ಕಲಬುರಗಿ: ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಎಲ್ಲ ಇಲಾಖೆಗಳು ಸೇರಿ ಒಗ್ಗಟಿನಿಂದ ಕೆಲಸ ಮಾಡಬೇಕು. ಅಂದಾಗ ಮಾತ್ರ ಈ ಕೃತ್ಯವನ್ನು ಹತೋಟಿ ತರಲು ಸಹಾಯವಾಗುತ್ತದೆ ಎಂದು ಸಹಾಯಕ ಪೊಲೀಸ್ ಆಯುಕ್ತ ದೀಪನ್ ಎಂ.ಎನ್ ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಕಳ್ಳ ಸಾಗಾಣಿಕೆಗೆ ಅನೇಕ ಕಾರಣಗಳಿವೆ. ಅದರಲ್ಲಿ ಪ್ರಮುಖವಾಗಿ ಹೆಣ್ಣು ಮಕ್ಕಳನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುವುದು, ಅಂಗಾಂಗ ಮಾರಾಟ, ಬಾಲ ಕಾರ್ಮಿಕತೆ, ಬಾಲ್ಯ ವಿವಾಹದಂತ ಪದ್ಧತಿಗಳು ಕಾರಣವಾಗುತ್ತವೆ. ಇದನ್ನೆಲ್ಲ ತನಿಖೆ ಮಾಡಿ, ಜಾಗೃತಿ ಮೂಡಿಸುವಂತ ಕೆಲಸವಾಗಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನವೀನ ಕುಮಾರ್ ಯು. ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಕಾಳಜಿಯುತವಾಗಿ ಕೆಲಸ ನಿರ್ವಹಿಸಬೇಕು. ಮಕ್ಕಳಿಗೆ ಸದ್ಗುಣ, ಸಂಪ್ರದಾಯ ಹೇಳಬೇಕು ಎಂದು ಹೇಳಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಬುಂಡ ಮಾತನಾಡಿ, ಮಕ್ಕಳ ಅಪಹರಣ ಹಾಗೂ ಮಾರಾಟ ದೊಡ್ಡ ಮಾಫಿಯಾ ಆಗಿ ಬೆಳೆಯುತ್ತಿದೆ. ಈ ಕುರಿತು ಪಾಲಕರು ಹಾಗೂ ಮಕ್ಕಳಿಗೆ ಶಾಲೆ-ಕಾಲೇಜುಗಳಲ್ಲಿ ಈ ಕುರಿತು ಮಾಹಿತಿ ನೀಡಬೇಕು. ಅನೇಕ ಕಾರ್ಯಕ್ರಮಗಳ ಮುಖಾಂತರ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಶಿಶು ಅಭಿವೃದ್ಧಿ ಕಾರ್ಯಕ್ರಮ ಅಧಿಕಾರಿ ಪ್ರವೀಣ್ ಹೇರೂರ್ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಗೆ ಇತ್ತೀಚೆಯ ದಿನಗಳಲ್ಲಿ ಮೊದಲು ಕಾಲೇಜು ವಿದ್ಯಾರ್ಥಿಗಳ ಗುರಿಯಾಗಿಸಿಕೊಂಡು, ಆಕರ್ಷಣೆಗೆ ಒಳಪಡಿಸಿ, ನಂಬಿಸಿ, ಮೋಸ ಮಾಡಿ ಜಾಲದಲ್ಲಿ ಸಿಕ್ಕಿಸಿ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭೀಮರಾಯ ಕಣ್ಣೂರು ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಣ್ಣ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಂಆರ್‌ಎಂಸಿ ಪ್ರಾಧ್ಯಾಪಕ ಡಾ| ಶ್ರೀಶೈಲ ಘೂಳಿ ಉಪನ್ಯಾಸ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಜಯಕುಮಾರ, ಸಹಾಯಕ ಶಿಕ್ಷಣ ಅಧಿಕಾರಿ ಎಸ್.ಬಿ ಪಾಟೀಲ, ಮಹಿಳಾ ಪೊಲೀಸ್ ಠಾಣೆ ಆರಕ್ಷಕ ನದಾಫ್, ಕಾನೂನು ಅಧಿಕಾರಿ ಭರತೇಶ ಬಿ. ಶೀಲವಂತರ್ ಹಾಗೂ ವಿವಿಧ ಇಲಾಖೆ ಸಿಬ್ಬಂದಿ ಇದ್ದರು. ಇದಕ್ಕೂ ಮುನ್ನ, ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ರಂಗಮಂದಿರದಿಂದ ಜಗತ್ ವೃತ್ತದವರೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.