Advertisement

ಪರಿಶ್ರಮವೇ ನಿಜವಾದ ಕಾಯಕ

05:17 PM May 02, 2018 | Team Udayavani |

ಬಳ್ಳಾರಿ: ಪ್ರತಿವ್ಯಕ್ತಿಯು ತನ್ನ ಜೀವನೋಪಾಯಕ್ಕಾಗಿ ಮಾಡುವ ಪ್ರತಿಯೊಂದು ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ಪ್ರಾಮಾಣಿಕತೆಯಿಂದ ವರ್ತಿಸುವುದೇ ಪೂಜೆಯಾಗಿದೆ. ವ್ಯಕ್ತಿ ಮಾಡುವ ಕಾಯಕ ಮೇಲು ಅಥವಾ ಕೀಳಲ್ಲ. ಅದು ತನ್ನ ಪ್ರಗತಿಯ ದ್ಯೋತಕವಾಗಿದೆ ಎಂದು ಕನ್ನಡ ಉಪನ್ಯಾಸಕ ಡಾ| ಕೊಟ್ರೇಶ್‌ ಅಭಿಪ್ರಾಯಪಟ್ಟರು.

Advertisement

ನಗರದ ಬೊಮ್ಮನಹಾಳ್‌ ರಸ್ತೆಯ ಅಮರ್‌ ಏಜೆನ್ಸಿಸ್‌ ಕಚೇರಿಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಮಲ್ಲಮ್ಮ ಡಾ| ಬಸವನಗೌಡರ ದತ್ತಿ, ಡಾ| ಜೆ.ಎಂ.ವೀರಭದ್ರಪ್ಪ ಸರ್ವಮಂಗಳಮ್ಮ ದತ್ತಿ ಮತ್ತು 213ನೇ ಮಹಾಮನೆ ಬಸವ ಜಯಂತಿ ವಿಶೇಷ ”ಕಾಯಕ ದಿನಾಚರಣೆ” ದತ್ತಿ ಕಾರ್ಯಕ್ರಮದಲ್ಲಿ ”ಕಾಯಕದಲ್ಲಿ ನಿರತನಾದೊಡೆ” ಎಂಬ ವಿಷಯ ಕುರಿತು ಅವರು ಮಾತನಾಡಿದರು.

ಕಾಯಕದ ಶ್ರೇಷ್ಠತೆ ಸಾರಿದ ಆಯ್ದಕ್ಕಿ ಮಾರಯ್ಯ, ನುಲಿಯ ಚಂದಯ್ಯ, ಮೋಳಿಗೆ ಮಾರಯ್ಯ ಇವರ ಜೀವನ ಶ್ರೇಷ್ಠತೆಯನ್ನು ವಿವರಿಸುತ್ತ ಕಾಯಕದಲ್ಲಿ ನಿರತನಾದಾಗ ಗುರು, ಲಿಂಗ, ಜಂಗಮ ಇವರು ಮುಂದೆ ಬಂದರೂ ಮರೆಯಬೇಕು. ಗುರು-ಲಿಂಗ- ಜಂಗಮಕ್ಕಾದರೂ ಕಾಯಕದಿಂದಲೇ ಮುಕ್ತಿ ಎಂಬ ಮಾತನ್ನು ಹೇಳಿರುವುದು ಗಾಂಧಿ, ಕಾರ್ಲ್ಮಾರ್ಕ್ಸ್ರು ಕೆಲಸದ ಘನತೆಯನ್ನು ಸಾರಿದರೆ ಬಸವಣ್ಣನವರು ಘನತೆಯ ಜೊತೆಗೆ ಕೆಲಸವನ್ನು ದೈವತ್ವಕ್ಕೇರಿಸಿ ‘ಕಾಯಕ’ವೆಂಬ ಹೊಸ ಅರ್ಥವನ್ನು ನೀಡಿದರು ಎಂದರು.

ವೈಮಾನಿಕ ಇಲಾಖೆಯ ನಿವೃತ್ತಿ ಅಧಿಕಾರಿ ಪ್ರಸನ್ನಗೌಡ ಮಾತನಾಡಿ, ದೈನಂದಿನ ಬದುಕಿನಲ್ಲಿ ಕೆಲಸದಲ್ಲಿಯೇ ತನ್ನ ಆತ್ಮತೃಪ್ತಿಯನ್ನು ಪಡೆಯುವ ಮೂಲಕ ವ್ಯಕ್ತಿಯ ವಿಕಾಸ ಸಮಾಜದ ಅಭಿವೃದ್ಧಿ ಎರಡನ್ನೂ ಮೇಳೈಸಿ ಕೆಲಸಕ್ಕೆ ಪೂಜ್ಯತೆ ಕೊಟ್ಟದ್ದು ಸೂಕ್ತವಾಗಿದೆ ಎಂದರು. ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ಸಿ.ಕಿಶೋರ್‌ಬಾಬು ಮಾತನಾಡಿದರು. ಅಮರ್‌ ಏಜೆನ್ಸೀಸ್‌ ಮಾಲೀಕ ಮರೀಗೌಡ ಪಾಟೀಲ್‌ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ ವಿಮ್ಸ್‌ ಶುಶ್ರೂಷಕಿ ಶೈನಿಜಾನ್‌, ಅಕ್ಷಯಾ ಡಿಜಿಟಲ್ಸ್‌ನ ಬಿ.ವೆಂಕಟೇಶ್‌, ಡಯಟ್‌ನ ಸೇವಕಿ ಹಿಮಾಚಲಮ್ಮ ತಿಪ್ಪಯ್ಯ ಇವರನ್ನು ಕಾಯಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಉಪನ್ಯಾಸಕ ಎಸ್‌.ಪಿ.ಹೊಂಬಳ್‌ ಪ್ರಾರ್ಥಿಸಿದರು. ಕಾರ್ಮಿಕ ರಾಜಶೇಖರ ಸ್ವಾಗತಿಸಿದರು. ಪರಿಷತ್‌ ಅಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next