Advertisement

ಮೇಲ್ಸೇತುವೆಗಿಂತ ಸಮರ್ಥ ಸಾರಿಗೆ ವ್ಯವಸ್ಥೆಯೇ ಪರಿಹಾರ

12:35 PM Mar 04, 2017 | Team Udayavani |

* ವಿ.ಬಾಲಸುಬ್ರಮಣ್ಯನ್‌, 
ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಚಾಲುಕ್ಯ ವೃತ್ತದಿಂದ ಹೆಬ್ಟಾಳ ನಡುವಿನ ಸಂಚಾರ ದಟ್ಟಣೆಗೆ ಉಕ್ಕಿನ ಮೇಲ್ಸೇತುವೆಯೊಂದೇ ಅಲ್ಲ, ಯಾವುದೇ ಮೇಲ್ಸೇತುವೆ ಪರಿಹಾರ ಅಥವಾ ಪರ್ಯಾಯ ವ್ಯವಸ್ಥೆ ಆಗಲಾರದು. ಸಮರ್ಥ ಸಾರ್ವಜನಿಕ ಸಾರಿಗೆಯೊಂದೇ ಶಾಶ್ವತ ಪರಿಹಾರ. 

Advertisement

ನಗರದ ವಾಹನದಟ್ಟಣೆ ಸಮಸ್ಯೆ ನಿವಾರಣೆಗೆ ಯಾವುದೇ ಪ್ರಕಾರದ ಮೇಲ್ಸೇತುವೆಗಳನ್ನು ನಿರ್ಮಿಸುವುದೇ ತಪ್ಪು. ಯಾಕೆಂದರೆ, ಮೇಲ್ಸೇತುವೆ ಮುಗಿಯುವ ಜಾಗದಿಂದಲೇ ವಾಹನದಟ್ಟಣೆ ಶುರುವಾಗುತ್ತದೆ. ಅಷ್ಟಕ್ಕೂ ಹೆಚ್ಚು-ಕಡಿಮೆ ಈಗಾಗಲೇ 200 ಮೇಲ್ಸೇತುವೆಗಳಿವೆ. ಈಗ ಅದರಿಂದ ಸಮಸ್ಯೆ ಬಗೆಹರಿದಿದೆಯೇ? ಇಲ್ಲ.

ಹೀಗಿರುವಾಗ ಅಂತಹದ್ದೇ ಮತ್ತೂಂದು ಮೇಲ್ಸೇತುವೆ ಸಮಸ್ಯೆಗೆ ಪರಿಹಾರ ಆಗದು. ಬೆಂಗಳೂರಿಗೆ ಬಂದು-ಹೋಗುವ ಮಾರ್ಗಗಳಲ್ಲಿ ಮಾತ್ರ ಈ ಸೇತುವೆಗಳಿರಬೇಕು. ಸರ್ಕಾರ ಸುಮಾರು ಎರಡು ಸಾವಿರ ಕೋಟಿ ರೂ. ವೆಚ್ಚದಲ್ಲಿ ಉಕ್ಕಿನ ಸೇತುವೆ ನಿರ್ಮಿಸಲು ಉದ್ದೇಶಿಸಿತ್ತು. ಅದೇ ಹಣದಲ್ಲಿ 2,500 ವೋಲ್ವೊ ಬಸ್‌ಗಳನ್ನು ಖರೀದಿಸಬಹುದು. ಒಂದು ಬಸ್‌ ದಿನಕ್ಕೆ ಹತ್ತು ಟ್ರಿಪ್‌ಗ್ಳು ಕಾರ್ಯಾಚರಣೆ ಮಾಡಿದರೂ ಒಂದು ಬಸ್‌ನಲ್ಲಿ 50 ಜನ ಸಂಚರಿಸುವುದರಿಂದ 12 ಲಕ್ಷ ಜನ ಈ ಬಸ್‌ಗಳಲ್ಲಿ ಸಂಚರಿಸಿದಂತಾಗುತ್ತದೆ. ಇದು ಆ ಮಾರ್ಗದಲ್ಲಿ ಮಾಡಬಹುದಾದ ತಕ್ಷಣದ ಪರ್ಯಾಯ.  

ಈಗಾಗಲೇ ಇರುವ ಬಿಎಂಟಿಸಿ ಬಸ್‌ಗಳಲ್ಲಿ ಬಹುತೇಕರು ಪ್ರಯಾಣಿಸುತ್ತಿಲ್ಲ ಎಂಬ ಪ್ರಶ್ನೆ ಉದ್ಭವಿಸಬಹುದು. ಆದರೆ ಮುಂಬೈ, ದೆಹಲಿಯಲ್ಲಿ ಸಾಧ್ಯವಾಗಿದ್ದು, ನಮ್ಮಲ್ಲಿ ಯಾಕೆ ಆಗುತ್ತಿಲ್ಲ? ಇದಕ್ಕೆ ಸಕಾಲದಲ್ಲಿ ಬಸ್‌ಗಳು ಬಾರದಿರುವುದು, ಬಸ್‌ಗಳ ಸೇವೆ ಕಡಿಮೆ ಇರುವುದು ಸೇರಿದಂತೆ ಹಲವು ಕಾರಣಗಳಿರಬಹುದು. ಇಂತಹ ಅಂಶಗಳನ್ನು ಗುರುತಿಸಿ ಬಗೆಹರಿಸಬೇಕು. ಜತೆಗೆ ಮೆಟ್ರೋ ರೈಲು ವ್ಯವಸ್ಥೆಯನ್ನು ಹೆಚ್ಚು ಪ್ರೋತ್ಸಾಹಿಸಬೇಕು. 

ನಗರದಲ್ಲಿ ಪ್ರಸ್ತುತ 66 ಲಕ್ಷ ವಾಹನಗಳಿವೆ. ಇವುಗಳ ಸಂಖ್ಯೆ ವಾರ್ಷಿಕ ಶೇ. 7ರಷ್ಟು ಏರಿಕೆಯಾಗುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲಿ ಇದು ದುಪ್ಪಟ್ಟಾಗುತ್ತದೆ. ಆದ್ದರಿಂದ ಈ ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕು. “ವಾಹನಗಳ ಕೋಟಾ ವ್ಯವಸ್ಥೆ’ ಜಾರಿಗೊಳಿಸಬೇಕು. ಅಂದರೆ ವರ್ಷಕ್ಕೆ ಇಂತಿಷ್ಟೇ ವಾಹನಗಳು ಹೊಸದಾಗಿ ರಸ್ತೆಗಿಳಿಯುವಂತಾಗಬೇಕು. ಈ ವಾಹನಗಳ ಪರವಾನಗಿಯನ್ನೂ ಹರಾಜು ಪ್ರಕ್ರಿಯೆಯಲ್ಲಿ ಹಂಚಿಕೆ ಮಾಡಬೇಕು. ಅದರಿಂದ ಬರುವ ಹಣವನ್ನು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ವಿನಿಯೋಗಿಸಬೇಕು. 

Advertisement

ಚಾಲುಕ್ಯ ವೃತ್ತ-ಹೆಬ್ಟಾಳ ಸೇರಿದಂತೆ ನಗರದಲ್ಲಿ ಹೆಚ್ಚು ವಾಹನದಟ್ಟಣೆ ಇರುವ ಮಾರ್ಗಗಳನ್ನು ಗುರುತಿಸಬೇಕು. ಈ ಮಾರ್ಗಗಳಲ್ಲಿ “ಪೀಕ್‌ ಅವರ್‌’ನಲ್ಲಿ ಪ್ರವೇಶಿಸುವ ಪ್ರತಿ ಕಾರಿನಲ್ಲಿ ನಾಲ್ಕು ಜನರಿಗಿಂತ ಕಡಿಮೆ ಜನ ಇದ್ದರೆ, ಅಂತಹ ವಾಹನಕ್ಕೆ ತೆರಿಗೆ ವಿಧಿಸಬೇಕು. ಈ ತೆರಿಗೆ ಹಣವನ್ನೂ ವಿವಿಧ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದ ಯೋಜನೆಗಳಿಗೆ ಬಳಸಬೇಕು. ಸಿಂಗಪುರ ಸೇರಿದಂತೆ ಹಲವು ದೇಶಗಳಲ್ಲಿ ಇದೇ ವ್ಯವಸ್ಥೆ ಇದೆ.  

ಅಲ್ಲದೆ, 66 ಲಕ್ಷ ವಾಹನಗಳಲ್ಲಿ ಶೇ. 70ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿವೆ. ಇದಕ್ಕೆ ಮುಖ್ಯಕಾರಣ ಈ ವಾಹನಗಳಿಗೆ ಸುಲಭವಾಗಿ ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ. ಮುಂದಿನ ದಿನಗಳಲ್ಲಿ ಈ ದ್ವಿಚಕ್ರ ವಾಹನಗಳ ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಬೇಕು. ಈ ಮೂಲಕ ಬಂದ ಹಣವನ್ನೂ ಸಾರ್ವಜನಿಕ ಸಾರಿಗೆಗೆ ವಿನಿಯೋಗಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next