ಕಾಸರಗೋಡು: ಕೃಷಿ ವಲಯದ ಬಿಕ್ಕಟ್ಟು ಪರಿಹಾರಕ್ಕೆ ಒಗ್ಗಟ್ಟಿನ ಯತ್ನ ಬೇಕು ಎಂದು ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಅಭಿಪ್ರಾಯಪಟ್ಟರು.
ಪರಪ್ಪ ಬ್ಲಾಕ್ ಪಂಚಾಯತ್‌ಗಾಗಿ ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್‌ನ ಚಾಯೋಂನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ರಾಜ್ಯ ಕೃಷಿ ಇಲಾಖೆ ಮಂಜೂರು ಮಾಡಿರುವ ಕೃಷಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ವಲಯ ಇಡೀ ದೇಶದಲ್ಲಿ ಕಂಗೆಟ್ಟಿದೆ. ಇದರ ಪರಿಹಾರಕ್ಕೆ ಸರಕಾರಿ ಮಟ್ಟದಲ್ಲಿ ದೊಡ್ಡ ರೀತಿಯ ಯತ್ನಗಳ ಅಗತ್ಯವಿದೆ. ಜನತೆಯ ಮಧ್ಯಸ್ಥಿಕೆಯೊಂದಿಗೆ ಕೃಷಿಕರ ಸಹಭಾಗಿತ್ವವೂ ಈ ನಿಟ್ಟಿನಲ್ಲಿ ಅನಿವಾರ್ಯ. ಕೃಷಿಕ ಸಂಘಟನೆಗಳು ರೈತಾಪಿ ಜನತೆಗೆ ಸೌಲಭ್ಯ ಒದಗಿಸುವಲ್ಲಿ ಸರ್ವ ಯತ್ನ ನಡೆಸಬೇಕು ಎಂದರು.
ಇತರ ವಲಯಗಳಲ್ಲಿ ನೌಕರಿಗೆ ತೊಡಗಿಕೊಂಡವರಿಗೆ ಸಿಗುವ ಮಾನ್ಯತೆ ಕೃಷಿಕನಿಗೆ ಸಿಗದಿರುವುದು ಯುವಜನತೆ ರೈತಾಪಿ ವಲಯದತ್ತ ಮನಮಾಡದಂತೆ ಮಾಡಿದೆ. ಆದರೆ ನಿಜಸ್ಥಿತಿಯಲ್ಲಿ ಕೃಷಿಕರಿಲ್ಲದೆ ನಾವಿಲ್ಲ. ನಮ್ಮ ಉದರ ಪೋಷಣೆಗೆ ಕೃಷಿಕರು ಉತ್ಪಾದಿಸುವ ವಿಚಾರಗಳೇ ಅಗತ್ಯ ಎಂಬುದನ್ನು ನಾವು ಹಲವು ಬಾರಿ ಮರೆಯುವುದು ಈ ದುರಂತಕ್ಕೆ ಪ್ರಧಾನ ಕಾರಣ. ಈ ಹಿನ್ನೆಲೆಯಲ್ಲಿ ಕೃಷಿಕರಿಗೆ ಸಿಗುವ ಮನ್ನಣೆ ಇಡೀ ನಾಡಿಗೆ ದೊರೆಯುವ ಗೌರವ ಎಂದವರು ತಿಳಿಸಿದರು.
ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷ ಪಿ. ರಾಜನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪಿ.ವಿ. ತಂಗಮಣಿ ಯಂತ್ರೋಪಕರಣಗಳನ್ನು ವಿತರಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಜೋಸ್ ಪತ್ತಾಲಿಲ್ ಸೇವಾ ಕೇಂದ್ರ ಸದಸ್ಯರಿಗೆ ಗುರುತು ಚೀಟಿ ವಿತರಣೆ ನಡೆಸಿದರು. ವಾರ್ಡ್ ಸದಸ್ಯರಾದ ಕೆ.ಶ್ರೀಧರನ್, ಬೀನಾ, ಕಿನಾನೂರು-ಕರಿಂದಳಂ ಕೃಷಿ ಅಧಿಕಾರಿ ಡಿ.ಎನ್. ಸುಮಾ, ಕೃಷಿ ಸಹಾಯಕ ನಿರ್ದೇಶಕಿ ಜಿ.ಎಸ್. ಸಿಂಧು ಕುಮಾರಿ, ವಿವಿಧ ಜನಪ್ರತಿನಿಧಿಗಳು, ಸಿಬಂದಿ ಉಪಸ್ಥಿತರಿದ್ದರು. ಕೇಂದ್ರದ ಕಾರ್ಯದರ್ಶಿ ಎಂ.ವಿ. ರಾಧಾ ವರದಿ ವಾಚಿಸಿದರು.