Advertisement

‘ತುಳುವ ಸಂಸ್ಕೃತಿಯ ಮೌಲ್ಯ ಅರಿತುಕೊಳ್ಳುವ ಪ್ರಯತ್ನಗಳಾಗಲಿ’

01:34 AM Jul 23, 2019 | sudhir |

ಉಡುಪಿ: ಉಡುಪಿ ಮತ್ತು ದ.ಕ ಜಿಲ್ಲೆ ಸಾಂಸ್ಕೃತಿಕವಾಗಿ, ನೈಸರ್ಗಿಕವಾಗಿಯೂ ಪ್ರಖ್ಯಾತವಾಗಿದೆ. ಇಲ್ಲಿನ ತುಳುವ ಸಂಸ್ಕೃತಿಯ ಮೌಲ್ಯಗಳನ್ನು ಅರಿತುಕೊಳ್ಳುವ ಪ್ರಯತ್ನಗಳಾಗಬೇಕು. ‘ಆಟಿಡೊಂಜಿ ದಿನ’ದಂಥ ಚಟುವಟಿಕೆಗಳು ಇದಕ್ಕೆ ಪೂರಕವಾಗಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಜು. 22ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಉಡುಪಿ ತಾ. ಮಹಿಳಾ ಮಂಡಳಿಗಳ ಒಕ್ಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಂಟರ ಯಾನೆ ನಾಡವರ ಮಾತೃಸಂಘ ತಾಲೂಕು ಸಮಿತಿ ಉಡುಪಿ, ಬಂಟರ ಸಂಘ ಉಡುಪಿ ಹಾಗೂ ತುಳುಕೂಟ ಉಡುಪಿ ವತಿಯಿಂದ ಆಯೋಜಿಸಲಾಗಿದ್ದ ‘ಆಟಿಡೊಂಜಿ ದಿನ ಪೊಂಜೆವನೆ ಕೂಟ'(ಆಷಾಢದಲ್ಲೊಂದು ದಿನ ಮಹಿಳೆಯರ ಕೂಟ) ಕಾರ್ಯ ಕ್ರಮವನ್ನು ಉದ್ಘಾಟಿಸಿದರು.

ಸಾಂಸ್ಕೃತಿಕವಾಗಿಯೂ ಶ್ರೀಮಂತ ವಾಗಿರುವ ಈ ಸ್ಥಳದಲ್ಲಿ ಏನು ಕೆಲಸ ಮಾಡಿದರೂ ಉತ್ತಮ ಫ‌ಲ ನೀಡುತ್ತದೆ. ಇದು ಅವಿಸ್ಮರಣೀಯ ಕಾರ್ಯಕ್ರಮ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಈಗ ವಿವಿಧ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲು ತರಬೇತಿ ನೀಡುವ ‘ಡಿಪ್ಲೊಮಾ ಕೋರ್ಸ್‌ ಇನ್‌ ಮಲ್ಟಿ ಟಾಸ್ಕಿಂಗ್‌’ ಕುರಿತು ಓದಿದ್ದೇನೆ. ಆದರೆ ಮಹಿಳೆಯರು ಈಗಾಗಲೇ ಮಲ್ಟಿ ಟಾಸ್ಕಿಂಗ್‌ ಮಾಡುವ ಸಾಮರ್ಥಯ ಹೊಂದಿದ್ದಾರೆ. ಮನೆಕೆಲಸ, ಸಂಘ ಸಂಸ್ಥೆಗಳು, ಕಚೇರಿ, ರೈತ ಮಹಿಳೆಯಾಗಿ, ಓದಿನಲ್ಲಿ ಹೀಗೆ ವಿವಿಧ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿ ಯಶಸ್ವಿಯಾಗುತ್ತಿದ್ದಾರೆ ಎಂದು ಹೆಪ್ಸಿಬಾ ರಾಣಿ ಹೇಳಿದರು.

ಸಂಸ್ಕೃತಿ ಉಳಿಯಲಿ

Advertisement

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿ.ಪಂ. ಸಿಇಒ ಸಿಂಧೂ ರೂಪೇಶ್‌ ಮಾತನಾಡಿ ಇದೊಂದು ವಿಭಿನ್ನ ಕಾರ್ಯ ಕ್ರಮ. ಕರಾವಳಿಯ ಸಂಸ್ಕೃತಿ ತಿಳಿಯಲು ಇದೊಂದು ಅವಕಾಶ. ವಿಶೇಷವಾಗಿ ಇಲ್ಲಿನ ಆಷಾಢ ಮಾಸದ ತಿನಿಸುಗಳ ಬಗ್ಗೆ ತಿಳಿಯುವ ಆಸಕ್ತಿ ನನಗೆ ಇತ್ತು. ಶ್ರೀಮಂತವಾಗಿರುವ ಇಲ್ಲಿನ ಸಂಸ್ಕೃತಿಯನ್ನು ಮುಂದಿನ ಜನಾಂಗ ಕೂಡ ತಿಳಿದುಕೊಂಡು ಅದನ್ನು ಉಳಿಸುವಂತಾಗಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉಡುಪಿ ತಾ. ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಶೀಲಾ ಕೆ.ಶೆಟ್ಟಿ ‘ಮಹಿಳಾ ಮಂಡಳಿಗಳ ಒಕ್ಕೂಟ 2000ದಿಂದ ಇಂಥ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ತುಳುನಾಡಿನ ಅಂದಿನ ಕಷ್ಟದ ದಿನಗಳು, ರೀತಿ ರಿವಾಜುಗಳನ್ನು ನೆನಪಿಸಿಕೊಡುವುದು ಇದರ ಉದ್ದೇಶ’ ಎಂದು ಹೇಳಿದರು. ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಸರಳಾ ಬಿ.ಕಾಂಚನ್‌ ಮಾತನಾಡಿ ‘ಹಿಂದಿನ ಕಾಲದ ತಿನಿಸುಗಳು ಪೌಷ್ಠಿಕಾಂಶದಿಂದ ಕೂಡಿದ್ದವು. ಆದರೆ ಇಂದು ಫಾಸ್ಟ್‌ಫ‌ುಡ್‌ನ‌ ಆಕರ್ಷಣೆಯಿಂದಾಗಿ ಆರೋಗ್ಯ ಕೆಡಿಸಿಕೊಳ್ಳುವ ಸ್ಥಿತಿ ಬಂದಿದೆ. ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ’ ಎಂದು ಹೇಳಿದರು.

ಉಜ್ವಲ್ ಡೆವಲಪರ್ನ ಪುರುಷೋತ್ತಮ ಶೆಟ್ಟಿ, ಬಂಟರ ಸಂಘದ ಪದಾಧಿಕಾರಿ ಗಳಾದ ಅಂಡಾರು ದೇವಿಪ್ರಸಾದ್‌ ಶೆಟ್ಟಿ, ಮನೋಹರ ಶೆಟ್ಟಿ ತೋನ್ಸೆ, ಮೋಹನ್‌ ಶೆಟ್ಟಿ ನಿಡಂಬೂರು ಉಪಸ್ಥಿತರಿದ್ದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯಶೋಧಾ ಜೆ.ಶೆಟ್ಟಿ ಸ್ವಾಗತಿಸಿದರು. ಪ್ರಸನ್ನ ಪ್ರಸಾದ್‌ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಗೀತಾ ರವಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next