Advertisement

ಮತದಾನ ಬಹಿಷ್ಕರಿಸದಂತೆ ರೈತರ ಮನವೊಲಿಕೆ ಯತ್ನ ವಿಫ‌ಲ

12:58 PM Mar 27, 2019 | Team Udayavani |

ಚನ್ನರಾಯಪಟ್ಟಣ/ಹಿರೀಸಾವೆ: ಹೋಬಳಿ ದಿಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯಿಂದ ಲೋಕಸಭೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಜೆ.ಬಿ.ಮಾರುತಿ ಹಾಗೂ ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸಗೌಡ ದಿಡಗ ಗ್ರಾಮಕ್ಕೆ ಭೇಟಿ ನೀಡಿ ಮತದಾನ ಮಾಡುವಂತೆ ಸಾರ್ವಜನಿಕರ ಮನವೊಲಿಸಿದರು.

Advertisement

ಅಧಿಕಾರಿಗಳು ಮತದಾನ ಮಾಡುವಂತೆ ರೈತರಿಗೆ ತಿಳಿ ಹೇಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹಲವು ಮಂದಿ ಮತದಾನ ಬಹಿಷ್ಕಾರ ಮಾಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದರು.

ಜನ ಪ್ರತಿನಿಧಿಗಳಿಗೆ ತಕ್ಕ ಪಾಠ: ಈ ವೇಳೆ ಕೆಲವರು ಮಾತನಾಡಿ, ಈ ಭಾಗದ ಜನತೆ ಚುನಾವಣೆ ಬಹಿಷ್ಕಾರ ಮಾಡುವ ಮೂಲಕ ಜನಪ್ರತಿನಿಧಿಗಳಿಗೆ ತಕ್ಕ ಉತ್ತರ ನೀಡಬೇಕು ಇಲ್ಲದಿದ್ದರೆ ಇವರ ಕಳ್ಳಾಟ ತಡೆಯಲು ಸಾಧ್ಯವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕಳೆದ 10 ವರ್ಷಗಳಿಂದ ದಿಡಗ, ಕಬ್ಬಳಿ ವ್ಯಾಪ್ತಿಯಲ್ಲಿ ಮಳೆಯಾಗದೆ ಇರುವುದರಿಂದ ಕೆರೆ ಕಟ್ಟೆಗಳಲ್ಲಿ ನೀರಿಲ್ಲ, ಇದರ ಪರಿಣಾಮ ಅಂತರ್ಜಲದ ಮಟ್ಟ ಕುಸಿತವಾಗಿದೆ, ಕೊಳವೆ ಬಾವಿಗಳು ಬತ್ತಿಹೋಗಿವೆ, ಕುಡಿಯಲು ನೀರಿಲ್ಲ, ಸಾವಿರಾರು ತೆಂಗಿನ ಮರಗಳ ಸುಳಿ ಹಾರಿಹೋಗುತ್ತಿರುವುದರಿಂದ ರೈತರು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದೇವೆ, ಈ ಬಗ್ಗೆ ಕ್ಷೇತ್ರದ ಶಾಸಕ ಸಿ.ಎನ್‌.ಬಾಲಕೃಷ್ಣ ಅವರು ಪ್ರತ್ಯಕ್ಷವಾಗಿ ಕಂಡರು ಬೇಜವಾಬ್ದಾರಿಯಿಂದ ಆಡಳಿತ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತ ಪಡಿಸಿದರು.

ನಿರ್ಧಾರ ಕೈಗೊಳ್ಳುವ ಹಕ್ಕಿದೆ: ನಮಗೆ ಅನ್ಯ ಮಾರ್ಗವಿಲ್ಲದೆ ಮತದಾನ ಬಹಿಷ್ಕಾರ ಮಾಡುವ ದಾರಿಗೆ ಬಂದಿದ್ದೇವೆ. ನೀವು ನಿಮ್ಮ ಕೆಲಸ ಮಾಡಿ ನಾವು ಚುನಾವಣಗೆ ಅಡ್ಡಿ ಪಡಿಸುವುದಿಲ್ಲ, ಆದರೆ ನಮ್ಮ ಹಕ್ಕು ಚಲಾವಣೆ ಮಾಡುವುದು ಬೇಡ ಎಂಬ ನಿರ್ಧಾರ ಕೈಗೊಳ್ಳಲು ನಮಗೂ ಸ್ವಾತಂತ್ರ್ಯವಿದೆ. ನಿಮ್ಮ ಕೆಲಸಕ್ಕಾಗಿ ನಮ್ಮನ್ನು ಬಲಿಕೊಡುವುದು ಬೇಡ ನಮಗೆ ನೀರು ಕೊಡುವ ವರೆಗೆ ಈ ಭಾಗದ ಜನತೆ ಮತದಾನ ಬಹಿಷ್ಕಾರ ಮಾಡುವುದು ಶತಸಿದ್ದ ಎಂದು ಎಚ್ಚರಿಕೆ ನೀಡಿದರು.

Advertisement

ಮತದಾನಕ್ಕೆ ಸಹಕರಿಸಿ: ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸಗೌಡ ಮಾತನಾಡಿ, ನಿಮ್ಮ ಸಮಸ್ಯೆಯ ಬಗ್ಗೆ ನಮಗೂ ಅರ್ಥವಾಗುತ್ತದೆ. ಆದರೆ ಚುನಾವಣಾ ಬಹಿಷ್ಕಾರವೇ ಇದಕ್ಕೆ ಪರಿಹಾರವಲ್ಲ, ಚುನಾವಣೆ ಅಥವಾ ಮತದಾನವನ್ನು ಬಷ್ಕಾರ ಮಾಡುವುದು ಸಂವಿಧಾನ ಉಲ್ಲಂಘನೆ ಮಾಡಿದಂತೆ, ದಯಟ್ಟು ಶಾಂತಿಯುತ ಮತದಾನಕ್ಕೆ ಸಹಕರಿಸಿ ಎಂದು ಹೇಳಿದರು.

ಅಧಿಕಾರಿಗಳ ಮಾತಿಗೆ ಕೆಲವು ಮಂದಿ ಸಕಾರಾತ್ಮಕವಾಗಿ ಸ್ಪಂದಿಸಿದರೆ ಹಲವು ಮಂದಿ ರೈತರು ಈ ಭಾರಿ ಲೋಕಸಭೆ ಚುನಾವಣೆ ಮತದಾನ ಬಹಿಷ್ಕಾರ ಮಾಡುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಆಕ್ರೋಶವ್ಯಕ್ತ ಪಡಿಸಿದರು.

ಕಂದಾಯ ನಿರೀಕ್ಷಕ ದೇವರಾಜ್‌, ಗ್ರಾಮ ಲೆಕ್ಕಿಗ ನವೀನ್‌, ತಾಲೂಕು ಪಂಚಾಯಿತಿ ಸದಸ್ಯ ಎಂ.ಆರ್‌.ವಾಸು, ಮಾಜಿ ಸದಸ್ಯ ತುಮಕೂರು ಪುಟ್ಟರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ರಘುರಾಮ್‌, ಸದಸ್ಯ ಎಚ್‌.ಕೆ.ಯೋಗನಾರಾಯಣ, ಮುಖಂಡ ಡಿ.ಕೆ.ಶಿವಣ್ಣ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next