ಕುಂದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಈ ವರ್ಷ ಕ್ರಿಯಾಯೋಜನೆ ತಯಾರಿಸಿದ್ದು ವಿವಿಧ ಕೌಶಲಾಧಾರಿತ ತರಬೇತಿಗಳ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವ ಪ್ರಯತ್ನ ಸಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ಬಿ. ಗಣೇಶ್ ಅವರು ಹೇಳಿದರು.
ಬುಧವಾರ ಇಲ್ಲಿನ ಕುಂದೇಶ್ವರ ದೇವಸ್ಥಾನದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕೌಶಲಾಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವ ಉದ್ಯೋಗಕ್ಕೆ ಪೂರಕವಾಗಿ ಕೌಶಲಾಧಾರಿತ ತರಬೇತಿಗಳನ್ನು ನೀಡಲಾಗುತ್ತಿದ್ದು ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಲು ಬಟ್ಟೆ ಚೀಲಗಳ ಹೊಲಿಗೆ ತರಬೇತಿ, ಸೀರೆಗೆ ಗುತ್ಛ ಹಾಕುವ ತರಬೇತಿ, ಬ್ಯುಟಿಶಿಯನ್ ತರಬೇತಿ, ಕೃತಕ ಆಭರಣ ತರಬೇತಿ ನೀಡಲಾಗುತ್ತಿದೆ. ಆದಾಯಕ್ಕೆ ದಾರಿಯಾಗಬಲ್ಲ ತರಬೇತಿಗಳನ್ನೇ ನೀಡುತ್ತಿದ್ದು ಎಲ್ಲರಿಗೂ ರುಡ್‌ಸೆಟ್ ಮೂಲಕ ಸನಿವಾಸ ತರಬೇತಿ ಪಡೆಯಲು ಕಷ್ಟವಾಗುವ ಕಾರಣ ಆಯಾ ಪ್ರದೇಶದಲ್ಲೇ ತರಬೇತಿ ನೀಡಲಾಗುತ್ತಿದೆ ಎಂದರು.
ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಾನಂದ ಚಾತ್ರ ಅವರು ವಾಹನಗಳ ಕೀಲಿ ಕೈ ಹಸ್ತಾಂತರಿಸಿದರು.
ಪುರಸಭೆ ಸದಸ್ಯ ಗಿರೀಶ್ ಜಿ.ಕೆ., ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಮುರಳೀಧರ ಶೆಟ್ಟಿ, ಸ್ವಸಹಾಯ ಸಂಘಗಳ ಒಕ್ಕೂಟ ಕೇಂದ್ರ ಸಮಿತಿ ಅಧ್ಯಕ್ಷೆ ಶೋಭಾಚಂದ್ರ, ವಲಯಾಧ್ಯಕ್ಷೆ ಉತ್ಕಲಾ, ತರಬೇತಿ ನೀಡಿದ ಬೇಬಿ, ಟಿವಿಎಸ್ ಶೋರೂಂನ ಪ್ರಶಾಂತ್ ಉಪಸ್ಥಿತರಿದ್ದರು.
ಒಟ್ಟು 25 ಮಂದಿಗೆ ದ್ವಿಚಕ್ರ ವಾಹನ ಚಾಲನೆ ತರಬೇತಿ ನೀಡಿ ಚಾಲನಾ ಪರವಾನಗಿ ಮಾಡಿಸಿಕೊಡಲಾಗಿದೆ. ಈ ಪೈಕಿ 22 ಮಂದಿ ವಾಹನ ಖರೀದಿಸಲು ಸಾಲ ಪಡೆದಿದ್ದಾರೆ. 16 ಮಂದಿಗೆ ಬುಧವಾರ ಏಕಕಾಲದಲ್ಲಿ ವಿತರಿಸಲಾಯಿತು. ದೇಗುಲದ ಎದುರು ಪೂಜೆ ಮಾಡಿ ವಾಹನದ ಕೀಲಿ ಕೈ ಹಸ್ತಾಂತರಿಸಲಾಯಿತು.ವಲಯ ಮೇಲ್ವಿಚಾರಕ ಪಾಂಡ್ಯನ್ ಹೆಮ್ಮಾಡಿ ನಿರ್ವಹಿಸಿ, ಪ್ರಸನ್ನ ದೇವಾಡಿಗ ಸ್ವಾಗತಿಸಿದರು.
ನಿಯಮ ಪಾಲಿಸಿ
ತರಬೇತಿ ಪಡೆದವರಿಗೆ ಸಾಲ ಸೌಲಭ್ಯ ನೀಡಲಾಗುತ್ತಿದ್ದು ಸಾಲದ ಶೇ.10ರಷ್ಟನ್ನು ಸಬ್ಸಿಡಿಯಾಗಿ ಕೂಡಾ ನೀಡಲಾಗುತ್ತಿದೆ. ಇಲ್ಲಿ ದ್ವಿಚಕ್ರ ವಾಹನ ಚಾಲನೆ ತರಬೇತಿ ನಡೆದಿದ್ದು ದ್ವಿಚಕ್ರ ವಾಹನ ಕೊಳ್ಳುವವರಿಗೆ ಸಾಲ ನೀಡಲಾಗಿದೆ. ವಾಹನ ಮಾರಾಟ ಸಂಸ್ಥೆ ಜತೆ ಮಾತುಕತೆ ನಡೆಸಿ ರಿಯಾಯಿತಿ ಕೊಡಿಸಲಾಗಿದೆ. ವಾಹನ ಸವಾರರು ಹೆಲ್ಮೆಟ್ ಧರಿಸಿ, ರಸ್ತೆ ಸಂಚಾರಿ ನಿಯಮ ಪಾಲಿಸಿ.
– ಬಿ.ಗಣೇಶ್