Advertisement
ಸಮುದ್ರದಲ್ಲಿರುವ ಆಲಿವ್ ರಿಡ್ಲೆà, ಗ್ರೀನ್ ಟರ್ಟಲ್ ಕಡಲಾಮೆಗಳು ಹೆಚ್ಚಾಗಿ ಮಾರ್ಚ್ ತಿಂಗಳಿನಲ್ಲಿ ಮೊಟ್ಟೆ ಇಡುತ್ತವೆ. 2019ರ ಮಾ. 20ರಂದು 100ಕ್ಕೂ ಮಿಕ್ಕಿ ಅಳಿವಿನಂಚಿನಲ್ಲಿರುವ ಕಡಲಾಮೆ ಮೊಟ್ಟೆಗಳು ಕಂಚುಗೋಡು ಗ್ರಾಮದ ಸನ್ಯಾಸಿಬಲೆ ಕಡಲ ತೀರದಲ್ಲಿ ದೊರಕಿದ್ದವು. ಕಡಲಾಮೆ ಮೊಟ್ಟೆಗಳು ಪತ್ತೆಯಾದ ತತ್‌ಕ್ಷಣ ಸ್ಥಳೀಯರು ಕಡಲಾಮೆ ಸಂರಕ್ಷಣೆ ಕಾರ್ಯನಿರತ ಎಫ್‌ಎಸ್‌ಎಲ್ ಇಂಡಿಯಾ ಸಂಸ್ಥೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಎಫ್‌ಎಸ್‌ಎಲ್ ಇಂಡಿಯಾ ಸಂಸ್ಥೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಇಲಾಖೆಯ ಅಧಿಕಾರಿಗಳ ಸಹಾಯದಿಂದ ದೊರಕಿದ ಮೊಟ್ಟೆಗಳ ಬೆಳವಣಿಗೆಗೆ ಹ್ಯಾಚರಿ ನಿರ್ಮಿಸಿ ಸಂರಕ್ಷಿಸಿದ್ದರು.
ಕಡಲಾಮೆ ಮೊಟ್ಟೆಯಲ್ಲಿ ಮರಿಗಳ ಪೂರ್ಣ ಬೆಳವಣಿಗೆಗೆ 52 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಹ್ಯಾಚರಿಯಲ್ಲಿ 46 ದಿನಗಳಿಗೆ ಮೊಟ್ಟೆ ಒಡೆದು ಮರಿಗಳು ಹೊರಬಂದಿರುವ ಕಡಲಾಮೆ ಮರಿಗಳು ಸ್ಥಳೀಯರಲ್ಲಿಯೂ ಆಶ್ಚರ್ಯ ಮೂಡಿಸಿದೆ. ಬಹುತೇಕ ಮೊಟ್ಟೆಗಳಿಂದ ಮರಿಗಳು ಹೊರ ಬಂದಿದ್ದು, ಇವುಗಳನ್ನು ಕಡಲು ಶಾಂತವಾಗಿರುವ ಸಮಯ ನೋಡಿಕೊಂಡು, ಚಂದ್ರನ ಬೆಳಕಿನಲ್ಲಿ ಮತ್ತೆ ಸಮುದ್ರಕ್ಕೆ ಬಿಡಲಾಗುತ್ತದೆ.