ಮಂಗಳೂರು: ಖಾಸಗಿ ಬಸ್‌ಗಳು ಮತ್ತೆ ತಮ್ಮ ಹಳೇ ಪ್ರವೃತ್ತಿ ಮುಂದುವರಿಸಿದ್ದು, ದೀಪಾವಳಿ ಹಬ್ಬದ ನೆಪದಲ್ಲಿ ಪ್ರಯಾಣ ದರವನ್ನು ಎರಡು ಪಟ್ಟು ಹೆಚ್ಚು ಮಾಡಲಾಗಿದೆ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ದೂರದ ಊರು ಗಳಲ್ಲಿದ್ದ ಮಂದಿ ಹಬ್ಬಕ್ಕೆಂದು ತಮ್ಮ ಊರುಗಳಿಗೆ ಆಗಮಿಸುವುದು ಸಾಮಾನ್ಯ. ಈಗ ಸಾಮಾನ್ಯ ದಿನಕ್ಕಿಂತ ಎರಡು ಪಟ್ಟು ಹೆಚ್ಚುವರಿ ಹಣ ನೀಡಿ ಬಸ್‌ಗಳಲ್ಲಿ ಬರಬೇಕಾದ ಅನಿವಾರ್ಯ ಎದುರಾಗಿದೆ.
ಖಾಸಗಿ ಬಸ್‌ಗಳಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಸಾಮಾನ್ಯ ದಿನಗಳಲ್ಲಿ ಒಬ್ಬರಿಗೆ 1,000 ರೂ.ನಿಂದ 2,000 ರೂ. ಇರುತ್ತದೆ. ಈಗ ದೀಪಾವಳಿ ಹಬ್ಬದ ನೆಪದಲ್ಲಿ ಈ ದರ 3,000 ರೂ.ಗೆ ಏರಿಕೆಯಾಗಿದೆ.
ಹಬ್ಬಕ್ಕೆಂದು ಊರಿಗೆ ಆಗಮಿಸಿದ ಮಂದಿ ರಜಾ ಕಳೆದು ಸಾಮಾನ್ಯ ವಾಗಿ ಅ.30ರಂದು (ರವಿವಾರ) ಮತ್ತೆ ಕಾರ್ಯ ಸ್ಥಳಗಳಿಗೆ ತೆರಳುತ್ತಾರೆ. ಈ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್‌ಗಳಲ್ಲಿ ಈಗಾಗಲೇ ಬಹುತೇಕ ಸೀಟುಗಳು ಬುಕ್ಕಿಂಗ್ ಆಗಿವೆ. ಖಾಸಗಿ ಬಸ್‌ನಲ್ಲಿ ಅ.30ರಂದು ಮಂಗಳೂರಿನಿಂದ ಬೆಂಗಳೂರಿಗೆ ಗರಿಷ್ಠ ದರ 3,000 ರೂ. ಇದೆ.
ಹೆಚ್ಚುವರಿ ಬಸ್: ಮಂಗಳೂರಿನಿಂದ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆಗಳಿಗೆ ತೆರಳಲು ವಾರಾಂತ್ಯದ ದಿನಗಳಲ್ಲಿ ಹೆಚ್ಚುವರಿ ಬಸ್ ಕಾರ್ಯಾಚರಣೆಗೆ ಕೆಎಸ್ಸಾರ್ಟಿಸಿ ನಿರ್ಧರಿಸಿದೆ. ಅದರಂತೆ ಪ್ರಯಾಣಿಕರ ಅಗತ್ಯತೆಗೆ ಅನುಗುಣವಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಅದೇ ರೀತಿ, ಹೆಚ್ಚುವರಿ ಖಾಸಗಿ ಬಸ್‌ಗಳೂ ಈಗಾಗಲೇ ಬುಕ್ಕಿಂಗ್ ಲಿಸ್ಟ್‌ನಲ್ಲಿವೆ.