Advertisement

ಪರಭಾಷೆ ದಾಳಿ ಸಮರ್ಥವಾಗಿ ಹಿಮ್ಮೆಟಿಸಿ: ಪಾಟೀಲ

08:15 PM Nov 02, 2021 | Team Udayavani |

ಗದಗ: ಆಧುನಿಕ ಶಿಕ್ಷಣದಿಂದ ಕನ್ನಡ ಕಲಿಕೆಯ ಬಗ್ಗೆ ಮಕ್ಕಳಲ್ಲಿ ಕನ್ನಡದ ಬಗ್ಗೆ ಆಸಕ್ತಿ ಹೆಚ್ಚಿಸಲು ಪಾಲಕರು ಮತ್ತು ಶಿಕ್ಷಕರು ಒಟ್ಟಾಗಿ ಪ್ರಯತ್ನಿಸಬೇಕು. ಕರ್ನಾಟಕ ರಾಜ್ಯೋತ್ಸವ ಆಚರಣೆ ಕೇವಲ ನ. 1ಕ್ಕೆ ಮಾತ್ರ ಸೀಮಿತವಾಗದೇ, ನಿತ್ಯೋತ್ಸವವಾಗಬೇ ಕು ಎಂದು ಲೋಕೊಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಅಭಿಪ್ರಾಯಪಟ್ಟರು.

Advertisement

ನಗರದ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಪ್ರಯುಕ್ತ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕನ್ನಡ ಭಾಷೆ ಸಮೃದ್ಧವಾಗಿದೆ ಎಂದು ಕೈ ಕಟ್ಟಿ ಕುಳಿತುಕೊಳ್ಳಬಾರದು. ಭಾಷಾಭಿಮಾನದ
ಮೂಲಕ ಅನ್ಯ ಭಾಷೆಗಳ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನ್ನಡಕ್ಕಾಗಿ ನಾವು ಮಾತಾಡ್‌ ಮಾತಾಡ ಕನ್ನಡ ಎಂಬ ವಿಶೇಷ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಕನ್ನಡ ಉಳಿಸಿ ಬೆಳೆಸಲು ಹೊಸ ಸಂಚಲನ ಮೂಡಿಸುತ್ತಿರುವುದು ಅಭಿನಂದನಾರ್ಹ. ಕುವೆಂಪು ಅವರು ಹೇಳಿದಂತೆ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸುವ ಸಂಕಲ್ಪ ಮಾಡಬೇಕೆಂದು ಹೇಳಿದರು.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಗದುಗಿನ ಹುಯಿಲಗೋಳ ನಾರಾಯಣರಾವ್‌ ಕನಸು ಕಂಡಂತೆ 1956, ನ. 1ರಂದು ರಾಜ್ಯದ ಏಕೀಕರಣವಾಗಿ ರಾಜ್ಯೋತ್ಸವ ಆಚರಿಸುವಂತಾಯಿತು.

ನಾಡಿನ ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಿಗೆ ಜಿಲ್ಲೆಯ ಕೊಡುಗೆ ಅಪಾರ. ಗದುಗಿನ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಎತ್ತರಿಸಿದ ಹುಯಿಲಗೋಳ್‌ ನಾರಾಯಣರಾವ್‌, ಡಾ| ಎಂ.ಎಸ್‌. ಸುಂಖಾಪುರ, ಪ್ರೊ| ಕೀರ್ತಿನಾಥ ಕುರ್ತಕೊಟಿ, ಡಾ| ಚನ್ನವೀರ ಕಣವಿ, ಡಾ| ಕೆ.ಎಚ್‌. ಕುಲಕರ್ಣಿ, ಮಾಧವ  ಕುಲಕರ್ಣಿ, ಡಾ| ಎಚ್‌.ಎನ್‌. ಹೂಗಾರ, ಭಾರತ ರತ್ನ ಭೀಮಸೇನ ಜೋಶಿ, ಸಂಗೀತ  ದಿಗ್ಗಜ ಪಂಚಾಕ್ಷರಿ ಗವಾಯಿಗಳು, ಡಾ| ಪುಟ್ಟರಾಜ ಗವಾಯಿಗಳು, ಕ್ರಿಕೆಟಿಗ ಸುನೀಲ ಜೋಶಿ ಸೇರಿದಂತೆ ಅನೇಕ ಸಾಧಕರು ಗದುಗಿನ ಹೆಮ್ಮೆ. ಸಂಘ ಸಂಸ್ಥೆಗಳ ವಿಭಾಗದಲ್ಲಿ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳ ಶಾಲೆಗೆ ಸ್ವಾತಂತ್ರೊತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಸಾವಿತ್ರಿ ಗೌಡ್ರ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಬಂದಿದ್ದು ಅಭಿನಂದನಾರ್ಹ ಎಂದರು. ಕೃಷಿ
ಸಮ್ಮಾನ ನಿಧಿ  ಯೋಜನೆಯಡಿ ಜಿಲ್ಲೆಯ 1,31,047 ರೈತರ ಖಾತೆಗಳಿಗೆ ಅಂದಾಜು 53 ಕೋಟಿ ರೂ. ಸಂದಾಯ ಮಾಡಲಾಗಿದೆ. ಬೆಳೆ ವಿಮೆಗೆ ನೋಂದಾಯಿಸಿದ 52,400 ರೈತರಿಗೆ 97 ಕೋಟಿ ರೂ. ವಿಮೆ ಮಂಜೂರಾಗಿದೆ.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಅಮೃತ ಗ್ರಾಪಂ ಯೋಜನೆಯಡಿ ಜಿಲ್ಲೆಯ 14 ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದೆ. ಲೋಕೊಪಯೋಗಿ ಇಲಾಖೆಯಿಂದ 21-22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 96 ಕಾಮಗಾರಿಗಳಿಗೆ 11,517 ಲಕ್ಷ ಅಂದಾಜು ಮೊತ್ತದ ಕಾಮಗಾರಿಗಳು ಮಂಜೂರಾಗಿವೆ. ಅದರಲ್ಲಿ 10 ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿಗಳು ಭರದಿಂದ ಸಾಗಿವೆ ಎಂದು ಸಚಿವ ಸಿ.ಸಿ. ಪಾಟೀಲ ವಿವರಿಸಿದರು.

Advertisement

ಇದೇ ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕ ಎಚ್‌. ಕೆ.ಪಾಟೀಲ, ವಿಪ ಸದಸ್ಯ ಎಸ್‌.ವಿ. ಸಂಕನೂರ, ಸಂಗಮೇಶ ದುಂದೂರ ಇತರರಿದ್ದರು.

ಮೆರವಣಿಗೆ
ಇದಕ್ಕೂ ಮುನ್ನ ಬೆಳಗ್ಗೆ 8ಕ್ಕೆ ಇಲ್ಲಿನ ನಗರಸಭೆ ಪಪೂ ಕಾಲೇಜು ಆವರಣದಲ್ಲಿ ಕನ್ನಡಾಂಬೆ ಪ್ರತಿಮೆಗೆ ಸಚಿವರಾದ ಸಿ.ಸಿ. ಪಾಟೀಲ ಅವರು ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಇಲ್ಲಿನ ಗಾಂಧಿ  ಸರ್ಕಲ್‌, ರೋಟರಿ ಸರ್ಕಲ್‌,
ಬಸವೇಶ್ವರ ಶಾಲೆ, ವೆಂಕಟೇಶ ಟಾಕೀಸ್‌ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ತಾಯಿ ಕನ್ನಡಾಂಬೆ ಪ್ರತಿಮೆ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next