Advertisement

ಹುಳುಬಾಧೆಯಿಂದ ಬೆಳೆನಷ್ಟ-ಸೂಕ್ತ ಪರಿಹಾರಕ್ಕೆ ಯತ್ನ

02:30 PM Oct 05, 2017 | Team Udayavani |

ದಾವಣಗೆರೆ: ಸೈನಿಕ ಹುಳು ಬಾಧೆಯಿಂದ ಹಾನಿಗೊಳಗಾಗಿರುವ ಮೆಳ್ಳೆಕಟ್ಟೆ, ಅಣಜಿ, ಹುಲಿಕಟ್ಟೆ, ಹೆಮ್ಮನಬೇತೂರು, ಗಾಂಧಿನಗರದ ರೈತರ ಹೊಲಗಳಿಗೆ ಬುಧವಾರ ಸಂಸದ ಜಿ.ಎಂ. ಸಿದ್ದೇಶ್ವರ್‌ ಭೇಟಿ ನೀಡಿ, ಪರಿಶೀಲಿಸಿ, ಸೂಕ್ತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

Advertisement

ಪ್ರಕೃತಿಯ ಮುನಿಸಿಗೆ ಯಾರೂ ಕೂಡ ಹೊಣೆಯಲ್ಲ. ಕೈಗೆ ಬಂದ ಮೆಕ್ಕೆಜೋಳ ಬೆಳೆಗೆ ಅನಿರೀಕ್ಷಿತ ಕೀಟಗಳ ಹಾವಳಿ ಯಾರೂ ಕೂಡ ಕಲ್ಪನೆ ಮಾಡಿಕೊಂಡಿರಲಿಲ್ಲ. ರಾತ್ರೋ ರಾತ್ರಿ ಸೈನಿಕ ಹುಳಗಳ ದಾಳಿ ವಿಪರೀತ ನಷ್ಟ ಉಂಟು ಮಾಡಿದೆ. ಮನೆಯಲ್ಲಿ ದುಡಿಯುವ ಮಗನನ್ನು ಕಳೆದುಕೊಂಡಷ್ಟೇ ನೋವು ಮೆಕ್ಕೆಜೋಳದ ಬೆಳೆ ಕಳೆದುಕೊಂಡ ರೈತರಿಗೆ ಆಗಿದೆ. ನಾನೂ ಕೂಡ ರೈತನಾಗಿರುವುದರಿಂದ ರೈತರ ಕಷ್ಟ ಅರ್ಥಮಾಡಿಕೊಳ್ಳಬಲ್ಲೆ. ಯಾವ ರೈತರು ಕೂಡ ಧೃತಿಗೆಡುವ ಅವಶ್ಯಕತೆ ಇಲ್ಲ ಎಂದು ಅವರು ರೈತರಿಗೆ ಧೈರ್ಯ ತುಂಬಿದರು.

ಬೆಳೆ ಕಟಾವು ಆಧರಿಸಿ ಸೂಕ್ತ ಪರಿಹಾರ ದೊರಕಿಸಿಕೊಡುವ ಸರ್ವ ಪ್ರಯತ್ನ ಮಾಡುತ್ತೇವೆ. ಜಿಲ್ಲೆಯ ಎಲ್ಲಾ ಮಾಜಿ ಶಾಸಕರು ಒಟ್ಟುಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಕೃಷ್ಣ ಭೈರೇಗೌಡರನ್ನ ಭೇಟಿ ಮಾಡಿ ಹಾನಿಗೊಳಗಾದ ರೈತರ ಬವಣೆ ವಿವರಿಸಿ, ಸೂಕ್ತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಬೆಳೆ ಕಟಾವಿನ ಸಂದರ್ಭದಲ್ಲಿ ಕೃಷಿ, ಸಾಂಖೀಕ, ಕಂದಾಯ ಇಲಾಖೆ ಅಧಿಕಾರಿಗಳು ಖುದ್ದು ರೈತರ ಜಮೀನುಗಳಿಗೆ ಭೇಟಿ ನೀಡಿ ಸರಿಯಾದ ರೀತಿಯಲ್ಲಿ ವರದಿ ನೀಡಬೇಕು. ಬಹುತೇಕ ಅಧಿ ಕಾರಿಗಳೂ ಕೂಡ ರೈತರ ಮಕ್ಕಳಾಗಿರುವುದರಿಂದ ರೈತರ ಸಂಕಷ್ಟ ಅರ್ಥಮಾಡಿಕೊಂಡು ಅಧಿಕಾರದ ಜೊತೆ ಮಾನವೀಯತೆಯನ್ನೂ ಸಹ ಅಳವಡಿಸಿಕೊಂಡು ವರದಿ ನೀಡುವಂತೆ ಹೇಳಿದರು.

ಸಂಸದರ ಜೊತೆಗಿದ್ದ ಕೃಷಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಗಳು ಸೈನಿಕ ಹುಳುಗಳ ದಾಳಿ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಮಾಹಿತಿ ನೀಡಿದರು. ಮಾಜಿ ಶಾಸಕರಾದ ಎಸ್‌.ವಿ. ರಾಮಚಂದ್ರಪ್ಪ, ಎಂ. ಬಸವರಾಜನಾಯ್ಕ, ಜಿಲ್ಲಾ ಪಂಚಾಯತಿ ಸದಸ್ಯರಾದ ಕೆಂಚಮ್ಮನಹಳ್ಳಿ ಮಂಜುನಾಥ್‌, ಸವಿತಾ ಕಲ್ಲೇಶಪ್ಪ, ಮಾಜಿ ಸದಸ್ಯ ಸೊಕ್ಕೆ ನಾಗರಾಜ್‌, ತಾಲೂಕು ಪಂಚಾಯತಿ ಸದಸ್ಯ ಆಲೂರು ನಿಂಗರಾಜ್‌, ಮುಖಂಡರಾದ ಎಚ್‌. ಆನಂದಪ್ಪ, ಪ್ರೊ. ಎನ್‌. ಲಿಂಗಣ್ಣ, ಎಚ್‌.ಕೆ. ಬಸವರಾಜ್‌, ಸೋಮನಹಳ್ಳಿ ಸೀನಣ್ಣ, ಮೆಳ್ಳೆಕಟ್ಟೆ ಹನುಮಂತಪ್ಪ ಇತರರು ಇದ್ದರು.

ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ ಇತರರಿದ್ದರು.

Advertisement

ಕೆರೆ ಕೋಡಿ ಪರಿಶೀಲನೆ
ಸಂಸದ ಸಿದ್ದೇಶ್ವರ್‌ ಜಗಳೂರು ತಾಲೂಕಿನ ಚಿಕ್ಕಅರಕೆರೆ ಗ್ರಾಮದ ಕೆರೆಯ ಕೋಡಿ ಪರಿಶೀಲಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ವತಿಯಿಂದ 1.5 ಕೋಟಿ ವೆಚ್ಚದಲ್ಲಿ ಕೆರೆ ಕೋಡಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಸಣ್ಣ ನೀರಾವರಿ ಇಲಾಖೆಯ ಅಧಿ ಕಾರಿಗಳ ನಿರ್ಲಕ್ಷತೆಯಿಂದಾಗಿ ಕಾಮಗಾರಿ ಅತ್ಯಂತ ಕಳಪೆಯಾಗಿದೆ. ಕಳೆದ 15 ದಿನದಲ್ಲಿ ಮೂರು ಬಾರಿ ತುಂಬಿದ ಕೆರೆಯ ನೀರೆಲ್ಲಾ ಬಸಿದು ಖಾಲಿಯಾಗಿದೆ, ಕೆರೆ ತುಂಬುವುದೇ ಕಷ್ಟವಾಗಿರುವ ಕಾಲದಲ್ಲಿ ಗುತ್ತಿಗೆದಾರರ ಮತ್ತು ಸಣ್ಣ ನೀರಾವರಿ ಇಲಾಖೆಯ ಅ ಧಿಕಾರಿಗಳ ಬೇಜವಾರಿಯಿಂದಾಗಿ ರೈತರಿಗೆ ದ್ರೋಹ ಬಗೆದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಸೋಮಶೇಖರ್‌ರವರಿಗೆ ದೂರವಾಣಿ ಮುಖಾಂತರ ಮಾತನಾಡಿದ ಸಂಸದ ಸಿದ್ದೇಶ್ವರ್‌, ಕೆರೆ ಕೋಡಿ ಕಾಮಗಾರಿಯನ್ನು ಕೂಡಲೇ ಪರಿಶೀಲಿಸಿ ಆಗಿರುವ ಲೋಪವನ್ನ ಸರಿಪಡಿಸುವುದರೊಂದಿಗೆ ಗುತ್ತಿಗೆದಾರರಿಗೆ ಯಾವುದೇ ಕಾರಣಕ್ಕೂ ಬಿಲ್‌ ನೀಡದಂತೆ ತಾಕೀತು ಮಾಡಿದರು.

ಗಾಂಧಿನಗರಕ್ಕೆ ಭೇಟಿ
ದಾವಣಗೆರೆ ತಾಲೂಕಿನ ಗಾಂಧಿ ನಗರದಲ್ಲಿ ಕಳೆದ 4-5 ತಿಂಗಳ ಹಿಂದೆ ಉಂಟಾಗಿರುವ ಭೂಕುಸಿತ ಪ್ರದೇಶವನ್ನು ಸಂಸದ ಜಿ.ಎಂ. ಸಿದ್ದೇಶ್ವರ್‌ ವೀಕ್ಷಿಸಿದರು. ಭೂಕುಸಿತದಿಂದ ಗ್ರಾಮದಲ್ಲಿ ಸಾಕಷ್ಟು ಆಳದ ಗುಂಡಿಗಳು ಉಂಟಾಗಿದ್ದು, ಮನೆಗಳು ಬಿರುಕುಬಿಟ್ಟಿವೆ, ಜಗಳೂರು-ದಾವಣಗೆರೆ ರಸ್ತೆ ಸುಮಾರು 100 ಮೀಟರ್‌ನಷ್ಟು ಕುಸಿದಿದೆ. ಸಾಕಷ್ಟು ಜನರು ಅಫಘಾತಕ್ಕೊಳಗಾಗಿದ್ದಾರೆ. ವಿಷಯ ಹೀಗಿದ್ದರೂ ಕೂಡ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಸಂಸದರಿಗೆ ತಿಳಿಸಿದರು. ಕೂಡಲೇ ದಾವಣಗೆರೆ ತಹಶೀಲ್ದಾರರಿಗೆ ದೂರವಾಣಿ ಮುಖಾಂತರ ಮಾತನಾಡಿದ ಸಂಸದರು ಗುರುವಾರೇ ಗಾಂಧಿ ನಗರಕ್ಕೆ ಭೇಟಿ ನೀಡಿ ಆಗಿರುವ ಭೂಕುಸಿತದ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next