಜ್, ಪ್ರಾರ್ಥನೆ ಮತ್ತು ಭಕ್ತಿಯಿಂದಲೂ, ಕುರ್‌ಆನ್ ಪಠನದಿಂದಲೂ ಮುಸ್ಲಿ ಮರು ಕಳೆಯುತ್ತಾರೆ. ರಮ್ಜಾನ್‌ನ ಉಪವಾಸ ಆಚರಣೆಯಿಂದ, ನಮ್ಮ ಶರೀರದಲ್ಲಿ ಅಡಕವಾಗಿರುವ ಕಲ್ಮಶಗಳು ನೀಗಲ್ಪಟ್ಟು, ಶರೀರಕ್ಕೆ ತಗಲಬಹುದಾದ ರೋಗಗಳು ತಡೆಯಲ್ಪಡುತ್ತದೆಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿರುತ್ತಾರೆ. ಆದುದರಿಂದ ರಮ್ಜಾನ್ ಉಪವಾಸ ಅನುಷ್ಠಾನವು ದೇಹ ಹಾಗೂ ಆತ್ಮ ಪರಿಶುದ್ಧತೆಯ ಸಾಧನವೂ ಹೌದು.
ಈದುಲ್ ಫಿತ್ರ ಹಬ್ಬದಂದು ಇಸ್ಲಾಮ್ ಜಾರಿಗೊಳಿಸಿದ “ಫಿತ್ರ ಝಕಾತ್’ ಎಂಬ ನಿರ್ಬಂಧ ದಾನವು ಬಡವರೂ ಹಬ್ಬದಲ್ಲಿ ಪಾಲ್ಗೊಂಡು ಸಂತೋಷಪಡ ಬೇಕೆಂಬ ಸದುದ್ದೇಶದಿಂದ ಕೂಡಿದೆ. ಈದುಲ್ ಫಿತ್ರ ಹಬ್ಬವನ್ನಾ ಚರಿಸಲು ಆರ್ಥಿಕ ಸಾಮರ್ಥ್ಯವಿಲ್ಲದ ಬಡವರಿಗೂ, ಅನಾಥರಿಗೂ, ಅಂಗವಿಕಲರಿಗೂ, ವಿಧವೆಯರಿಗೂ, ಬಡತನದ ರೇಖೆಯಲ್ಲಿರುವ ನಿಕಟ ಸಂಬಂಧಿಕರಿಗೂ ಈ ನಿರ್ಬಂಧ ದಾನವನ್ನು ನೀಡಬಹುದಾಗಿದೆ. ಸಮಾಜದ ದುರ್ಬಲ ವರ್ಗಗಳತ್ತ ಸದಾ ಅನುಕಂಪದಿಂದ ಇರಬೇಕೆಂಬ ನೀತಿ ಮಾರ್ಗವನ್ನು ಈ ವಿಶಿಷ್ಟ ದಾನವು ಮನುಕುಲಕ್ಕೆ ಬೋಧಿಸುತ್ತದೆ.
ರಮ್ಜಾನ್ ಮತ್ತು ಈದುಲ್ ಫಿತ್ರ ಸಾರುವ ಸತ್ಯ, ಶಾಂತಿ, ಸೌಹಾರ್ದವು ಬದುಕಿನಲ್ಲಿ ಭರವಸೆಯನ್ನೂ, ಸ್ಫೂರ್ತಿಯನ್ನೂ, ನವಚೈತನ್ಯವನ್ನೂ ತುಂಬುವುದು ನಮಗಿಂದು ಅಗತ್ಯವಾಗಿದೆ. ಈದುಲ್ ಫಿತ್ರ ಬೋಧಿಸುವ ಶಾಂತಿ, ಸಮಾನತೆ ಮತ್ತು ಸೌಹಾರ್ದ ವನ್ನು ಬದುಕಿನಲ್ಲಿ ರೂಢಿಸಿ ಕೊಂಡು, ಮನುಕುಲದ ಶಾಂತಿಗಾಗಿ, ಸುಭಿಕ್ಷೆಗಾಗಿ, ನೆಮ್ಮದಿಗಾಗಿ ದೇವನಲ್ಲಿ ಐಕ್ಯತೆಯಿಂದ ಈ ಶುಭದಿನದಂದು ನಾವೆಲ್ಲ ಪ್ರಾರ್ಥಿಸೋಣ.
-ಕೆ.ಪಿ. ಅಬ್ದುಲ್ ಖಾದರ್, ಕುತ್ತೆತ್ತೂರು