Advertisement

ಜಮ್ಮು ಕಾಶ್ಮೀರದಲ್ಲಿ ಶಾಂತಿ ಕದಡುವ ಯತ್ನಕ್ಕೆ ಅವಕಾಶ ಸಲ್ಲದು

02:27 AM Jun 28, 2021 | Team Udayavani |

ಜಮ್ಮು ವಿಮಾನ ನಿಲ್ದಾಣದ ಭಾರತೀಯ ವಾಯುಪಡೆ ಕೇಂದ್ರವನ್ನು ಗುರಿ ಯಾಗಿಸಿ ಭಯೋತ್ಪಾದಕರು ಶನಿವಾರ ತಡರಾತ್ರಿ ಡ್ರೋನ್‌ ದಾಳಿ ನಡೆಸಿದ್ದಾರೆ. ಈವರೆಗೆ ಸಾಂಪ್ರದಾಯಿಕ ಮಾದರಿಯಲ್ಲಿ ಭಯೋತ್ಪಾದನ ಕೃತ್ಯಗಳನ್ನು ಎಸಗುತ್ತಿದ್ದ ಉಗ್ರರು ಇದೀಗ ಸುಧಾರಿತ ತಂತ್ರಜ್ಞಾನಗಳನ್ನು ತಮ್ಮ ದುಷ್ಕೃತ್ಯ ಗಳಿಗೆ ಬಳಸಲಾರಂಭಿಸಿರುವುದು ತೀರಾ ಆತಂಕಕಾರಿ ಬೆಳವಣಿಗೆಯಾಗಿದೆ.

Advertisement

ಪಾಕಿಸ್ಥಾನ ಗಡಿಯಿಂದ ಸುಮಾರು 14 ಕಿ.ಮೀ.ಗಳಷ್ಟು ವಾಯು ದೂರದಲ್ಲಿರುವ ಸತ್ವಾರಿ ಪ್ರದೇಶದಲ್ಲಿ ಜಮ್ಮು ವಿಮಾನ ನಿಲ್ದಾಣವಿದ್ದು ಈ ನಿಲ್ದಾಣ ಭಾರತೀಯ ವಾಯುಪಡೆಯ ನಿಯಂತ್ರಣದಲ್ಲಿದೆ. ಶನಿವಾರ ತಡರಾತ್ರಿ ಗಂಟೆ 1.37ರಿಂದ 1.43ರ ನಡುವಣ ಆರು ನಿಮಿಷಗಳ ಅಂತರದಲ್ಲಿ ಎರಡು ಡ್ರೋನ್‌ಗಳು ವಾಯುಪಡೆಯ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿದವು. ಒಂದು ಡ್ರೋನ್‌ ವಾಯುಪಡೆ ಕೇಂದ್ರದ ಮೇಲೆ ಸ್ಫೋಟಕವನ್ನು ಬೀಳಿಸಿದ ಪರಿಣಾಮ ಒಂದಸ್ತಿನ ಕಟ್ಟಡದ ಛಾವಣಿ ಧ್ವಂಸವಾದರೆ ಮತ್ತೂಂದು ಡ್ರೋನ್‌ ಒಂದು ಕಿ.ಮೀ. ದೂರದ ಬಯಲು ಪ್ರದೇಶದಲ್ಲಿ ಸ್ಫೋಟಕವನ್ನು ಬೀಳಿಸಿದ್ದರಿಂದಾಗಿ ಯಾವುದೇ ಹಾನಿಯಾಗಿಲ್ಲ. ಈ ದಾಳಿಯಲ್ಲಿ ಭಾರತೀಯ ವಾಯುಪಡೆಯ ಇಬ್ಬರು ಸಿಬಂದಿಗೆ ಗಾಯಗಳಾಗಿವೆ.

ಈ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ ಸಮಗ್ರ ತನಿಖೆಗೆ ಆದೇಶಿಸಿದೆ. ಭಾರತೀಯ ವಾಯುಪಡೆ, ಎನ್‌ಐಎ ಸಹಿತ ಉನ್ನತ ತನಿಖಾ ಸಂಸ್ಥೆಗಳು ದಾಳಿಯ ತನಿಖೆಯನ್ನು ಕೈಗೆತ್ತಿಕೊಂ ಡಿದ್ದು ದಾಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆಹಾಕಲಾರಂಭಿಸಿವೆ. ಇದೊಂದು ಭಯೋತ್ಪಾದಕ ದಾಳಿ ಎಂದು ಜಮ್ಮು ಪೊಲೀಸರು ಈಗಾಗಲೇ ದೃಢಪಡಿಸಿದ್ದಾರೆ. ಇದೇ ವೇಳೆ ರವಿವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ನರ್ವಾಲ್‌ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ ಪೊಲೀಸರು ಉಗ್ರನೋರ್ವನನ್ನು ಬಂಧಿಸಿ ಆತನಿಂದ 5 ಕೆ.ಜಿ. ಐಇಡಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಸ್ಫೋಟಕಗಳನ್ನು ಜನನಿಬಿಡ ಪ್ರದೇಶದಲ್ಲಿ ಸ್ಫೋಟಿಸುವ ಸಂಚು ರೂಪಿಸಿದ್ದುದಾಗಿ ಬಂಧಿತ ಉಗ್ರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಗೊಳಿಸಿ ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಎರಡು ವರ್ಷ ಗಳ ಬಳಿಕ ಕೇಂದ್ರ ಸರಕಾರ ಅಲ್ಲಿ ಚುನಾವಣೆ ನಡೆಸಲು ಸಿದ್ಧತೆಗ ಳನ್ನು ಆರಂಭಿಸಿರುವಾಗಲೇ ಭಯೋತ್ಪಾದಕರು ಈ ಕೃತ್ಯ ಎಸಗಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ವಿಶೇಷ ಸ್ಥಾನಮಾನವನ್ನು ರದ್ದುಗೊಳಿ ಸಿದ ಬಳಿಕ ಕಣಿವೆ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿತ್ತಲ್ಲದೆ ಪರಿಸ್ಥಿತಿ ಭಾಗಶಃ ಶಾಂತವಾಗಿತ್ತು.

ಇದರಿಂದಾಗಿ ಜನಜೀವನ ಸಹಜಸ್ಥಿತಿಗೆ ಮರಳಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸುವ ಸಂಬಂಧ ಅಲ್ಲಿನ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಮಾತುಕತೆ ಆರಂಭಿಸಿತ್ತು. ಈ ಹಂತದಲ್ಲಿ ಇದೀಗ ಭಯೋತ್ಪಾದಕರು ಮತ್ತೆ ಬಾಲಬಿಚ್ಚಿದ್ದು ಜಮ್ಮು ಕಾಶ್ಮೀರದಲ್ಲಿನ ಶಾಂತಿಗೆ ಭಂಗ ತರುವ ಪ್ರಯತ್ನ ನಡೆಸಿದ್ದಾರೆ. ಈ ಮೂಲಕ ಮತ್ತೆ ಅಶಾಂತಿಯ ವಾತಾವರಣವನ್ನು ಸೃಷ್ಟಿಸಿ ಜಮ್ಮು ಕಾಶ್ಮೀರದಲ್ಲಿ ಪ್ರಜಾಸತ್ತೆಯನ್ನು ಮರುಸ್ಥಾಪಿಸುವ ಕೇಂದ್ರದ ಪ್ರಯತ್ನಕ್ಕೆ ಅಡ್ಡಗಾಲು ಹಾಕಲು ಉಗ್ರರು ಮುಂದಾದಂತಿದೆ. ಉಗ್ರರು ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ಡ್ರೋನ್‌ ಬಳಸಿ ದಾಳಿ ನಡೆಸಿದ್ದು ಇದರಲ್ಲಿ ಪಾಕಿಸ್ತಾನದ ಕೈವಾಡ ಇರುವ ಸಾಧ್ಯತೆಗಳು ದಟ್ಟವಾಗಿವೆ. ಉಗ್ರರ ಈ ಕೃತ್ಯವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ ಜಮ್ಮು ಕಾಶ್ಮೀರದಲ್ಲಿನ ಶಾಂತ ಪರಿಸ್ಥಿತಿಯನ್ನು ಮತ್ತೆ ಕದಡಲು ಉಗ್ರರಿಗೆ ಅವಕಾಶ ನೀಡ ಬಾರದು. ಭಯೋತ್ಪಾದನೆಯ ದಮನಕ್ಕಾಗಿ ಸರಕಾರ ಕೈಗೊ ಳ್ಳುವ ಕ್ರಮ ಗಳಿಗೆ ವಿಪಕ್ಷಗಳಿಂದಲೂ ಪೂರ್ಣ ತೆರನಾದ ಸಹಕಾರ ಅತ್ಯಗತ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next