Advertisement

ಮೊಟ್ಟೆ  ಖರೀದಿಗೆ ತಾ|ಹಂತದಲ್ಲಿ ಇ-ಟೆಂಡರ್‌

01:25 AM Jan 29, 2022 | Team Udayavani |

ಉಡುಪಿ: ಗರ್ಭಿಣಿಯರು, ಬಾಣಂತಿಯರಿಗೆ ಅಂಗನವಾಡಿಯಲ್ಲಿ ನೀಡುವ ಮೊಟ್ಟೆ ಖರೀದಿಯಲ್ಲಿ ಲೋಪದೋಷ ಸರಿಪಡಿಸಲು ತಾಲೂಕು ಹಂತದಲ್ಲಿ ಇ-ಟೆಂಡರ್‌ ಪದ್ಧತಿ ಜಾರಿಗೆ ತರುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಬಿ. ಆಚಾರ್‌ ತಿಳಿಸಿದ್ದಾರೆ.

Advertisement

ಇಲಾಖೆಯಲ್ಲಿ ಮೊಟ್ಟೆ ಹಗರಣವೇ ನಡೆದಿಲ್ಲ. ಇಲಾಖೆಯಲ್ಲಿ ಇರುವ ಮೊಟ್ಟೆ ಪೂರೈಕೆ ಮತ್ತು ಖರೀದಿ ಸಂಬಂಧಿ ಕೆಲವು ದೋಷಗಳನ್ನು ಸರಿಪಡಿಸಲು ತಾಲೂಕು ಮಟ್ಟದಲ್ಲಿ ಇ-ಟೆಂಡರ್‌ ಪ್ರಕ್ರಿಯೆ ಆರಂಭಿಸಲು ಶೀಘ್ರ ಆದೇಶ ಹೊರಡಿಸಲಾಗುವುದು ಎಂದರು.

ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ತಿಂಗಳಿಗೆ 22ರಿಂದ 26 ಮೊಟ್ಟೆ ನೀಡಲಾಗುವುದು. ಅಪೌಷ್ಟಿಕ ಮಕ್ಕಳಿಗೆ ಹಾಲು ಮತ್ತು ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ದರದಲ್ಲಿ ವ್ಯತ್ಯಾಸದಿಂದ ಆಗುವ ಅನುದಾನ ಕೊರತೆ ಸರಿಪಡಿಸಲು ಗ್ರಾ.ಪಂ.ನಿಂದ ಹೆಚ್ಚುವರಿ ಅನುದಾನ ನೀಡಲು ಆದೇಶ ನೀಡಲಾಗಿತ್ತು. ಇನ್ನು ಮುಂದೆ ಆ ರೀತಿಯ ಸಮಸ್ಯೆ ಬಾರದಂತೆ ಇಲಾಖೆಯಿಂದ ಎಲ್ಲ ರೀತಿಯ ಕ್ರಮಗಳನ್ನು ಕೈಕೊಳ್ಳಲಿದ್ದೇವೆ.

ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ)ಯಂತೆ ದರ ನೀಡುವ ಬಗ್ಗೆಯೂ ಇಲಾಖೆಯ ಮಟ್ಟದಲ್ಲಿ ಚಿಂತನೆಯನ್ನು ನಡೆಸಲಾಗಿದೆ ಎಂದರು.

ಶಾಸಕ ಸುಕುಮಾರ ಶೆಟ್ಟಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ಡಾ| ವಿ. ರಾಮ್‌ ಪ್ರಸಾದ್‌, ಜಿಲ್ಲಾಧಿಕಾರಿ ಕೂರ್ಮಾರಾವ್‌, ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ರಾಜ್ಯ ಖನಿಜ ನಿಗಮ ನಿ.ದ ನಿರ್ದೇಶಕಿ ಕಾವೇರಿ ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ:“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

ನಾನ್‌ ಸಿಆರ್‌ಝಡ್‌ನ‌ಲ್ಲಿ ಮರಳುಗಾರಿಕೆ ಚಿಂತನೆ
ಕರಾವಳಿ ಜಿಲ್ಲೆಗಳ ನಾನ್‌ ಸಿ.ಆರ್‌.ಝಡ್‌. ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮರಳು ತೆಗೆಯಲು ಅನುಮತಿ ನೀಡುವ ಬಗ್ಗೆ ಪರಿಶೀಲಿಸಲಾ ಗುವುದು. ಕರಾವಳಿ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿಯ ಪ್ರಸ್ತಾವ ಹಿಂದಿನದ್ದು. ಮೊದಲು ಕರಾವಳಿ ಜಿಲ್ಲೆಯ ಜನ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದೇವೆ. ಜನರಿಗೆ ಎಲ್ಲ ರೀತಿಯಲ್ಲೂ ಅನುಕೂಲ ಮಾಡಿಕೊಡಲಾಗುವುದು ಎಂದರು.

ನಾನ್‌ ಸಿ.ಆರ್‌.ಝಡ್‌ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮರಳು ತೆಗೆಯಲು ಅನುಮತಿ ನೀಡಿದರೆ ಜನತೆಗೆ ಅನುಕೂಲವಾಗಲಿದೆ ಎಂದರು ಶಾಸಕ ರಘುಪತಿ ಭಟ್‌.

“ಪೋಷಣ್‌’ ಸಿಬಂದಿಗೆ ವೇತನ
ಪೋಷಣ್‌ ಅಭಿಯಾನದ ಸಿಬಂದಿಗೆ ವೇತನ ನೀಡಿಲ್ಲ ಎಂಬ ಬಗ್ಗೆ ದೂರುಗಳು ಬಂದಿವೆ. ಈ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದು, ತತ್‌ಕ್ಷಣವೇ ವೇತನ ಬಿಡುಗಡೆಗೆ ಕ್ರಮ ಜರುಗಿಸಲಾಗುವುದು. ಕೇಂದ್ರ ಸರಕಾರದಿಂದ ಅನುದಾನ ಬಂದಿದ್ದರೆ, ನಮ್ಮಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಚಿವರು ನುಡಿದರು.

ಕಾಂಗ್ರೆಸ್‌ನವರಿಗೆ ಮಾಡಲು ಏನೂ ಕೆಲಸ ಇಲ್ಲ. ಅದಕ್ಕಾಗಿ ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಬಿಜೆಪಿ ಸರಕಾರಕ್ಕೆ ಕಾಂಗ್ರೆಸ್‌ನಿಂದ ಪ್ರಮಾಣ ಪತ್ರ ಬೇಕಾಗಿಲ್ಲ.
– ಹಾಲಪ್ಪ ಆಚಾರ್‌, ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next