Advertisement
ಆದರ್ಶನಗರದಲ್ಲಿರುವ ಸರಕಾರಿ ಜಾಗದಲ್ಲಿ ನಿರ್ಮಾಣಗೊಂಡಿರುವ ಜಿ.ಪಂ.ನ ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಖಾಲಿ ಸರಕಾರಿ ಜಾಗವಿತ್ತು. ಅದನ್ನು ಬೇರೆ ಗ್ರಾಮದ ಮಹಿಳೆಯೊಬ್ಬರು ಬಂದು ಜೆಸಿಬಿಯಿಂದ ಸಮತಟ್ಟು ಮಾಡಿಸಲು ಮುಂದಾದರು. ಇದನ್ನು ಸ್ಥಳೀಯರು ಆಕ್ಷೇಪಿಸಿದಾಗ, 34ನೇ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷರೇ ತನಗೆ ಈ ಜಾಗ ತೋರಿಸಿದ್ದಾರೆ ಎಂದು ಮಹಿಳೆ ಹೇಳಿದ್ದು ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.
ಉಪ್ಪಿನಂಗಡಿ- ಪುತ್ತೂರು ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಈ ಸರಕಾರಿ ಜಾಗವನ್ನು ಸಮತಟ್ಟುಗೊಳಿಸಲಾಗಿದ್ದು, ಇದರಿಂದ ಅಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಗ್ರಾ.ಪಂ.ನ ಕೊಳವೆ ಬಾವಿಗೆ ಕುತ್ತು ಬರುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆತಂಕ ವ್ಕಕ್ತಪಡಿಸಿದ್ದಾರೆ. ಗ್ರಾ.ಪಂ. ಅಧ್ಯಕ್ಷರೇ ಜಾಗ ತೋರಿಸಿದ್ದಾರೆ ಎಂದು ಮಹಿಳೆ ಹೇಳಿದ್ದರಿಂದ ಸ್ಥಳೀಯರು ಗ್ರಾ.ಪಂ. ಉಪಾಧ್ಯಕ್ಷ ಅಸ್ಕರ್ ಅಲಿ ಹಾಗೂ ಶೇಖಬ್ಬ ಅವರಿಗೆ ಮಾಹಿತಿ ನೀಡಿದರು. ಅವರು ಸ್ಥಳಕ್ಕೆ ಆಗಮಿಸಿ, ನಮಗೆ ಏನೂ ತಿಳಿದಿಲ್ಲ ಎಂದರಲ್ಲದೆ, ಸ್ಥಳೀಯರ ಪರ ನಿಂತರು. 34ನೇ ನೆಕ್ಕಿಲಾಡಿ ಗ್ರಾಮದಲ್ಲೇ ನಿವೇಶನರಹಿತ ಹಲವು ಕುಟುಂಬಗಳು ಇರುವಾಗ ಬೇರೆ ಗ್ರಾಮದ ಮಹಿಳೆಗೆ ಜಾಗ ತೋರಿಸುವ ಅಗತ್ಯವಾದರೂ ಏನು? ಸರಕಾರಿ ಜಾಗದ ಹಕ್ಕು ಸಾಧಿಸಲು ಪಂಚಾಯತ್ ಅಧ್ಯಕ್ಷರಿಗೆ ಅಧಿಕಾರವಿದೆಯೇ? ಜಾಗ ಅತಿಕ್ರಮಿಸಿದ ಮಹಿಳೆಯ ಹೇಳಿಕೆಯಿಂದ ಅಧ್ಯಕ್ಷರ ಮೇಲೆಯೇ ಸಂಶಯ ಮೂಡಿಸಿದೆ. ಸರಕಾರಿ ಜಾಗ ಅತಿಕ್ರಮಿಸಲು ಅವಕಾಶ
ನೀಡಬಾರದು ಎಂದು ಒತ್ತಾಯಿಸಿ, ಸ್ಥಳೀಯರು 34ನೇ ನೆಕ್ಕಿಲಾಡಿ ಗ್ರಾ.ಪಂ.ಗೆ ಮನವಿಯನ್ನೂ ನೀಡಿದ್ದಾರೆ.
Related Articles
ಈ ಕುರಿತು ಉದಯವಾಣಿ – ಸುದಿನ ಪ್ರಶ್ನಿಸಿದಾಗ, ಸರಕಾರಿ ಜಾಗದಲ್ಲಿ ಈ ಮಹಿಳೆ ಮನೆ ಕಟ್ಟಲು ಅನುಮತಿ ಕೇಳಿದ್ದರು. ಆದರೆ, ಅಲ್ಲಿ ಪಕ್ಕದಲ್ಲೇ ಕುಡಿಯುವ ನೀರಿನ ಟ್ಯಾಂಕ್ ಇರುವ ಕಾರಣ ಸ್ಥಳೀಯರು ಆಕ್ಷೇಪಿಸಿದ್ದಾರೆ. ಇದನ್ನು ಮನಗಂಡು, ಅಕ್ರಮ ನಿರ್ಮಾಣವನ್ನು ತೆರವು ಮಾಡುವಂತೆ ಸೂಚಿಸಿದ್ದೇನೆ ಎಂದು 34ನೇ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ರತಿ ಎಸ್. ನಾೖಕ್ ಪ್ರತಿಕ್ರಿಯಿಸಿದ್ದಾರೆ.
Advertisement