Advertisement

‘ವಸತಿ ನಿಲಯಕ್ಕೆ ನಿವೇಶನ ಪಡೆಯಲು ಪ್ರಯತ್ನ’

12:08 AM Aug 03, 2019 | mahesh |

ಪುತ್ತೂರು: ಕೆಲವು ದಿನಗಳ ಹಿಂದೆ ಬಿರುಗಾಳಿಗೆ ಸಿಕ್ಕಿ ಛಾವಣಿಯ ಸಿಮೆಂಟ್ ಶೀಟ್ ಹಾರಿಹೋಗಿ ಅವಾಂತರ ಸೃಷ್ಟಿಸಿದ ನಗರದ ಉರ್ಲಾಂಡಿಯಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಅನಂತರದ ವಿದ್ಯಾರ್ಥಿ ನಿಲಯಕ್ಕೆ ಶುಕ್ರವಾರ ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Advertisement

ವಿದ್ಯಾರ್ಥಿ ನಿಲಯದ ಕಟ್ಟಡವು ಮಕ್ಕಳ ವಾಸ್ತವ್ಯಕ್ಕೆ ಅನುಕೂಲಕರವಾಗಿಲ್ಲ ಎಂಬ ಅಂಶವನ್ನು ಮನಗಂಡ ಶಾಸಕರು, ವಿದ್ಯಾರ್ಥಿ ನಿಲಯದ ಸ್ವಂತ ಕಟ್ಟಡವನ್ನು ನಿರ್ಮಿಸಲು ನಗರದ ಬೊಳುವಾರು ಪರಿಸರದಲ್ಲಿ ಸರಕಾರಿ ಹೊಸ ನಿವೇಶನವನ್ನು ಪಡೆದುಕೊಳ್ಳಲಾಗುವುದು. ಅಲ್ಲಿಯವರೆಗೆ ವಿದ್ಯಾರ್ಥಿನಿ ನಿಲಯದ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಶಾಸಕರಿಂದ ಸೂಚನೆ
ಭದ್ರತೆಯ ದೃಷ್ಟಿಯಿಂದಲೂ ಉರ್ಲಾಂಡಿಯ ಕಟ್ಟಡವು ಮತ್ತೆ ವಿದ್ಯಾರ್ಥಿ ನಿಲಯವನ್ನು ಆರಂಭಿಸಲು ಸೂಕ್ತವಾಗಿಲ್ಲ ಎಂಬ ಅಂಶವನ್ನು ಇಲಾಖಾ ಅಧಿಕಾರಿಗಳಿಗೆ ತಿಳಿಸಿದ ಶಾಸಕರು ವಿದ್ಯಾರ್ಥಿ ನಿಲಯವನ್ನು ಆರಂಭಿಸಲು ಬಾಡಿಗೆ ಕಟ್ಟಡಗಳನ್ನು ಆಯ್ಕೆ ಮಾಡುವ ಮೊದಲು ಅಲ್ಲಿನ ಮೂಲ ಸೌಕರ್ಯಗಳು, ಕಟ್ಟಡದ ಭದ್ರತೆ ಮತ್ತು ನಗರಸಭೆಯಿಂದ ಪಡೆದುಕೊಂಡ ಪರವಾನಿಗೆಯ ಕುರಿತು ದೃಢೀಕರಿಸುವ ಕೆಲಸ ಮಾಡಬೇಕು. ಏಕಾಏಕಿ ಯಾವುದೇ ಕಟ್ಟಡಗಳನ್ನು ವಿದ್ಯಾರ್ಥಿ ನಿಲಯಕ್ಕಾಗಿ ಆಯ್ಕೆ ಮಾಡಬಾರದು ಎಂದು ಶಾಸಕರು ಸೂಚನೆ ನೀಡಿದರು.

ನಗರಸಭೆ ಸದಸ್ಯರಾದ ಕೆ. ಜೀವಂಧರ್‌ ಜೈನ್‌, ಸಂತೋಷ್‌ ಕುಮಾರ್‌, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ತಾರಾನಾಥ್‌, ವಿದ್ಯಾರ್ಥಿ ನಿಲಯ ಪಾಲಕ ಜೋಸೆಫ್‌, ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್‌ ಹಾರಾಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next